Wednesday, 27 Jan, 5.19 pm ಈ ಸಂಜೆ

ಮುಖ್ಯಾಂಶಗಳು
ರೈತರ ನೆಮ್ಮದಿ ಹಾಳು ಮಾಡಿದ್ದ ಪುಂಡಾನೆ ಸೆರೆ

ಹಾಸನ, ಜ.27- ಜಿಲ್ಲೆಯ ಸುತ್ತಮುತ್ತ ಹಾವಳಿ ಮಾಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಸಕಲೇಶಪುರ, ಆಲೂರು ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡುತ್ತಿದ್ದವು.
ರೈತರ ಮನವಿ ಹಾಗೂ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಸೆರೆ ಹಿಡಿಯಲು ರೇಡಿಯೋ ಕಾಲರ್ ಅಳವಡಿಸಿದ್ದರು.

ಒಂಟಿ ಸಲಗಕ್ಕೆ ರೇಡಿಯೋ ಕಾಲರ್ ಅಳವಡಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಮತ್ತಿಗೋಡು ಅರಣ್ಯ ಕ್ಯಾಂಪ್‍ನಿಂದ ಅಭಿಮಾನಿ ಸೇರಿದಂತೆ ಮೂರು ಆನೆಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು. ಕಾಡಾನೆಗಳ ಚಲನವಲನಗಳನ್ನು ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಇಂದು ಮತ್ತೂರು ಮೀಸಲು ಅರಣ್ಯ ಪ್ರದೇಶದ ನಾಗವಾರ ಬಳಿ ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ.

ಮೊದಲೆಲ್ಲಾ ಸೆರೆಯಾದ ಆನೆಗಳ ಸ್ಥಳಾಂತರಕ್ಕೆ ಸಾಕಾನೆಗಳ ಸಹಾಯದಿಂದ ಲಾರಿಗಳಿಗೆ ಹತ್ತಿಸಲಾಗಿತ್ತು. ಇದೇ ಮೊದಲ ಬಾರಿಗೆ ಕ್ರೇನ್ ಬಳಸಲಾಗಿದೆ. ಕಾರ್ಯಾಚರಣೆಗೆ 4 ಟನ್ ಸಾಮಥ್ರ್ಯದ 5 ಮೀಟರ್ ಉದ್ದದ ನೈಲಾನ್ ಪಟ್ಟಿಗಳನ್ನು ಬಳಸಿ ಸುರಕ್ಷಿತವಾಗಿ ಲಾರಿಗೆ ಹತ್ತಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್ ತಿಳಿಸಿದ್ದಾರೆ.

ಮತ್ತೊಂದು ಆನೆಯನ್ನು ಸೆರೆ ಹಿಡಿದು ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಮತ್ತೆ ಕಾಡಿಗೆ ಬಿಡುವ ಕಾರ್ಯಾಚರಣೆ ಬಾಕಿ ಉಳಿದಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು. ಅಗತ್ಯವಿದ್ದರೆ ಕಾಡಾನೆಗಳ ಸೆರೆ ಕಾರ್ಯಾಚರಣೆ ಮುಂದುವರೆಸಲು ಸೂಚನೆ ನೀಡಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: eesanje
Top