ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಇಂದು ಮಹತ್ವದ ದಿನವಾಗಿದ್ದು, ಹೈಕೋರ್ಟ್‌ನಿಂದ ನಿರ್ಣಾಯಕ ತೀರ್ಪು ಹೊರಬೀಳಲಿದೆ. ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವುದನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿರುವ ಅರ್ಜಿಯ ಮೇಲೆ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಲಿದ್ದು, ಹೈಕೋರ್ಟ್ ತೀರ್ಪಿನ ಮೇಲೆ ನಟ ದರ್ಶನ್ ಭವಿಷ್ಯ ನಿಂತಿದೆ. ನಿನ್ನೆ ಈ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಹೈಕೋರ್ಟ್, ತೀರ್ಪನ್ನು ಇಂದಿಗೆ (ಬುಧವಾರ) ಕಾಯ್ದಿರಿಸಿತ್ತು. ದರ್ಶನ್ ಪರ ವಕೀಲ ಅಸ್ಮತ್ ಪಾಷಾ ಅವರು ತುರ್ತು ವಿಚಾರಣೆಗೆ ಮನವಿ ಮಾಡಿ, ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದಕ್ಕೆ ತಡೆ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಒಂದು ವೇಳೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದರೆ, ಸೆಷನ್ಸ್ ಕೋರ್ಟ್‌ನಲ್ಲಿ ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ಇಂದೇ ದಾಖಲಾಗುವ ಸಾಧ್ಯತೆಯಿದೆ. ಒಂದು ವೇಳೆ ದರ್ಶನ್ ಪರವಾದ ಆದೇಶ ಬಂದರೆ ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೆ ತಡೆಯಾಗಲಿದೆ. ಇಂದು ಪ್ರಕಟವಾಗಲಿರುವ ಹೈಕೋರ್ಟ್ ಆದೇಶವು ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯ ದಿಕ್ಕನ್ನೇ ಬದಲಿಸುವ ನಿರೀಕ್ಷೆಯಿದ್ದು, ಎಲ್ಲರ ಕಣ್ಣು ನ್ಯಾಯಾಲಯದ ತೀರ್ಪಿನ ಮೇಲಿದೆ.
