ರಾಷ್ಟ್ರೀಯ ಸುದ್ದಿ
ಛತ್ತೀಸ್‍ಗಢ ಪೊಲೀಸರಿಗೆ ಶರಣಾದ 24 ನಕ್ಸಲರು

ದಂತೇವಾಡ, ಜ.27- ಬಂಡಾಯ ಪೀಡಿತ ದಂತೇವಾಡ ಹನ್ನೆರಡು ಮಂದಿ ಮಹಿಳೆಯರುವ ಸೇರಿದಂತೆ 24 ನಕ್ಸಲರು ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ. ಇಲ್ಲಿನ ದಕ್ಷಿಣ ಬಸ್ತಾರ್ ವಲಯದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಎಲ್ಲ 24 ಮಂದಿ ಬಂಡುಕೋರರು ಗಣರಾಜ್ಯೋತ್ಸವ ದಿನದಂದು ಸ್ಥಳೀಯ ಪೊಲೀಸರ ಮುಂದೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ.
ಸಾಮಾಜಿಕ ಜೀವನ ಸಾಗಿಸಲು ಒಪ್ಪಿಕೊಂಡು ಶರಣಾಗಿದ್ದಾರೆ. ಜಿಲ್ಲಾ ಪೊಲೀಸರು ಕರೆ ನೀಡಿರುವ ಮನೆ ಮತ್ತು ಗ್ರಾಮ ವಾಪಸಾತಿಯ ಲೊನ್ ವರತ್ತು ಪುನರ್ವಸತಿ ಅಭಿಯಾನದಿಂದ ಪ್ರೇರಿತರಾಗಿ ಶರಣಾಗಿದ್ದಾರೆ ಎಂದು ದಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
ಶರಣಾದ ನಕ್ಸಲ್ ನಾಯಕರಲ್ಲಿ ಮಾವೋವಾದಿ ಚಿಕ್ಪಾಲ್-ಜಂಗಲೆಪಾರ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್‍ನ ಮುಖ್ಯಸ್ಥ ಆಯ್ತು ಮುಚಾಕಿ (31), ಚಿಕ್ಪಾಲ್ -ಸ್ಕೂಲಪಾರ ಡಿಎಕೆಎಂಎಸ್ ಮುಖ್ಯಸ್ಥ ಬಾಮನ್ ಡೆಂಗಾ ಸೋಧಿ (40) ಹಾಗೂ ಕಾಮ್ಲಿ ಮದ್ಕಾಮ್ (32) ಅವರ ಸೇರಿದ್ದರು. ಈ ಮೂವರ ಮೇಲೆ ಸರ್ಕಾರ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಿದೆ.
ಶರಣಾಗತಿ ಪಡೆದ ಎಲ್ಲರೂ ಮಾವೋವಾದಿ ಸಿದ್ಧಾಂತ ನಂಬಿಕೆಯಿಲ್ಲ. ಇದರಲ್ಲಿ ಎಳ್ಳಷ್ಟು ಹುರುಳಿಲ್ಲ ಎಂದಿದ್ದಲ್ಲದೆ, ಜಿಲ್ಲಾ ಪೊಲೀಸರು ಕರೆ ನೀಡಿರುವ ಮನೆ ಮತ್ತು ಗ್ರಾಮ ವಾಪಸಾತಿ ಪುನರ್ವಸತಿ ಅಭಿಯಾನದಿಂದ ಪ್ರೇರಿತರಾಗಿದ್ದೇವೆ. ಅಲ್ಲದೆ, ಹಿಂಸಾಚಾರ ತೊರೆದು ಸಾಮಾನ್ಯ ಜನರ ಜತೆ ಜೀವಿಸಲು ಹೊರಟಿದ್ದೇವೆ ಎಂದಿದ್ದಾರೆ.
ಶರಣಾದ ಎಲ್ಲರಿಗೂ ತಕ್ಷಣದ ಪರಿಹಾರವಾಗಿ ತಲಾ 10 ಸಾವಿರ ಮತ್ತು ಇತರ ಸವಲತ್ತುಗಳನ್ನು ಶರಣಾಗತಿ ಮತ್ತು ಪುನರ್ವಸತಿ ನೀತಿಯಡಿ ಪರಿಹಾರ ಒದಗಿಸಲಾಗಿದೆ ಎಂದು ಎಸ್ಪಿ ಪಲ್ಲವ ತಿಳಿಸಿದರು.
ಇನ್ನೂ 21 ನಕ್ಸಲರು ತಮ್ಮ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು, ತಲೆಮರೆಸಿಕೊಂಡಿದ್ದಾರೆ. ಅವರನ್ನು ಶರಣಾಗತಿಗೆ ಒಪ್ಪಿಸುವ ಕಾರ್ಯ ನಡೆಯುತ್ತಿದೆ. ಕಳೆದ ವರ್ಷ ಜೂನ್‍ನಲ್ಲಿ ಚಾಲನೆಗೆ ತಂದ ಲೊನ್ ವರತ್ತು ನಿಯಮದಡಿ ಎಲ್ಲ ಕಡೆಗಳಲ್ಲಿ ಪೋಸ್ಟರ್‍ಗಳನ್ನು ಅಂಟಿಸಲಾಗಿದೆ. ಈ ಪ್ರದೇಶದಲ್ಲಿ ನೆಲೆಸಿರುವ ಸುಮಾರು 1600 ನಕ್ಸಲರಲ್ಲಿ ಇದುವರೆಗೆ 272 ನಕ್ಸಲರು ಶರಣಾಗಿದ್ದಾರೆ ಎಂದು ಎಸ್‍ಪಿ ಹೇಳಿದ್ದಾರೆ.