Dailyhunt

ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೂರು ನೀಡಿದ್ದ ಮಹಿಳೆ ದಿಢೀರ್ ನಾಪತ್ತೆ

Freedomtv 1 week ago

ಬೆಂಗಳೂರು: ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಹಾಗೂ ಬೆತ್ತಲೆ ವಿಡಿಯೋ ಕಾಲ್ ಆರೋಪದ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದ ಸಂತ್ರಸ್ತ ಮಹಿಳೆಯು ದಿಢೀರ್ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸ್ವಾಮೀಜಿಯವರು ತಮಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದ ಈ ಮಹಿಳೆ, ಇದೀಗ ಪೊಲೀಸರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆಕೆಯ ಅಧಿಕೃತ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ ಹಾಗೂ ಆಕೆಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ.

ಇನ್ನೊಂದೆಡೆ, ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ಜಯಮೃತ್ಯುಂಜಯ ಸ್ವಾಮೀಜಿಯವರು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯ ವಿರುದ್ಧವೇ ಪ್ರತಿದೂರು ದಾಖಲಿಸಿದ್ದಾರೆ. ಮಹಿಳೆಯು ಅನಾಥಾಶ್ರಮ ನಡೆಸುತ್ತಿರುವುದಾಗಿ ಹೇಳಿ ಪರಿಚಯ ಮಾಡಿಕೊಂಡು, ನಂತರ ತಮ್ಮ ತೇಜೋವಧೆ ಮಾಡುವುದಾಗಿ ಬೆದರಿಸಿ 3 ಕೋಟಿ ರೂಪಾಯಿ ಹಣಕ್ಕೆ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೀಸಲಾತಿ ಹೋರಾಟದ ಮೂಲಕ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದ ಸ್ವಾಮೀಜಿಯವರ ಸುತ್ತ ಇಂತಹದೊಂದು ವಿವಾದ ಸೃಷ್ಟಿಯಾಗಿರುವುದು ಪಂಚಮಸಾಲಿ ಸಮುದಾಯದಲ್ಲಿ ತಲ್ಲಣ ಮೂಡಿಸಿದೆ. ಒಂದು ಕಡೆ ಲೈಂಗಿಕ ಕಿರುಕುಳದ ಆರೋಪ, ಮತ್ತೊಂದೆಡೆ ಹನಿಟ್ರ್ಯಾಪ್ ಅಥವಾ ಬ್ಲಾಕ್‌ಮೇಲ್ ಸಂಚಿನ ಶಂಕೆ ವ್ಯಕ್ತವಾಗುತ್ತಿರುವುದರಿಂದ ಸತ್ಯಾಸತ್ಯತೆ ತಿಳಿಯಲು ಪೊಲೀಸರು ಮಹಿಳೆಯ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸಂತ್ರಸ್ತೆಯ ನಾಪತ್ತೆಯು ಈ ಹೈಪ್ರೊಫೈಲ್ ಪ್ರಕರಣವನ್ನು ಮತ್ತಷ್ಟು ನಿಗೂಢವಾಗಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Freedomtv