Monday, 03 Sep, 10.26 am ಈ ಸಂಜೆ

ರಾಜ್ಯ ಸುದ್ದಿ
ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ LIVE UPDATES

ಬೆಂಗಳೂರು, ಸೆ.3- ಮೂರು ಮಹಾನಗರ ಪಾಲಿಕೆ, 102 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆಯಾ ತಾಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆಗಳ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಆರಂಭವಾಗಿದೆ. ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಸೇರಿದಂತೆ 102 ನಗರ ಸ್ಥಳೀಯ ಸಂಸ್ಥೆಗಳಿಗೆ ಆ.31ರಂದು ಚುನವಣೆ ನಡೆದಿತ್ತು.

Live Updates :

# ತುಮಕೂರು ಪಾಲಿಕೆ ಅತಂತ್ರ : ಬಿಜೆಪಿಗೆ 12, ಜೆಡಿಎಸ್ 11, ಕಾಂಗ್ರೆಸ್ 9

ತುಮಕೂರು, ಸೆ.3- ತುಮಕೂರು ನಗರಸಭೆಯನ್ನು ಮಹಾನಗರ ಪಾಲಿಕೆಗೆ ಮೇಲ್ದರ್ಜೆಗೇರಿಸಿದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಬಿಜೆಪಿ ಅತಿ ಹೆಚ್ಚು 12 ಸ್ಥಾನಗಳನ್ನು ಪಡೆದರೂ ಅಧಿಕಾರದ ಗದ್ದುಗೆಗೇರಲು ಸಾಧ್ಯವಾಗಿಲ್ಲ. ಒಟ್ಟು 35 ವಾರ್ಡ್‍ಗಳ ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 12, ಜೆಡಿಎಸ್ 11, ಕಾಂಗ್ರೆಸ್ 9 ಹಾಗೂ ಪಕ್ಷೇತರರು 3 ಸ್ಥಾನಗಳನ್ನು ಪಡೆದಿದ್ದಾರೆ. ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು 17 ಸ್ಥಾನಗಳನ್ನು ಪಡೆಯಬೇಕಾಗಿದ್ದು, ಯಾರಿಗೂ ಬಹುಮತ ಬಾರದ ಹಿನ್ನೆಲೆಯಲ್ಲಿ ಇಲ್ಲಿ ಮೈತ್ರಿ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇರುವುದರಿಂದ ಇಲ್ಲಿಯೂ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. [ ]

ತುಮಕೂರು ನಗರ ಸಭೆ ಇದ್ದಾಗಲೂ ಇಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ರಚಿಸಿ ಸರ್ಕಾರ ರಚಿಸಿದ್ದು, ಜಿಲ್ಲೆಯಲ್ಲಿ ಒಟ್ಟು ಮೂರು ಸಚಿವರಿದ್ದು, . ಕಾಂಗ್ರೆಸ್‍ನಿಂದ ಇಬ್ಬರು, ಜೆಡಿಎಸ್‍ನಿಂದ ಒಬ್ಬರು ಸಚಿವರಿದ್ದ ತಮ್ಮ ಪಕ್ಷವನ್ನು ಗೆಲ್ಲಿಸಲು ಅಹರ್ನಿಶಿ ಶ್ರಮಿಸಿದ್ದರು. ಆದರೆ ಮತದಾರ ಪ್ರಭು ಯಾರಿಗೂ ಬಹುಮತ ನೀಡದೆ ಅತಂತ್ರ ಫಲಿತಾಂಶ ನೀಡಿದ್ದಾನೆ. ಮಧುಗಿರಿ ಪುರಸಭೆ ಕಾಂಗ್ರೆಸ್ ಮಾನ ಉಳಿಸಿದರೆ, ಕೊರಟಗೆರೆಯಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿ ತಲುಪಿದೆ. ಮೈತ್ರಿಯಿಂದ ಲಾಭವಾಗುತ್ತದೆ ಎಂದು ನಿರೀಕ್ಷಿಸಿದ್ದ ಕಾಂಗ್ರೆಸ್‍ಗೆ ಜಿಲ್ಲೆಯಲ್ಲಿ ಮುಖಭಂಗವಾಗಿದೆ.
ಪಾಲಿಕೆಯಲ್ಲಿ ಕಾಂಗ್ರೆಸ್ ಗದ್ದುಗೆ ಹಿಡಿಯುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಪರಮೇಶ್ವರ್, ಮಾಜಿ ಶಾಸಕ ರಫೀಕ್ ಅಹ್ಮದ್ ಮತ್ತು ಇತರ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಸಾಕಷ್ಟು ಶ್ರಮಪಟ್ಟಿದ್ದರು. ಆದರೆ ಜನರು 9 ಸ್ಥಾನಕ್ಕೆ ಕಾಂಗ್ರೆಸ್ಸನ್ನು ಸೀಮಿತಗೊಳಿಸಿದ್ದಾರೆ. ಇನ್ನು ಜಿಲ್ಲಾ ಬಿಜೆಪಿ ಉಸ್ತುವಾರಿಯನ್ನು ವಿ.ಸೋಮಣ್ಣ ವಹಿಸಿಕೊಂಡಿದ್ದರು. ಪಾಲಿಕೆಯನ್ನು ಬಿಜೆಪಿ ತೆಕ್ಕೆಗೆ ತರಲು ಸಾಕಷ್ಟು ಶ್ರಮಿಸಿದ್ದರು. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸಿ.ಚೆನ್ನಿಗಪ್ಪ ಮತ್ತು ಗ್ರಾಮಾಂತರ ಕ್ಷೇತ್ರದ ಡಿ.ಸಿ.ಗೌರಿಶಂಕರ್, ಗೋವಿಂದ ರಾಜು ಮತ್ತಿತರ ಘಟಾನುಘಟಿಗಳು ಕೂಡ ಶ್ರಮಿಸಿದ್ದರು. ಒಟ್ಟಾರೆ ಯಾವುದೇ ಪಕ್ಷಕ್ಕೂ ಗದ್ದುಗೆ ಅಲಂಕರಿಸಲು ಸಾಧ್ಯವಾಗಿಲ್ಲ.

ಗೆದ್ದ ಅಭ್ಯರ್ಥಿಗಳು
ಮೊದಲನೇ ವಾರ್ಡ್ ಬಿಜೆಪಿಯ ನಳಿನಿ ಇಂದ್ರಕುಮಾರ್, 2ನೆ ವಾರ್ಡ್ ಬಿಜೆಪಿ ಮಂಜುನಾಥ್, 3ನೆ ವಾರ್ಡ್ ಜೆಡಿಎಸ್ ಲಕ್ಷ್ಮೀ ನರಸಿಂಹರಾಜು, 4ನೇ ವಾರ್ಡ್ ಬಿಜೆಪಿಯ ದೀಪಾಶ್ರೀ ಮಹೇಶ್ ಬಾಬು, 5ನೆ ವಾರ್ಡ್ ಕಾಂಗ್ರೆಸ್ ಮಹೇಶ್, 6ನೆ ವಾರ್ಡ್‍ನ ಬಿಜೆಪಿಯ ವೀಣಾ, 7ರಲ್ಲಿ ಕಾಂಗ್ರೆಸ್‍ನ ಡಿ.ಕುಮಾರ್, 8ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ನಯಾಜ್ ಅಹ್ಮದ್, 9ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಪ್ರಭಾವತಿ ಸುದೀಶ್ವರ್, 10ನೆ ವಾರ್ಡ್‍ನಲ್ಲಿ ಪಕ್ಷೇತರ ಅಭ್ಯರ್ಥಿ ನೂರುನ್ನಿಸಾ ಬಾನು, 11ನೇ ವಾರ್ಡ್‍ನಲ್ಲಿ ಜೆಡಿಎಸ್‍ನ ಎಂ.ಕೆ ಮನು, 12ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಅಹ್ಮದ್ ಶರೀಫ್, 13ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಫರೀದಾ ಬೇಗಂ, 14ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ನಾಜಿರ ಬಾನು, 15ನೆ ವಾರ್ಡ್‍ನಲ್ಲಿ ಬಿಜೆಪಿಯ ಗಿರಿಜಾ ಧನ್ಯಕುಮಾರ, 16ನೇ ವಾರ್ಡ್‍ನ ಕಾಂಗ್ರೆಸ್ ಇನಾಯತುಲ್ಲಾ ಖಾನ್, 17ನೇ ವಾರ್ಡನಲ್ಲಿ ಜೆಡಿಎಸ್‍ನಿಂದ ಮಂಜುನಾಥ್, 18ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ಮುಜೀದಾ ಖಾನಂ, 19ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ರೂಪಾಶ್ರೀ, 20ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ಎ.ಶ್ರೀನಿವಾಸ್, 21ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ಲಲಿತಾ ರವೀಶ್, 22ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ರವಿಕುಮಾರ್, 23ನೇ ವಾಡ್‍ನಲ್ಲಿ ಜೆಡಿಎಸ್‍ನಿಂದ ನರಸಿಂಹಮೂರ್ತಿ, 24ನೇ ವಾರ್ಡನಲ್ಲಿ ಪಕ್ಷೇತರ ಅಭ್ಯರ್ಥಿ ಸಿದ್ದರಾಮಯ್ಯ, 25ನೆ ವಾರ್ಡ್‍ನಲ್ಲಿ ಬಿಜೆಪಿ ಚರಿತ್ರಾ ಉಮಾಶಂಕರ್, 26ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ಮಲ್ಲಿಕಾರ್ಜುನಯ್ಯ, 27ನೇ ವಾರ್ಡನಲ್ಲಿ ಬಿಜೆಪಿಯ ಚಂದ್ರಕಲಾ, 28ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ಧರಣೇಂದ್ರ ಕುಮಾರ್, 29ನೇ ವಾರ್ಡ್‍ನಲ್ಲಿ ಜೆಡಿಎಸ್‍ನ ನಾಜಿಮಾಬಿ, 30ನೆ ವಾರ್ಡ್‍ನಲ್ಲಿ ಪಕ್ಷೇತರ ಅಭ್ಯರ್ಥಿ ವಿಷ್ಣುವರ್ಧನ್, 31ನೇ ವಾರ್ಡ್‍ನಲ್ಲಿ ಬಿಜೆಪಿಯ ಪಿ.ಎಂ.ರಮೇಶ್, 32ನೇ ವಾರ್ಡ್‍ನಲ್ಲಿ ಬಿಜೆಪಿಯ ಬಿ.ಜಿ.ಕೃಷ್ಣಪ್ಪ, 33ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ಶಶಿಕಲಾ, 34ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ಅರುಣ್, 35ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ನಿರ್ಮಲಾ ಶಿವಕುಮಾರ್ ಆಯ್ಕೆಯಾಗಿದ್ದಾರೆ.

# ಮೈಸೂರು ಪಾಲಿಕೆ ಅತಂತ್ರ : ಬಿಜೆಪಿಗೆ 22, ಕಾಂಗ್ರೆಸ್'ಗೆ 19, ಜೆಡಿಎಸ್ 18

ಮೈಸೂರು,ಸೆ.3- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ದೊರೆಯದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟು 65 ವಾರ್ಡ್‍ಗಳ ಪೈಕಿ ಬಿಜೆಪಿ 22 ಸ್ಥಾನಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 19, ಜೆಡಿಎಸ್ 18 ಹಾಗೂ ಪಕ್ಷೇತರರು 5 ಮತ್ತು ಬಿಎಸ್‍ಪಿ ಒಂದು ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಅಧಿಕಾರ ಹಿಡಿಯಲು 35 ಸ್ಥಾನಗಳು ಅಗತ್ಯವಾಗಿದೆ. ಇಲ್ಲಿ ಪಕ್ಷೇತರರೇ ನಿರ್ಣಾಯಕರಾಗಿದ್ದು, ಅವರಿಗೆ ಬೇಡಿಕೆ ಹೆಚ್ಚಾಗಿದೆ.

ಯಾವುದೇ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಮಾಡಿಕೊಂಡಿರುವ ಎರಡೂ ಪಕ್ಷಗಳು ಪಾಲಿಕೆಯಲ್ಲೂ ದೋಸ್ತಿ ಸರ್ಕಾರವಿದ್ದು, ಇಲ್ಲಿಯೂ ಕೂಡ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಕಾರ್ಯತಂತ್ರ ಹೆಣೆಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಬಿಜೆಪಿಯವರು ಪಕ್ಷೇತರ ಹಾಗೂ ಇತರ ಪಕ್ಷಗಳ ಅಭ್ಯರ್ಥಿಗಳನ್ನು ತಮ್ಮತ್ತ ಸೆಳೆದು ಅಧಿಕಾರದ ಗದ್ದುಗೆ ಹಿಡಿಯಲು ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ. ಒಟ್ಟಾರೆ ಮೈಸೂರು ಮಹಾನಗರಪಾಲಿಕೆ ಗದ್ದುಗೆಯನ್ನು ಏರಲು ಪ್ರಮುಖ ಪಕ್ಷಗಳಿಗೆ ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ. ಒಂದೆಡೆ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಪಕ್ಷೇತರರ ಓಲೈಕೆಗೆ ಮುಂದಾದರೆ, ಮತ್ತೊಂದೆಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೊಂಡು ಪಾಲಿಕೆಯಲ್ಲೂ ಅಧಿಕಾರ ಹಿಡಿಯಲು ಹವಣಿಸುತ್ತಿದೆ.

# ಹಾಸನಲ್ಲಿ ಮುಂದುವರೆದ ಜೆಡಿಎಸ್ ಪ್ರಾಬಲ್ಯ
ಹಾಸನ,ಸೆ.3- ಹಾಸನ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಹಾಸನ- ಅರಸೀಕೆರೆ ನಗರಸಭೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಹಾಗೂ ಸಕಲೇಶಪುರ ಪುರಸಭೆಗಳು ಜೆಡಿಎಸ್ ಪಾಲಾಗಿವೆ.
ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ಪುರಸಭೆಯ 23 ಸ್ಥಾನಗಳಲ್ಲಿ ಜೆಡಿಎಸ್ 15 ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾಗಿರುವ ಬಹುಮತವನ್ನು ಗಳಿಸಿದೆ. ಕಾಂಗ್ರೆಸ್ ಪಕ್ಷ 8 ಸ್ಥಾನಗಳಲ್ಲಿ ಜಯಗಳಿಸಿದೆ.
ಹೊಳೆನರಸೀಪುರ: ಹೊಳೆ ನರಸೀಪುರ ಪುರಸಭೆಯ ಎಲ್ಲಾ 23 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಜೆಡಿಎಸ್ ಹೊಸ ದಾಖಲೆ ನಿರ್ಮಿಸಿದೆ.
ಸಕಲೇಶಪುರ: ಸಕಲೇಶಪುರ ಪುರಸಭೆಯ 23 ಸ್ಥಾನಗಳಲ್ಲಿ ಜೆಡಿಎಸ್ 14 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಕಾರಕ್ಕೆ ಬರಲಿದೆ. ಬಿಜೆಪಿ 2 , ಕಾಂಗ್ರೆಸ್ 4 ಹಾಗೂ ಪಕ್ಷೇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ಹಾಸನ: ಹಾಸನ ನಗರಸಭೆಯ 35 ಸ್ಥಾನಗಳ ಪೈಕಿ ಜೆಡಿಎಸ್ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಬಿಜೆಪಿ 13, ಕಾಂಗ್ರೆಸ್ 2 ಹಾಗೂ ಪಕ್ಷೇತರರು 03 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಇದುವರೆಗೆ 33 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿದೆ.
ಅರಸೀಕೆರೆ: ಅರಸೀಕೆರೆಯ ನಗರಸಭೆಯ 31 ಸ್ಥಾನಗಳ ಜೆಡಿಎಸ್ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬಹುಮತಗಳಿಸಿದೆ. ಬಿಜೆಪಿ 05, ಕಾಂಗ್ರೆಸ್ 01, ಪಕ್ಷೇತರ 03 ಸ್ಥಾನಗಳಲ್ಲಿ ಗೆದ್ದಿದೆ.

# ಸಕ್ಕರೆ ನಾಡಿನಲ್ಲಿ ಜೆಡಿಎಸ್ ವೈಭವ
ಮಂಡ್ಯ, ಸೆ.3- ಹಳೇ ಮೈಸೂರು ಭಾಗದ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದು, ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಲ್ಲಿ ಮಂಡ್ಯ ನಗರಸಭೆ ಸೇರಿದಂತೆ ನಾಲ್ಕು ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಬೆಳ್ಳೂರು ಪಟ್ಟಣ ಪಂಚಾಯ್ತಿಯಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಮದ್ದೂರು ಪುರಸಭೆಯ 23 ಕ್ಷೇತ್ರಗಳ ಪೈಕಿ ಜೆಡಿಎಸ್ 13ರಲ್ಲಿ ಜಯಗಳಿಸಿ ಸ್ಪಷ್ಟ ಬಹುಮತ ಗಳಿಸಿದೆ. ಕಾಂಗ್ರೆಸ್ 3, ಬಿಜೆಪಿ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, 6 ಮಂದಿ ಪಕ್ಷೇತರರು ಗೆದ್ದಿದ್ದಾರೆ.

20ನೇ ವಾರ್ಡ್‍ನ ಜೆಡಿಎಸ್‍ನ ಪಿ.ಆರ್.ಪ್ರಸನ್ನಕುಮಾರ್ ಅವಿರೋಧವಾಗಿ ಆಯ್ಕೆಯಾದರೆ, 8ನೇ ವಾರ್ಡ್‍ನಲ್ಲಿ ಪಕ್ಷೇತರ ಸದಸ್ಯೆ ರತ್ನ ಎಂ.ತಿಮ್ಮಯ್ಯ ಮತ್ತು ಜೆಡಿಎಸ್‍ನ ಡಿ.ಲತಾವೆಂಕಟೇಶ್ ಅವರು ತಲಾ 286 ಮತಗಳನ್ನು ಗಳಿಸಿದ್ದರಿಂದ ಸಮಬಲ ಫಲಿತಾಂಶ ಬಂದಿತ್ತು. ಅಂತಿಮವಾಗಿ ಲಾಟರಿ ಹಾಕಿದಾಗ ರತ್ನ ಅವರಿಗೆ ಅದೃಷ್ಟ ಒಲಿದು ಆಯ್ಕೆಯಾಗಿದ್ದಾರೆ. ಉಳಿದಂತೆ 12ನೇ ವಾರ್ಡ್‍ನಲ್ಲಿ ಜೆಡಿಎಸ್‍ನ ಎಚ್.ವಿ.ಸುಮಿತ್ರಾ ಅವರು ಕಾಂಗ್ರೆಸ್‍ನ ಭಾಗ್ಯ ಸತೀಶ್ ಅವರನ್ನು ಕೇವಲ 8ಮತಗಳ ಅಂತರದಿಂದ ಸೋಲಿಸಿದ್ದಾರೆ. ಪಾಂಡವಪುರ ಪುರಸಭೆಯ 23 ಕ್ಷೇತ್ರಗಳಲ್ಲಿ ಜೆಡಿಎಸ್ 18 ಕ್ಷೇತ್ರಗಳನ್ನು ಗೆದ್ದು ಅಧಿಕಾರ ಹಿಡಿದರೆ, ಕಾಂಗ್ರೆಸ್ 3 ಹಾಗೂ ಬಿಜೆಪಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ, ಇತರರು ಒಂದು ಕ್ಷೇತ್ರದಲ್ಲಿ ಗೆದಿದ್ದಾರೆ.

ಇಡೀ ಜಿಲ್ಲೆಯಲ್ಲಿ ರೈತ ಸಂಘದಿಂದ ಪಾಂಡವಪುರ ಪುರಸಭೆಯ 25ನೇ ವಾರ್ಡ್‍ನಲ್ಲಿ ಟಿ.ಪಾರ್ಥಸಾರಥಿ ಆಯ್ಕೆಯಾಗುವ ಮೂಲಕ ಗೆಲುವು ಸಾಧಿಸಿದ್ದಾರೆ. ಉಳಿದಂತೆ 10 ಕ್ಷೇತ್ರಗಳಲ್ಲಿ ರೈತ ಸಂಘದ ಅಭ್ಯರ್ಥಿಗಳು ಜೆಡಿಎಸ್‍ಗೆ ಪೈಪೋಟಿ ನೀಡಿದ್ದಾರೆ. ಪ್ರತಿಷ್ಠಿತ ನಾಗಮಂಗಲ ಪುರಸಭೆಯಲ್ಲಿ 23 ಕ್ಷೇತ್ರಗಳ ಪೈಕಿ ಜೆಡಿಎಸ್ 12 ಕ್ಷೇತ್ರಗಳನ್ನು ಗೆದಿದ್ದರೆ, ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಬಿಜೆಪಿ ಅಥವಾ ಇತರರು ಖಾತೆ ತೆರೆಯಲು ಸಾಧ್ಯವಾಗಿಲ್ಲ. ಒಂದು ಕ್ಷೇತ್ರದ ಅಂತರದಿಂದ ಕಾಂಗ್ರೆಸ್ ನಾಗಮಂಗಲ ಪುರಸಭೆಯ ಅಧಿಕಾರವನ್ನು ಕಳೆದುಕೊಂಡಿದೆ. ಬೆಳ್ಳೂರು ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದ್ದು, 13 ಸ್ಥಾನಗಳ ಪೈಕಿ 7ರಲ್ಲಿ ಜಯ ಸಾಧಿಸಿದೆ. ಜೆಡಿಎಸ್ 4ರಲ್ಲಿ, ಪಕ್ಷೇತರರು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

# ಕೈ ಹಿಡಿದ ಗಣಿನಾಡು
ಬಳ್ಳಾರಿ, ಸೆ.3- ಗಣಿನಾಡು ಬಳ್ಳಾರಿ ಜಿಲ್ಲೆಯ ಕುಡುತಿನಿ ಮತ್ತು ಕೊತ್ತೂರು ಪಟ್ಟಣ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಕುಡುತಿನಿಯ 19 ಸ್ಥಾನಗಳಲ್ಲಿ ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ 8ರಲ್ಲಿ ಜಯಗಳಿಸಿದೆ. ಕೊತ್ತೂರು ಪಟ್ಟಣ ಪಂಚಾಯ್ತಿಯ 20 ಸೀಟುಗಳಲ್ಲಿ ಕಾಂಗ್ರೆಸ್ 9ರಲ್ಲಿ ಜಯ ಸಾಧಿಸಿದ್ದು, ಬಿಜೆಪಿ 8 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಪಕ್ಷೇತರರು ಮೂರು ಸ್ಥಾನಗಳನ್ನು ಗೆದ್ದಿದ್ದು, ಅದರಲ್ಲಿ ಕಾಂಗ್ರೆಸ್ ಬೆಂಬಲಿತರಾಗಿರುವುದರಿಂದ ಕಾಂಗ್ರೆಸ್ ಪಕ್ಷವೇ ಅಧಿಕಾರ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ.

# ಬೆಳಗಾವಿಯಲ್ಲಿ ಪಕ್ಷೇತರರ ಪ್ರಾಬಲ್ಯ, ಬಿಜೆಪಿ ಪಾಲಾದ ಸವದತ್ತಿ ಪುರಸಭೆ
ಬೆಳಗಾವಿ, ಸೆ.3-ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪಕ್ಷೇತರರೇ ಹೆಚ್ಚು ವಿಜೃಂಭಿಸಿದ್ದು, ಸವದತ್ತಿ ಪುರಸಭೆ ಬಿಜೆಪಿ ಪಾಲಾಗಿದೆ. ಉಳಿದಂತೆ ಖಾನಾಪುರ, ಕಣ್ಣೂರು, ಚಿಕ್ಕೋಡಿ ಸ್ಥಳೀಯ ಸಂಸ್ಥೆಗಳು ಪಕ್ಷೇತರರ ಪಾಲಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಸಚಿವ ರಮೇಶ್‍ಜಾರಕಿಹೊಳಿ ಅವರ ಸಹೋದರ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಂಸದ ಪ್ರಕಾಶ್ ಹುಕ್ಕೇರಿ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀಹೆಬ್ಬಾಳ್ಕರ್ ಅವರ ನಡುವಿನ ಪರಸ್ಪರ ಪೈಪೋಟಿಯಿಂದಾಗಿ ಕಾಂಗ್ರೆಸ್ ನೆಲಕಚ್ಚುವ ಪರಿಸ್ಥಿತಿಗೆ ಬಂದಿದೆ. ಜಿಲ್ಲೆಯ ರಾಮದುರ್ಗ ಪುರಸಭೆ 27 ಸ್ಥಾನಗಳಲ್ಲಿ ಬಿಜೆಪಿ 16 ಸ್ಥಾನಗಳನ್ನು ಗಳಿಸಿ ಬಹುಮತ ಸಾಧಿಸಿದೆ. ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದಿದ್ದರೆ. ಪಕ್ಷೇತರರು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಸವದತ್ತಿ ಪುರಸಭೆಯಲ್ಲಿ ಬಿಜೆಪಿ 17ರಲ್ಲಿ, ಕಾಂಗ್ರೆಸ್ 9 ಹಾಗೂ ಪಕ್ಷೇತರರು ಒಂದು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

ಚಿಕ್ಕೋಡಿ ಪುರಸಭೆಯ 23 ಸ್ಥಾನಗಳ ಪೈಕಿ ಈಗಾಗಲೇ ಪಕ್ಷೇತರರು 13 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸ್ಥಳೀಯ ಸಂಸ್ಥೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಖಾತೆ ತೆರೆಯಲು ಹೆಣಗಾಡಿವೆ. ಕಣ್ಣೂರು ಪುರಸಭೆಯ 23 ಕ್ಷೇತ್ರಗಳ ಪೈಕಿ ಪಕ್ಷೇತರರು 22ರಲ್ಲಿ ಜಯ ಗಳಿಸಿದ್ದಾರೆ. ಇಲ್ಲೂ ಕೂಡ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಖಾತೆ ತೆರೆಯಲು ಪರದಾಡಿವೆ. ಖಾನಾಪುರ ಪಟ್ಟಣ ಪಂಚಾಯ್ತಿಯ 20 ಕ್ಷೇತ್ರಗಳ ಪೈಕಿ 20ರಲ್ಲೂ ಪಕ್ಷೇತರರೇ ಜಯಗಳಿಸಿದ್ದು, ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಇಲ್ಲಿ ತಲೆ ಎತ್ತಲಾಗಿಲ್ಲ.

# ಗದಗದಲ್ಲಿ ಕಾಂಗ್ರೆಸ್ ನಿದ್ದೆಗೆಡಿಸಿದ ಬಿಜೆಪಿ
ಗದಗ, ಸೆ.3- ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರ ಪ್ರಾಬಲ್ಯ ಇರುವ ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಈ ಬಾರಿ ಬಿಜೆಪಿ ಅತ್ಯಂತ ಪ್ರಬಲ ಪೈಪೋಟಿ ನೀಡಿದ್ದು, ಕಾಂಗ್ರೆಸ್‍ನ ನಿದ್ದೆಗೆಡಿಸಿದೆ. ಜಿಲ್ಲೆಯಲ್ಲಿರುವ ಒಟ್ಟು 6 ಸ್ಥಳೀಯ ಸಂಸ್ಥೆಗಳ ಪೈಕಿ ಕಾಂಗ್ರೆಸ್ 3ರಲ್ಲಿ ಹಾಗೂ ಬಿಜೆಪಿ 2ರಲ್ಲಿ ಅಧಿಕಾರ ಹಿಡಿದಿದ್ದು, ಒಂದು ಅತಂತ್ರವಾಗಿದೆ. ಒಟ್ಟು 123 ಸ್ಥಾನಗಳ ಪೈಕಿ ಕಾಂಗ್ರೆಸ್ 57 ಸ್ಥಾನಗಳನ್ನು, ಬಿಜೆಪಿ 54 ಸ್ಥಾನಗಳನ್ನು, ಜೆಡಿಎಸ್ 2 ಸ್ಥಾನಗಳನ್ನು ಗೆದಿದ್ದರೆ. ಪಕ್ಷೇತರರು 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಎಚ್.ಕೆ.ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದು, ಪಕ್ಷದ ಚಟುವಟಿಕೆಗಳಿಂದ ದೂರ ಸರಿದಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ಕಳೆದ ನಾವಣೆಗಿಂತಲೂ ಹೆಚ್ಚು ಸ್ಥಾನಗಳಿಸಿ ಕಾಂಗ್ರೆಸ್‍ಗೆ ಪೈಪೋಟಿ ನೀಡಿದೆ. ರೋಣ ಪುರಸಭೆಯ 23 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 15ರಲ್ಲಿ ಜಯಗಳಿಸಿ ಅಧಿಕಾರ ಹಿಡಿದರೆ, ಬಿಜೆಪಿ 7 ಕ್ಷೇತ್ರಗಳಲ್ಲಿ ಗೆದ್ದಿದೆ. ಪಕ್ಷೇತರರು ಒಂದು ಸ್ಥಾನದಲ್ಲಿ ಗೆದಿದ್ದಾರೆ.

ಗಜೇಂದ್ರಗಡ ಪುರಸಭೆಯ 23 ಕ್ಷೇತ್ರಗಳಲ್ಲಿ ಬಿಜೆಪಿ 18 ಕ್ಷೇತ್ರದಲ್ಲಿ ಗೆದ್ದು ಅಧಿಕಾರ ಹಿಡಿದರೆ, ಕಾಂಗ್ರೆಸ್ 5ಕ್ಕೆ ತೃಪ್ತಿಪಟ್ಟುಕೊಂಡಿದೆ. ಲಕ್ಷ್ಮೇಶ್ವರ ಪುರಸಭೆಯ 23 ಕ್ಷೇತ್ರಗಳಲ್ಲಿ ಕಾಂಗ್ರೆಸ್ 9, ಬಿಜೆಪಿ 7 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಜೆಡಿಎಸ್ ಎರಡರಲ್ಲಿ ಜಯಸಾಧಿಸಿದೆ. ಪಕ್ಷೇತರರು ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ರಾಜ್ಯಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಕಾಂಗ್ರೆಸ್ ಲಕ್ಷ್ಮೀಶ್ವರ ಪುರಸಭೆಯಲ್ಲಿ ಮೈತ್ರಿ ಮಾಡಿಕೊಂಡರೂ ಅಧಿಕಾರ ಹಿಡಿಯಲು ಸಾಧ್ಯವಾಗುವುದಿಲ್ಲ. ಬದಲಾಗಿ ಪಕ್ಷೇತರರ ಬೆಂಬಲ ಅನಿವಾರ್ಯವಾಗಿದೆ.

ನೀರಗಲ್ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್ ವಿಜೃಂಭಿಸಿದ್ದು, ಒಟ್ಟು 17 ಕ್ಷೇತ್ರಗಳಲ್ಲಿ 12ರಲ್ಲಿ ಜಯಗಳಿಸಿದೆ. ಬಿಜೆಪಿ 3ರಕ್ಕೆ ತೃಪ್ತಿಪಟ್ಟುಕೊಂಡರೆ, ಪಕ್ಷೇತರರು ಎರಡಲ್ಲಿ ಜಯಗಳಿಸಿದ್ದಾರೆ. ಮುಳಗುಂದ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಮತ್ತೆ ವಿಜೃಂಭವಿಸಿದ್ದು, 19 ಕ್ಷೇತ್ರಗಳ ಪೈಕಿ 15ರಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 3 ಹಾಗೂ ಪಕ್ಷೇತರರು ಒಂದು ಸ್ಥಾನ ಗೆದ್ದು ವಿರೋಧ ಪಕ್ಷದ ಅರ್ಹತೆಯನ್ನೂ ಕಳೆದುಕೊಂಡಿದ್ದಾರೆ. ಶಿರಹಟ್ಟಿ ಪಟ್ಟಣ ಪಂಚಾಯ್ತಿಯ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್ 10ರಲ್ಲಿ ಜಯಗಳಿಸಿ ಅಧಿಕಾರ ಹಿಡಿದರೆ, ಬಿಜೆಪಿ 7ರಲ್ಲಿ, ಪಕ್ಷೇತರರು ಒಂದು ಕ್ಷೇತ್ರದಲ್ಲಿ ಅಧಿಕಾರ ಹಿಡಿದಿದ್ದಾರೆ.

# ಟಿ.ನರಸೀಪುರ ಪುರಸಭೆಯಲ್ಲಿ ಕಾಂಗ್ರೆಸ್ ಜಯಭೇರಿ
ಟಿ.ನರಸೀಪುರ, ಸೆ.3- ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, 23 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 10 ವಾರ್ಡ್‍ಗಳಲ್ಲಿ ಜಯಭೇರಿ ಭಾರೀಸಿದೆ. ಆರು ವಾರ್ಡ್‍ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದು, ಬಿಜೆಪಿ 4 ವಾರ್ಡ್‍ಗಳಲ್ಲಿ ಹಾಗೂ ಜೆಡಿಎಸ್ 3ವಾರ್ಡ್‍ಗಳಲ್ಲಿ ಜಯ ಸಾಧಿಸಿದೆ. ವಾರ್ಡ್‍ನಂ.1ರಲ್ಲಿ ಪಕ್ಷೇತರ ಅಭ್ಯರ್ಥಿ ರೂಪ(311)ಮತ ಪಡೆದು ಜಯಗಳಿಸಿದರೆ, 2ರಲ್ಲಿ ಜೆಡಿಎಆಧಅಭ್ಯರ್ಥಿ ಎಂ.ಸಿದ್ದು(496)ಮತಗಳಿಂದ, 3ರಲ್ಲಿ ಕಾಂಗ್ರೆಧ ಅಭ್ಯರ್ಥಿ ಪ್ರೇಮ(392 ), 4ರಲ್ಲಿ ಪಕ್ಷೇತರಅಭ್ಯರ್ಥಿ ಮಂಜುನಾಥ್ (309 ), 5ರಲ್ಲಿ ಪಕ್ಷೇತರ ಅಭ್ಯರ್ಥಿ ಅಹಮದ್ ಸಹಿದ್ ( 201), 6ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಬಿ ( 322),7ರಲ್ಲಿ ಜೆಡಿಎಸ್‍ಅಭ್ಯರ್ಥಿ ತುಂಬಲ ಪ್ರಕಾಶ್( 162 ).8ರಲ್ಲಿ ಬಿಜೆಪಿ ಅಭ್ಯರ್ಥಿ ರೂಪಶ್ರಿ ಪರಮೇಶ್ ( 419 ), 9ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೆಡಿಕಲ್ ನಾಗರಾಜು -( 308) , 10ರಲ್ಲಿ ಕಾಂಗ್ರಸ್ ಅಭ್ಯರ್ಥಿ ಮಹದೇವಮ್ಮ (199 ), 11ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂಜುಂಡಸ್ವಾಮಿ ( 470), 12ರಲ್ಲಿ ಪಕ್ಷೇತರ ಅಭ್ಯರ್ಥಿ ವಸಂತಮ್ಮ (342), 13ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್. ಸೋಮಣ್ಣ ( 405) ), 14ರಲ್ಲಿ ಬಿಜೆಪಿ ಅಭ್ಯರ್ಥಿ ಅರ್ಜುನ್ (638), 15ರಲ್ಲಿ ಬಿಜೆಪಿ ಅಭ್ಯರ್ಥಿ ಮಾದೇವಿ(402 ), 16ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮದನ್ ರಾಜ್( 417), 17ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ವರಿ (494) ), 18ರಲ್ಲಿ ಪಕ್ಷೇತರ ಅಭ್ಯರ್ಥಿ ಶೋಭಾರಾಣಿ ( 410 ), 19ರಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ತೇಜಸ್ವಿನಿ ( 428 ), 20ರಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಮೋಹನ್ ( 492), 21ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರತ್ನ ( 595), 22ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾದಾಮಿ ಮಂಜು ( 341 ) ಹಾಗೂ 23ನೇ ವಾರ್ಡ್‍ನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೆ.ಕಿರಣ್ 494 ಮತ ಪಡೆದು ಜಯಶಾಲಿಗಳಾಗಿದ್ದಾರೆಂದು ಚುನಾವಣಾಧಿಕಾರಿ ಪರಮೇಶ್ತಿಳಿಸಿದ್ದಾರೆ. ಪ್ರತಿಯೊಂದು ವಾರ್ಡ್‍ನ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದ್ದ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

# ಮಂಡ್ಯ ನಗರಸಭೆ ಜೆಡಿಎಸ್ ತೆಕ್ಕೆಗೆ
ಮಂಡ್ಯ, ಸೆ.3- ಮಂಡ್ಯ ನಗರಸಭೆಯ 35 ಸ್ಥಾನಗಳ ಪೈಕಿ 18 ಜೆಡಿಎಸ್ ಪಾಲಾಗುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹತ್ತು ಸ್ಥಾನ ಕಾಂಗ್ರೆಸ್‍ಗಳಿಸಿದರೆ, ಐದು ಪಕ್ಷೇತರ ಹಾಗೂ ಎರಡು ಸ್ಥಾನ ಬಿಜೆಪಿ ಪಾಲಾಗಿದೆ. 11ನೇ ವಾರ್ಡ್‍ನಿಂದ ಬಿಜೆಪಿಯ ಅರುಣ್‍ಕುಮಾರ್ ಸತತ ಗೆಲುವು ಸಾಧಿಸಿದ್ದಾರೆ. 27ನೇ ವಾರ್ಡ್‍ನಿಂದ ಹಿರಿಯ ಕಾಂಗ್ರೆಸಿಗ ರಾಮಲಿಂಗಯ್ಯ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಜೆಡಿಎಸ್‍ಗೆ ಹೆಚ್ಚಿನ ಬಹುಮತ ನೀಡುವ ಮೂಲಕ ನಗರಸಭೆಯ ಅಧಿಕಾರ ನಡೆಸಲು ಅವಕಾಶ ನೀಡಿರುವುದಕÉ್ಕ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

# ಚಿತ್ರದುರ್ಗ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ
ಚಿತ್ರದುರ್ಗ,ಸೆ.3-ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ನಗರಸಭೆಯ ಒಟ್ಟು 35 ವಾರ್ಡ್‍ಗಳ ಪೈಕಿ ಬಿಜೆಪಿ 18 ವಾರ್ಡ್‍ಗಳಲ್ಲಿ ಗೆಲ್ಲುವ ಮೂಲಕ ನಗರಸಬೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ 2, ಜೆಡಿಎಸ್ 5 ಹಾಗೂ ಪಕ್ಷೇತರರು 4 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಶಾಸಕ ತಿಪ್ಪಾರೆಡ್ಡಿ ಅವರ ಸತತ ಹೋರಾಟ ಹಾಗೂ ಕಾರ್ಯಕರ್ತರ ಅವಿರತ ಶ್ರಮದಿಂದ ಗೆಲುವಿನ ನಗೆ ಬೀರಿದೆ. ತೀವ್ರ ಪೈಪೋಟಿ ನೀಡಬಹುದೆಂದು ನಿರೀಕ್ಷಿಸಲಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ತೀವ್ರ ಹಿನ್ನಡೆ ಅನುಭವಿಸಿದ್ದಾರೆ.

# ಉಡುಪಿ ನಗರಸಭೆಯಯಲ್ಲಿ ಮತ್ತೆ ಕಮಲ ಗೆಲುವಿನ ನಗೆ
ಉಡುಪಿ,ಸೆ.3-ನಗರಸಭೆಯ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತ ಪಡೆಯುವ ಮೂಲಕ ಉಡುಪಿಯಲ್ಲಿ ಮತ್ತೆ ಕಮಲ ಗೆಲುವಿನ ನಗೆ ಬೀರಿದೆ. ನಗರಸಭೆಯ ಒಟ್ಟು 35 ವಾರ್ಡ್‍ಗಳ ಪೈಕಿ ಬಿಜೆಪಿ 31 ಸ್ಥಾನಗಳನ್ನು ಪಡೆಯುವ ಮೂಲಕ ಇದು ಕಮಲದ ಭದ್ರ ಕೋಟೆ ಎಂಬುದನ್ನು ಸಾಬೀತು ಮಾಡಿದೆ. ಕಾಂಗ್ರೆಸ್ ಕೇವಲ 4 ಸ್ಥಾನಗಳಲ್ಲಿ ಗೆದ್ದಿದೆ. ಶಾಸಕ ರಘುಪತಿ ಭಟ್ ಮತ್ತು ಮಾಜಿ ಶಾಸಕ ಪ್ರಮೋದ್ ಮದ್ವರಾಜ್ ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿ ನಗರಸಭೆಯನ್ನು ಭಾರೀ ಬಹುಮತ ಪಡೆಯುವ ಮೂಲಕ ತನ್ನ ತೆಕ್ಕೆಗೆ ಪಡೆದುಕೊಂಡಿದೆ.

# ಬಾಗಲಕೋಟೆಯಲ್ಲಿ ತತ 4ನೇ ಬಾರಿಗೆ ಅಧಿಕಾರ ಹಿಡಿದ ಬಿಜೆಪಿ
ಬಾಗಲಕೋಟೆ,ಸೆ.3-ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತ ಪಡೆಯುವ ಮೂಲಕ ಸ್ಪಷ್ಟ ಜನಾದೇಶದೊಂದಿಗೆ ಸತತ 4ನೇ ಬಾರಿಗೆ ಅಧಿಕಾರ ಹಿಡಿದಿದೆ. ಒಟ್ಟು 31 ವಾರ್ಡ್‍ಗಳ ಪೈಕಿ 29 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದ್ದರೆ, ಕಾಂಗ್ರೆಸ್ 5 ಹಾಗೂ ಪಕ್ಷೇತರರು ಒಂದು ವಾರ್ಡ್‍ನಲ್ಲಿ ಗೆಲವು ಸಾಧಿಸಿದ್ದಾರೆ. ಶಾಸಕ ವೀರಣ್ಣ ಚರಂತಿ ಮಠ್ ಹಾಗೂ ಮಾಜಿ ಸಚಿವ ಎಚ್.ವೈ.ಮೇಟಿ ಪ್ರತಿಷ್ಠೆಯ ಕಣವಾಗಿದ್ದ ಈ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿದೆ. ಈ ಹಿಂದೆ ನಡೆದ ಮೂರು ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ನಗೆ ಬೀರಿತ್ತು.

# ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ
ಶಿವಮೊಗ್ಗ,ಸೆ.3- ಭಾರೀ ಜಿದ್ದಾಜಿದ್ದಿನಿಂದ ಕೂಡಿದ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪಷ್ಟ ಬಹುಮತ ಪಡೆದು ಬಿಜೆಪಿ ಅಧಿಕಾರ ಗದ್ದುಗೆ ಹಿಡಿದಿದೆ. ಒಟ್ಟು 35 ಸ್ಥಾನಗಳಲ್ಲಿ ಬಿಜೆಪಿ 23ರಲ್ಲಿ ಗೆಲುವು ಸಾಧಿಸುವ ಮೂಲಕ ಮೊಟ್ಟ ಮೊದಲ ಬಾರಿಗೆ ಮಹಾನಗರ ಪಾಲಿಕೆಯಲ್ಲಿ ಕಮಲ ಅರಳಿದೆ. ಕಾಂಗ್ರೆಸ್ 6, ಜೆಡಿಎಸ್4 ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಗೆದ್ದಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ಕೆ.ಎಸ್.ಈಶ್ವರಪ್ಪ ಪ್ರಭಾವದಿಂದ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆದ್ದಿದ್ದ ಈಶ್ವರಪ್ಪನವರಿಗೆ ಮಹಾನಗರ ಪಾಲಿಕೆಯನ್ನು ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಹೀಗಾಗಿ ಕಳೆದ ಹಲವು ದಿನಗಳಿಂದ ಅವರು ಕ್ಷೇತ್ರ ಬಿಟ್ಟು ಕದಲಿರಲಿಲ್ಲ.

ಶತಾಯಗತಾಯ ಪಾಲಿಕೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಜಿದ್ದಿಗೆ ಬಿದ್ದಿದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪ ಒಟ್ಟಾಗಿ ಪ್ರಚಾರ ನಡೆಸಿದ್ದರಿಂದ ಪಕ್ಷ ಕ್ಷೇತ್ರವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಈ ಚುನಾವಣೆಯಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿವೆ. ಕಳೆದ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದವು.

# ಬೆಳಗಾವಿಯ ಕೊಣ್ಣೂರು ಪುರಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಗಳ ಗೆಲುವು
ಬೆಳಗಾವಿ,ಸೆ.3- ಜಿಲ್ಲೆಯ ಕೊಣ್ಣೂರು ಪುರಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಒಟ್ಟು 23 ವಾರ್ಡ್‍ಗಳ ಪೈಕಿ 17 ವಾರ್ಡ್‍ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳೆ ಗೆಲುವು ಸಾಧಿಸಿದ್ದಾರೆ. ಈಗಾಗಲೇ ಹಾಲಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿತ ಆರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಕಣದಲ್ಲಿದ್ದ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಖಾನಾಪುರ ಪಟ್ಟಣ ಪಂಚಾಯ್ತಿಯು ಪಕ್ಷೇತರರ ಪಾಲಾಗಿದೆ. ಒಟ್ಟು 23 ಸದಸ್ಯರಲ್ಲಿ ಎಲ್ಲಾ ವಾರ್ಡ್‍ಗಳಲ್ಲೂ ಪಕ್ಷೇತರ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಕಣದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಭಾರೀ ಮುಖಭಂಗವಾಗಿದೆ. ಗೋಕಾಕ್: ಶಾಸಕ ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್ ನಗರಸಭೆ ಪಕ್ಷೇತರರ ಪಾಲಾಗಿದೆ. ಒಟ್ಟು 31 ಸ್ಥಾನಗಳಲ್ಲಿ ಎಲ್ಲಾ ವಾರ್ಡ್‍ಗಳಲ್ಲೂ ಪಕ್ಷೇತರ ಅಭ್ಯರ್ಥಿಗಳೇ ಗೆಲುವಿನ ನಗೆ ಬೀರಿದ್ದಾರೆ.

# ಜೇವರ್ಗಿ ಪುರಸಭೆಯಲ್ಲಿ ಹಾಲಿ ಶಾಸಕ ಡಾ.ಅಜಯ್‍ಸಿಂಗ್‍ಗೆ ಭಾರೀ ಮುಖಭಂಗ
ಜೇವರ್ಗಿ,ಸೆ.3- ಜಿದ್ದಾಜಿದ್ದಿನಿಂದ ಕೂಡಿದ್ದ ಪಟ್ಟಣ ಪಂಚಾಯ್ತಿ ಜೇವರ್ಗಿ ಪುರಸಭೆಯಲ್ಲಿ ಹಾಲಿ ಶಾಸಕ ಡಾ.ಅಜಯ್‍ಸಿಂಗ್‍ಗೆ ಭಾರೀ ಮುಖಭಂಗವಾಗಿದ್ದು, ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಒಟ್ಟು 23ಸ್ಥಾನಗಳಲ್ಲಿ ಬಿಜೆಪಿ 13, ಕಾಂಗ್ರೆಸ್-ಜೆಡಿಎಸ್ ತಲಾ ಎರಡು ಸ್ಥಾನ ಪಡೆದಿದ್ದರೆ ಉಳಿದ ವಾರ್ಡ್‍ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ. ಶಾಸಕ ಡಾ.ಅಜಯ್‍ಸಿಂಗ್ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಮಾಜಿ ಶಾಸಕ ನರಿಬೋಳ ಕಳೆದ ಬಾರಿಯ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಾ.ಅಜಯ್ ಸಿಂಗ್ ಗೆಲುವಿನ ನಗೆ ಬೀರಿದ್ದರು.

# ರೇವಣ್ಣನವರ ಸ್ವಕ್ಷೇತ್ರ ಹೊಳೆನರಸೀಪುರದ ಪುರಸಭೆಯಲ್ಲಿ ಜೆಡಿಎಸ್ ದಾಖಲೆ
ಹೊಳೆನರಸೀಪುರ,ಸೆ.3- ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣನವರ ಸ್ವಕ್ಷೇತ್ರ ಹೊಳೆನರಸೀಪುರದ ಪುರಸಭೆಯಲ್ಲಿ ಜೆಡಿಎಸ್ ಬೆಂಬಲಿತ 23 ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಜೆಡಿಎಸ್ ಬೆಂಬಲಿತ 23 ಅಭ್ಯರ್ಥಿಗಳು ಎಲ್ಲಾ ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದ್ದರೆ, ಕಣದಲ್ಲಿದ್ದ ಕಾಂಗ್ರೆಸ್-ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ತೀವ್ರ ಮುಖಭಂಗವಾಗಿದೆ. ಈ ಮೂಲಕ ಪುರಸಭೆಯಲ್ಲೂ ರೇವಣ್ಣನ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ. ರಾಜ್ಯದ ಯಾವುದೇ ಪುರಸಭೆಯಲ್ಲಿ ಎಲ್ಲ ವಾರ್ಡ್‍ಗಳಲ್ಲಿ ಒಂದೇ ಪಕ್ಷದ ಅಭ್ಯರ್ಥಿಗಳು ಗೆದ್ದಿರುವ ನಿದರ್ಶನಗಳಿಲ್ಲ.

# ಹೊನ್ನಾಳಿ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ

ಹೊನ್ನಾಳಿ, ಸೆ.3- ಇಲ್ಲಿನ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರ ಗದ್ದುಗೆ ಹಿಡಿದಿದೆ.
ಒಟ್ಟು 18 ವಾರ್ಡ್‍ಗಳ ಪೈಕಿ ಬಿಜೆಪಿ 10 ವಾರ್ಡ್‍ಗಳಲ್ಲಿ ಗೆಲ್ಲುವ ಮೂಲಕ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ 5 ಹಾಗೂ ಪಕ್ಷೇತರರು ಮೂರು ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹಾಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ನಡುವಿನ ಜಿದ್ದಾಜಿದ್ದಿನ ಕುರುಕ್ಷೇತ್ರದಲ್ಲಿ ಕಮಲ ಅರಳಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಶತಾಯಗತಾಯ ಕಾಂಗ್ರೆಸ್ ಪಟ್ಟಣ ಪಂಚಾಯ್ತಿಯನ್ನು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ಫಲ ಕೊಟ್ಟಿಲ್ಲ. ಕಳೆದ ಬಾರಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಪಕ್ಷೇತರ ಬೆಂಬಲ ಪಡೆದು ಕಾಂಗ್ರೆಸ್ ಅಧಿಕಾರ ಹಿಡಿದಿತ್ತು.

# ಸಿಂಧನೂರು ನಗರಸಭೆ ಕಾಂಗ್ರೆಸ್ ಪಾಲು
ರಾಯಚೂರು,ಸೆ.3- ಸಿಂಧನೂರು ನಗರಸಭೆ ಕಾಂಗ್ರೆಸ್ ಪಾಲಾಗಿದ್ದು, ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಭಾರೀ ಮುಖಭಂಗವಾಗಿದೆ. ಒಟ್ಟು 31 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 20 ಹಾಗೂ ಜೆಡಿಎಸ್ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸರಳ ಬಹುಮತಕ್ಕೆ 16 ಸ್ಥಾನಗಳ ಅವಶ್ಯಕತೆ ಇತ್ತು. ಕಾಂಗ್ರೆಸ್ 20 ಸ್ಥಾನಗಳಲ್ಲಿ ಗೆಲುವು ಪಡೆದಿದ್ದು,ಸ್ಪಷ್ಟ ಜನಾದೇಶ ಪಡೆದಿದೆ. ಇದರಿಂದ ಹಾಲಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಭಾರೀ ಮುಖಭಂಗವಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: eesanje
Top