ಈ ಸಂಜೆ
786k FollowersSocial Share
ಬೆಂಗಳೂರು,ಡಿ.30- ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಭರ್ಜರಿ ತಯಾರಿ ನಡೆಸಿರುವ ರಾಜ್ಯ ಸರ್ಕಾರವು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಭಿಯಾನವನ್ನು ಕೈಗೆತ್ತಿಕೊಂಡಿದೆ.
ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇವೆ. ಪ್ರಸ್ತುತ, ಕೃಷಿ, ಗೃಹ, ನಗರಾಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ವಿದ್ಯುತ್, ಜಲಸಂಪನ್ಮೂಲ, ಅಬಕಾರಿ, ವೈದ್ಯಕೀಯ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸೇರಿದಂತೆ ರಾಜ್ಯ ಸರ್ಕಾರದ 72 ಇಲಾಖೆಗಳಲ್ಲಿ 5.2 ಲಕ್ಷ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಲಕ್ಷ ಜನರನ್ನು ನೇಮಕ ಮಾಡಿಕೊಳ್ಳುವ ಭರವಸೆ ನೀಡಿದ್ದು, ಹಲವು ಇಲಾಖೆಗಳು ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ತಿಳಿದುಬಂದಿದೆ.
ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಕೆಎಸ್‍ಆರ್‍ಟಿಸಿ) 2,000 ಚಾಲಕರ ಹುದ್ದೆಗಳಿಗೆ ಅರ್ಜಿಗಳ ಆಹ್ವಾನಿಸಿದೆ. ಕರ್ನಾಟಕ ಪವರ್ ಟ್ರಾನ್ಸ್‍ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) 1,492 ಎಂಜಿನಿಯರ್‍ಗಳಿಗೆ ಅರ್ಜಿ ಆಹ್ವಾನಿಸಿದೆ.
ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ)330 ಎಂಜಿನಿಯರ್‍ಗಳ ಹುದ್ದೆಗಳು ಖಾಲಿ ಇವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಲೆಕ್ಕಾಕಾರಿ ವಿಭಾಗದಲ್ಲಿ 6,406 ಹುದ್ದೆಗಳು ಖಾಲಿಯಿದೆ.
ಕರ್ನಾಟಕ ಅಬಕಾರಿ ಇಲಾಖೆಯು 1,000 ಕಾನ್‍ಸ್ಟೆಬಲ್‍ಗಳು ಮತ್ತು 100 ಸಬ್‍ಇನ್‍ಸ್ಪೆಕ್ಟರ್‍ಗಳ ಹುದ್ದೆಗಳಿಗೆ ಅರ್ಜಿಗೆ ಆಹ್ವಾನಿಸಿದ್ದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 3,484 ಪೊಲೀಸ್ ಪೇದೆಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳ ಕರೆದಿದೆ.
2023ರ ಜನವರಿ/ಫೆಬ್ರವರಿ ವೇಳೆಗೆ ನೇಮಕಾತಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಒಂದು ತಿಂಗಳ ಹಿಂದೆಯೇ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ರಾಜ್ಯ ಸರ್ಕಾರದ ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.
ಕಾರು ಅಪಘಾತದಲ್ಲಿ ಗಂಭೀರ ಗಾಯ, ರಿಷಭ್ ಪಂತ್ ಜೀವನ್ಮರಣ ಹೋರಾಟ
ಬಹುತೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸೇರಿದಂತೆ ವಿವಿಧ ಕಾರಣಗಳಿಗಾಗಿ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಲು ಸಾಧ್ಯವಾಗಿರಲಿಲ್ಲ. ಈಗ ಮಾರ್ಚ್ 2023ರ ಅಂತ್ಯದ ವೇಳೆಗೆ ಕನಿಷ್ಠ 50,000 ಜನರನ್ನು ನೇಮಿಸಿಕೊಳ್ಳುವ ನಿರೀಕ್ಷೆಗಳಿವೆ ಎಂದಿದ್ದಾರೆ.
ಸಿಬ್ಬಂದಿ ಕೊರತೆಯಿಂದ ಪ್ರಸ್ತುತ ಕೆಲಸ ಮಾಡುತ್ತಿರುವ ನೌಕರರಿಗೆ ಕೆಲಸದ ಹೊರೆ ಹೆಚ್ಚಾಗಿದೆ. ಸಿಬ್ಬಂದಿಗಳ ನೇಮಿಸಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ನೇಮಕಾತಿ ಮಾಡಿಕೊಳ್ಳಲು ಸರ್ಕಾರಕ್ಕೆ ಇರುವ ಪ್ರಮುಖ ಅಡಚಣೆ ಎಂದರೆ ನ್ಯಾಯಾಲಯದ ಪ್ರಕರಣಗಳು. ಕಾನೂನು ತೊಡಕುಗಳಿಂದಾಗಿ 45,000 ಹುದ್ದೆಗಳು ಖಾಲಿ ಉಳಿದಿವೆ.
ಇಲಾಖೆಯು 15,000 ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಶಿಕ್ಷಕರ ನೇಮಕಾತಿಯನ್ನು ಇದು ಒಳಗೊಂಡಿದೆ. ಸರಕಾರ ಮಧ್ಯಪ್ರವೇಶಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸಲು ಸರ್ಕಾರವು ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದಲ್ಲಿ ಏಳನೇ ವೇತನ ಆಯೋಗವನ್ನು ರಚಿಸಿದ್ದು, ಮುಂದಿನ ವರ್ಷದ ಆರಂಭದಲ್ಲಿ ರಾಜ್ಯ ಬಜೆಟ್‍ನಲ್ಲಿ ಸಿಎಂ ಬೊಮ್ಮಾಯಿ ಈ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಗಳಿವೆ ಎಂದು ತಿಳಿಸಿದ್ದಾರೆ.
#RecruitmentCapaign, #Recruitment #GovtRecruitment, #BJPGovt,
Disclaimer
This story is auto-aggregated by a computer program and has not been created or edited by Dailyhunt Publisher: eesanje