ರಾಜ್ಯ ಸುದ್ದಿ
ವಾಹನ ಸವಾರರ ಹೊಟ್ಟೆ ಉರಿಸುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ..!

ಬೆಂಗಳೂರು, ನ.29-ನಿನ್ನೆ ಪ್ರತಿ ಲೀಟರ್‍ಗೆ 24 ಹಾಗೂ 27 ಪೈಸೆಗಳಷ್ಟು ಏರಿಕೆಯಾಗಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಂದು ಕ್ರಮವಾಗಿ 21 ಹಾಗೂ 29 ಪೈಸೆ ಹೆಚ್ಚಳವಾಗಿ 85.09 (ಪೆಟ್ರೋಲ್), 76.75 (ಡೀಸೆಲ್) ಏರಿಕೆ ಆಗುವ ಮೂಲಕ ಗ್ರಾಹಕರ ಕೈ ಸುಡುತ್ತಿದೆ.
ಕೊರೊನಾದ ಸಂಕಷ್ಟದ ಕಾಲದಲ್ಲಿ ಹಣ್ಣು, ತರಕಾರಿ, ದಿನಸಿ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಏರಿಕೆಯಾಗುತ್ತಿರುವುದರಿಂದ ಕಂಗೆಟ್ಟಿರುವ ಸಾರ್ವಜನಿಕರು ಈಗ ಪೆಟ್ರೋಲ್ ಹಾಗೂ ಡೀಸೆಲ್ ದರದ ಮೇಲೆಯೂ ಏರಿಕೆಯಾಗುತ್ತಿರುವುದರಿಂದ ಹೆಚ್ಚಿನ ದರವನ್ನು ವ್ಯಯಿಸುವ ಅನಿವಾರ್ಯತೆ ಎದುರಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯು ಕಡಿಮೆಯಿದ್ದರೂ ಕೂಡ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ನಿಯಂತ್ರಿಸುವಲ್ಲಿ ಎಡವಿದೆ ಎಂದು ಸಾರ್ವಜನಿಕರು ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.
ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಕಚ್ಚಾ ತೈಲ ಬೆಲೆಯು ಹೆಚ್ಚಾಗುತ್ತಲೇ ಇದೆ, ಕೊರೊನಾ ಸಂಕಷ್ಟದ ಸಮಯದಲ್ಲಾದರೂ ಇವುಗಳ ಬೆಲೆಯನ್ನು ನಿಯಂತ್ರಿಸಬಾರದೇ ಎಂದು ಕೆಲವು ಗ್ರಾಹಕರು ಹಿಡಿಶಾಪ ಹಾಕುತ್ತಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಕಡಿಮೆಯಾದಾಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಸುವುದು ವಾಡಿಕೆ, ಈ ವಾಡಿಕೆ ಮೊದಲಿನಿಂದಲೂ ನಡೆದುಕೊಂಡು ಬರುತ್ತಿದೆ. ಆದರೆ ಕೇಂದ್ರ ಸರ್ಕಾರವು ಈ ನಿಯಮವನ್ನು ಮರೆತಿರುವುದರಿಂದಲೋ ಏನೋ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಗಣನೀಯವಾಗಿ ಏರಿಕೆ ಆಗುತ್ತಲೇ ಇದೆ.
ಲಾಕ್‍ಡೌನ್ ಆಗಿದ್ದ ಜೂನ್ ತಿಂಗಳಲ್ಲಿ ನಿರಂತರವಾಗಿ 23 ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿತ್ತು, ಅದೇ ರೀತಿ ಜುಲೈನಲ್ಲಿ 8 ದಿನ, ನಂತರದ ತಿಂಗಳಿನಲ್ಲೂ ಆಗಾಗ್ಗೆ ಇದರ ದರಗಳು ಏರಿಕೆಯಾಗುತ್ತಿದ್ದವು, ಆದರೆ ನವೆಂಬರ್ ತಿಂಗಳಿನಲ್ಲಿ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಹೆಚ್ಚಳವಾಗುತ್ತಿರುವುದರಿಂದ ವಾಹನ ಸವಾರರ ಜೋಬಿಗೆ ಹೆಚ್ಚಿನ ಹೊರೆ ಬಿದ್ದು ಪರಿತಪಿಸುವಂತಾಗಿದೆ.
ಪ್ರಮುಖ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ದರಗಳು:
ಚೆನ್ನೈ: 85.31 ರೂ. (ಪೆಟ್ರೋಲ್), 77.84 ರೂ.(ಡೀಸೆಲ್)
ನವದೆಹಲಿ: 82.34ರೂ. (ಪೆಟ್ರೋಲ್), 72.42 ರೂ.(ಡೀಸೆಲ್)
ಕೋಲ್ಕತ್ತಾ:83.87ರೂ. (ಪೆಟ್ರೋಲ್), 75.99ರೂ.(ಡೀಸೆಲ್)
ಮುಬೈ:89.02ರೂ. (ಪೆಟ್ರೋಲ್), 78.97ರೂ.(ಡೀಸೆಲ್)