Dailyhunt Logo
  • Light mode
    Follow system
    Dark mode
    • Play Story
    • App Story

ಕೆಪಿಸಿಸಿ ಅಧ್ಯಕ್ಷರಾಗಿ ಸತೀಶ್ ಜಾರಕಿಹೊಳಿ-ಸಿದ್ದರಾಮಯ್ಯ ಪುತ್ರನಿಗೆ ಮಂತ್ರಿ ಪಟ್ಟ!

Freedomtv 1 week ago

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಗಮನ ಮತ್ತು ಡಿ.ಕೆ.ಶಿವಕುಮಾರ್ ಅವರ ಸಿಎಂ ಪಟ್ಟಾಭಿಷೇಕದ ಸುಳಿವು ಬೆನ್ನಲ್ಲೇ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ದೊಡ್ಡ ಮಟ್ಟದ ಸಾಂಸ್ಥಿಕ ಬದಲಾವಣೆಗೆ ಹೈಕಮಾಂಡ್ ಮುನ್ನುಡಿ ಬರೆದಿದೆ. ಸರ್ಕಾರ ಮತ್ತು ಸಂಘಟನೆ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳಲು 'ಕೈ' ನಾಯಕರು ಬಿಗ್ ಪ್ಲ್ಯಾನ್ ರೂಪಿಸುತ್ತಿದ್ದು, ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಗದ್ದುಗೆಗೆ ಲೋಕೋಪಯೋಗಿ ಸಚಿವ,ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರ ಹೆಸರು ಮುಂಚೂಣಿಗೆ ಬಂದಿದೆ.

ಕಾಂಗ್ರೆಸ್ ವಲಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವೆಂದರೆ ಅದು ಕೇವಲ ಸಂಘಟನೆಯ ಜವಾಬ್ದಾರಿಯಲ್ಲ, ಬದಲಿಗೆ ಮುಂದಿನ ಮುಖ್ಯಮಂತ್ರಿ ಹುದ್ದೆಯ ಹೆಬ್ಬಾಗಿಲು! ಸಿದ್ದರಾಮಯ್ಯ ಬಣದಿಂದ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಅತ್ಯಂತ ಬಲವಾಗಿ ಪ್ರಸ್ತಾಪಿಸಲಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಪಕ್ಷದ ಹಿಡಿತ ಸಾಧಿಸಲು ಮತ್ತು ಅಹಿಂದ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಮತಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳಲು ಇವರೇ ಸೂಕ್ತ ಎಂಬ ಲೆಕ್ಕಾಚಾರ ಹೈಕಮಾಂಡ್‌ನದ್ದಾಗಿದೆ. ಈ ಮಹತ್ವದ ಜವಾಬ್ದಾರಿಯ ಕುರಿತು ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, "ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಸ್ವೀಕರಿಸಲು ಸಿದ್ಧ" ಎಂದು ಹೈಕಮಾಂಡ್ ಅಂಗಳಕ್ಕೆ ಚೆಂಡನ್ನು ಎಸೆದಿದ್ದಾರೆ. ಈ ಮೂಲಕ ಅವರು 2028ರ ಸಿಎಂ ರೇಸ್‌ಗೆ ಈಗಿನಿಂದಲೇ ಅಡಿಪಾಯ ಹಾಕುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಅಸಮಾಧಾನ ತಣಿಸಲು 4 DCM ಹುದ್ದೆ ಸೃಷ್ಟಿ!
ನಾಯಕತ್ವ ಬದಲಾವಣೆಯಿಂದ ಉಂಟಾಗಬಹುದಾದ ಜಾತೀಯ ಮತ್ತು ಪ್ರಾದೇಶಿಕ ಅಸಮಾಧಾನ ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಇದೀಗ 'ಬಹು ಉಪಮುಖ್ಯಮಂತ್ರಿ'ಸೂತ್ರವನ್ನು ಮುಂದಿಟ್ಟಿದೆ. ರಾಜ್ಯದಲ್ಲಿ ಲಿಂಗಾಯತ, ದಲಿತ, ಮುಸ್ಲಿಂ ಹಾಗೂ ಹಿಂದುಳಿದ ವರ್ಗಗಳಿಗೆ ಸಮಾನ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಕನಿಷ್ಠ 3 ರಿಂದ 4 ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಈ ರೇಸ್‌ನಲ್ಲಿ ಪ್ರಮುಖವಾಗಿ ಎಂ.ಬಿ. ಪಾಟೀಲ್ (ಲಿಂಗಾಯತ ಕೋಟಾ),ಪ್ರಿಯಾಂಕ್ ಖರ್ಗೆ (ದಲಿತ ಕೋಟಾ),ಜಮೀರ್ ಅಹಮದ್ ಖಾನ್ (ಮುಸ್ಲಿಂ ಕೋಟಾ) ಅವರ ಹೆಸರುಗಳು ಫೈನಲ್ ಹಂತದಲ್ಲಿವೆ ಎನ್ನಲಾಗಿದೆ.

ಸಿದ್ದು ಸಂತೃಪ್ತಿಗೆ ಯತೀಂದ್ರಗೆ ಮಂತ್ರಿ ಸ್ಥಾನ!
ಇನ್ನೊಂದೆಡೆ, ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯಲು ಸಿದ್ದರಾಮಯ್ಯ ಅವರ ಸಹಕಾರ ಅತ್ಯಗತ್ಯವಾಗಿರುವುದರಿಂದ, ಅವರ ಪುತ್ರ ಹಾಗೂ ಎಂಎಲ್‌ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಮಾತುಕತೆಗಳು ಚುರುಕಾಗಿವೆ. ಇದರ ನಡುವೆ, ಮುಂಬರಲಿರುವ ರಾಜ್ಯಸಭೆ ಚುನಾವಣೆಯೂ ಕುತೂಹಲ ಮೂಡಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸ್ವತಃ ಸಿದ್ದರಾಮಯ್ಯ ಅವರ ಹೆಸರೂ ದೆಹಲಿ ಮಟ್ಟದಲ್ಲಿ ಕೇಳಿಬರುತ್ತಿದೆ.

ಸಿಎಂ ಬದಲಾವಣೆ ಬೆನ್ನಲ್ಲೇ ರಾಜ್ಯಪಾಲರು ದಿಢೀರ್ ಮುಂಬೈಗೆ ಪ್ರಯಾಣ ಬೆಳೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಮುಂದಿನ ಕೆಲವು ದಿನಗಳು ಕರ್ನಾಟಕ ರಾಜಕಾರಣದ ದಿಕ್ಸೂಚಿಯನ್ನು ಬದಲಾಯಿಸಲಿವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

#FreedomTV #KarnatakaPolitics #KPCCPresident #SatishJarkiholi #DKShivakumar #Siddaramaiah #CongressPowerShift #AHINDA #KarnatakaDCM #BreakingNewsKarnataka #BengaluruPolitics #CongressHighCommand #YathindraSiddaramaiah #PoliticalTwist #ಕನ್ನಡಸುದ್ದಿ

Dailyhunt
Disclaimer: This content has not been generated, created or edited by Dailyhunt. Publisher: Freedomtv