Saturday, 23 Jan, 11.18 pm ಈ ಸಂಜೆ

ರಾಜ್ಯ ಸುದ್ದಿ
ಇನ್ನೂ ತಣ್ಣಗಾಗಿಲ್ಲ ಸಚಿವರ ಅಸಮಾಧಾನ

ಬೆಂಗಳೂರು,ಜ.23- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಷ್ಟೇ ಮನವೊಲಿಸಿದರೂ ಸಚಿವರ ಅಸಮಾಧಾನ ಇನ್ನು ಶಮನವಾಗಿಲ್ಲ. ಏಕೆಂದರೆ ಬೃಹತ್ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚಿಕ್ಕಮಗಳೂರಿನ ಸೆರಾಲ್ ರೆಸಾರ್ಟ್‍ವೊಂದರಲ್ಲಿ ರಹಸ್ಯವಾಗಿ ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ವಿಶೇಷವೆಂದರೆ ನಿನ್ನೆ ರಾತ್ರಿಯಷ್ಟೆ ಬಿಜೆಪಿಯ ನಿಷ್ಠಾವಂತ ಶಾಸಕರು ಸಭೆ ನಡೆಸಿದ್ದರು. ಇದೀಗ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಗೋಪಾಲಯ್ಯ, ಸಿ.ಪಿ.ಯೋಗೇಶ್ವರ್, ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸೇರಿದಂತೆ ಹಲವು ಶಾಸಕರು ಸಭೆ ನಡೆಸಿದ್ದಾರೆ. ರೆಸಾರ್ಟ್‍ಗೆ ತೆರಳುವ ಮುನ್ನ ತಮ್ಮ ಆಪ್ತ ಸಹಾಯಕರು, ಅಂಗರಕ್ಷಕರು ಸೇರಿದಂತೆ ಎಲ್ಲರನ್ನು ಬಿಟ್ಟು ಸಚಿವರು ಮತ್ತು ಶಾಸಕರು ಮಾತ್ರ ಭಾಗಿಯಾಗಿದ್ದರು.

ಎರಡು ದಿನಗಳ ಹಿಂದಷ್ಟೇ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಚಿವ ಸ್ಥಾನ ವಂಚಿತ ಶಾಸಕರು ಸಭೆ ನಡೆಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ , ರಾಜುಗೌಡ ನಾಯಕ್, ಶಂಕರ್ ಪಾಟೀಲ್ ಮುನೇನ ಕೊಪ್ಪ, ಶಿವರಾಜ್ ಪಾಟೀಲ್ ಸೇರಿದಂತೆ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.

ಇದರ ನಡುವೆಯೇ ನಿನ್ನೆಯಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಸಮಾಧಾನಿತ ಸಚಿವರನ್ನು ಕರೆದು ಮಾತನಾಡಿ ಸಂಧಾನ ನಡೆಸಿದ್ದರು. ಇದೀಗ ರಮೇಶ್ ಜಾರಕಿಹೊಳಿ, ಸಚಿವರು ಮತ್ತು ಶಾಸಕರ ಜೊತೆ ಸಭೆ ನಡೆಸಿರುವುದು ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ. ಸಂಪುಟ ವಿಸ್ತರಣೆಯಾದ ನಂತರ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡುವ ವೇಳೆ ಡಾ.ಸುಧಾಕರ್ ಬಳಿಯಿದ್ದ ವೈದ್ಯಕೀಯ ಖಾತೆಯನ್ನು ಹಿಂಪಡೆದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಗೋಪಾಲಯ್ಯ ಅವರ ಖಾತೆಯನ್ನು ಬದಲಾಯಿಸಿ ಅಬಕಾರಿ ಖಾತೆ ನೀಡಿರುವುದರಿಂದ ಅವರು ಕೂಡ ಮುನಿಸಿಕೊಂಡಿದ್ದಾರೆ.
ಇನ್ನು ಎಂ.ಪಿ.ಕುಮಾರಸ್ವಾಮಿ ಸಂಪುಟದಲ್ಲಿ ಸ್ಥಾನ ಕೊಡದಿರುವುದಕ್ಕೆ ಬೇಸರಗೊಂಡಿದ್ದಾರೆ. ಹೀಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವವರ ಅಸಮಾಧಾನ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ರಹಸ್ಯ ಸಭೆ ನಡೆಸುತ್ತಿರುವುದು ಮಹತ್ವದ್ದಾಗಿದೆ.

ಸಭೆಯಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್, ಜೆಡಿಎಸ್‍ನಿಂದ ಬರುವ ವೇಳೆ ನಮಗೆ ಉತ್ತಮ ಖಾತೆಯನ್ನು ನೀಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಆದರೆ ಏಕಾಏಕಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಖಾತೆಗಳನ್ನು ಬದಲಾವಣೆ ಮಾಡಿರುವುದಕ್ಕೆ ತೀವ್ರ ಬೇಸರ ವ್ಯಕ್ತವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಯಡಿಯೂರಪ್ಪ ನಾಯಕತ್ವಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಜಾರಕಿಹೊಳಿ ಹೇಳಿದ್ದರು. ಇದರ ನಡುವೆ ಗೋಪಾಲಯ್ಯ, ಸುಧಾಕರ್, ಯೋಗೀಶ್ವರ್ ಸಭೆ ನಡೆಸಿರುವುದು ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: eesanje
Top