Thursday, 29 Jul, 12.18 pm ಈ ಸಂಜೆ

ರಾಜ್ಯ ಸುದ್ದಿ
ಈ ಬಾರಿ ಶಾಸಕ ರೇಣುಕಾಚಾರ್ಯಗೆ ಮಂತ್ರಿ ಸ್ಥಾನ ಫಿಕ್ಸ್ ..!?

ಬೆಂಗಳೂರು,ಜು.29- ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಧ್ಯಕರ್ನಾಟಕದಿಂದ ನನಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಹಿಂದೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಕ್ಕಿರಲಿಲ್ಲ.ಹೀಗಾಗಿ ಈ ಬಾರಿ ನಮ್ಮ ಜಿಲ್ಲೆಗೆ ಪ್ರಾಶಸ್ತ್ಯ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದರು.

ನಮ್ಮ ಜಿಲ್ಲೆಗೆ ಮಂತ್ರಿ ಸ್ಥಾನ ಕೊಡುವುದರ ಬಗ್ಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನನ್ನೇ ಮಂತ್ರಿ ಮಾಡಿ ಎಂದು ಬೇಡಿಕೆ ಇಟ್ಟಿಲ್ಲ. ಆದರೆ ಪಕ್ಷದ ವರಿಷ್ಠರು ನನಗೆ ಜವಾಬ್ದಾರಿ ವಹಿಸಿದರೆ ಯಾವುದೇ ಹುದ್ದೆ ನಿಭಾಯಿಸಲು ಸಿದ್ದ ಎಂದು ಪರೋಕ್ಷವಾಗಿ ಸಚಿವ ಸ್ಥಾನ ಆಕಾಂಕ್ಷಿ ಎಂಬ ಸುಳಿವು ನೀಡಿದರು. ನಮ್ಮ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೇಳಿದ್ದೇವೆ.

ಮಧ್ಯ ಕರ್ನಾಟಕಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿಯೂ ಇದೇ ಬೇಡಿಕೆಯನ್ನು ಇಟ್ಟಿದ್ದೇವೆ ಎಂದು ತಿಳಿಸಿದರು. ನಾನು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ? ಹಿಂದೆಯೂ ಸಚಿವನಾಗಿ ಕೆಲಸ ಮಾಡಿದ ಅನುಭವವಿದೆ. ನಮ್ಮ ಜಿಲ್ಲೆಯ ಎಲ್ಲ ಶಾಸಕರು ನಿನ್ನೆ ನಮ್ಮ ನಾಯಕರಾದ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದೇವೆ. ಖಂಡಿತವಾಗಿಯೂ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್ ಅವರು ಹಿರಿಯರು, ಅವರು ತ್ಯಾಗ ಮಾಡಿದ್ದಾರೆ ಎಂದು ಹೇಗೆ ಹೇಳಲಿ, ಉಳಿದವರು ಅದೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಮಾಧ್ಯಮದವರು ನನ್ನನ್ನು ಮಾತಿನಲ್ಲಿ ಕಟ್ಟಿಹಾಕಬೇಡಿ ಎಂದು ರೇಣುಕಾಚಾರ್ಯ ಮನವಿ ಮಾಡಿದರು.

ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ನಮ್ಮ ಸಂಪೂರ್ಣ ಸಹಕಾರವಿದೆ. ನಮ್ಮ ಕ್ಷೇತ್ರಗಳಿಗೆ ಸಂಬಂಧಪಟ್ಟ ಅನುದಾನ ಬಿಡುಗಡೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲು ಅವರ ಮನೆಗೆ ಬರುವುದು ತಪ್ಪಲ್ಲ ಎಂದು ಸಮರ್ಥಿಸಿಕೊಂಡರು.

ನಾನು ಯಡಿಯೂರಪ್ಪ ನೆರಳಲ್ಲಿ ಬೆಳೆದವನು. ಎಲ್ಲೋ ಇದ್ದವನನ್ನು ಇಷ್ಟು ಬೆಳೆಸಿರೋದು ನಮ್ಮ ನಾಯಕರು. ಇದನ್ನು ನಾನು ಎದೆ ಮುಟ್ಟಿ ಹೇಳುತ್ತೇನೆ. ಎಂದೆಂದಿಗೂ ಯಡಿಯೂರಪ್ಪ ನಮ್ಮ ನಾಯಕರು ಎಂದು ಗುಣಗಾನ ಮಾಡಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: eesanje
Top