ಈ ಸಂಜೆ

798k Followers

ಆ.30ರಂದು 1ರಿಂದ 8ನೆ ತರಗತಿ ಆರಂಭ ಕುರಿತು ಸಭೆ

26 Aug 2021.12:34 PM

ಹುಬ್ಬಳ್ಳಿ, ಆ.26- ಒಂದರಿಂದ 8ನೆ ತರಗತಿ ಶಾಲೆಗಳನ್ನು ಆರಂಭಿಸುವ ಕುರಿತು ಆ.30ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.23ರಿಂದ 9ರಿಂದ 12ನೆ ತರಗತಿಗಳನ್ನು ಆರಂಭಿಸಲಾಗಿದ್ದು, ಅದರ ಸಾಧಕ-ಬಾಧಕಗಳನ್ನು ಅವಲೋಕಿಸಿ 1ರಿಂದ 8ನೆ ತರಗತಿಗಳನ್ನು ಆರಂಭಿಸುವ ಕುರಿತು ಚಿಂತನೆ ಮಾಡಲಾಗುವುದು ಎಂದರು.

ಉನ್ನತ ಮಟ್ಟದ ತಜ್ಞರ ಸಮಿತಿಯ ಡಾ. ದೇವಿಪ್ರಸಾದ್ ಶೆಟ್ಟಿ ಅವರು 6 ರಿಂದ 8ನೆ ತರಗತಿ ಆರಂಭಿಸಬಹುದೆಂದು ಸಲಹೆ ನೀಡಿದ್ದಾರೆ. ಜತೆಗೆ ಕಳೆದ ನಾಲ್ಕು ದಿನಗಳಿಂದ ಆರಂಭವಾದ ಶಾಲೆಗಳ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರಿಂದ ಉತ್ತಮ ಸ್ಪಂದನೆ ಕಂಡುಬಂದಿದೆ. ಇದರಿಂದ ಶಾಲೆಗಳನ್ನು ಆರಂಭಿಸಬೇಕೆಂಬ ಆಲೋಚನೆ ವ್ಯಕ್ತವಾಗುತ್ತಿದೆ. ಆದರೆ, ತಾಂತ್ರಿಕ ಸಮಿತಿಯ ವರದಿ ಮೇಲೆ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಕಳೆದ ಒಂದು ವರ್ಷದಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಪುನಃ ಶಿಕ್ಷಣ ನೀಡುವ ಉದ್ದೇಶದಿಂದ 1ರಿಂದ 8ನೆ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಉತ್ಸುಕವಾಗಿದೆ. ಮಕ್ಕಳ ತಜ್ಞರು ಹಾಗೂ ಶಿಕ್ಷಣ ತಜ್ಞರು ಸೇರಿದಂತೆ ಎಲ್ಲರೂ ಕೋವಿಡ್ ಮೂರನೆ ಅಲೆಯು ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಆಧಾರದ ಮೇಲೆ ಶಾಲೆಗಳನ್ನು ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಆರಂಭಿಸಲಾಗುವುದು. ಅಕಸ್ಮಾತ್ ಮೂರನೆ ಅಲೆ ವ್ಯಾಪಿಸಿದರೆ ಶಾಲೆಗಳನ್ನು ಬಂದ್ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದರು. ಹೆಚ್ಚಿನ ಶಿಕ್ಷಕರಿಗೆ ಅನುಕೂಲವಾಗುವಂತೆ ಶಿಕ್ಷಕರ ವರ್ಗಾವಣೆ ನಡೆಸಲಾಗುತ್ತಿದೆ. ಸೆ.5 ರಿಂದ ಕೌನ್ಸಲಿಂಗ್ ಆರಂಭವಾಗಲಿದ್ದು, ಆ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಶೀಲಿಸಿ ಸರಿಪಡಿಸಲಾಗುವುದು. ಇದರಿಂದ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಗೆ ಅನುಕೂಲ ಎಂದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: eesanje

#Hashtags