ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಭೀಕರ ಮುಸುಕು ಕಳ್ಳರ ( ಮಾಸ್ಕ್ ಕಳ್ಳರು) ಹಾವಳಿ ಹೆಚ್ಚಾಗಿದ್ದು ಬೀದರ ನ ಜನತೆಗೆ ನಿದ್ದೆಯೇ ಇಲ್ಲ., ಒಂದೇ ದಿನ ಸರಣಿ ಮನೆಗಳ್ಳತನ ಆದ ಕಾರಣ ಸಾರ್ವಜನಿಕರಲ್ಲಿ ಭಯ ಹುಟ್ಟಿದೆ. ನಿನ್ನೆ ತಡರಾತ್ರಿ ಹುಮ್ನಾಬಾದ್ ಹಾಗೂ ಭಾಲ್ಕಿ ಪಟ್ಟಣಗಳ ಹಲವು ಮನೆಗಳಿಗೆ ಕನ್ನ ಹಾಕಿರುವ ಖದೀಮರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಭಾಲ್ಕಿ ಪಟ್ಟಣದ ಗುರು ಕಾಲೋನಿಯಲ್ಲಿ ಒಂದೇ ರಾತ್ರಿ ಮೂರು ಮನೆಗಳ ಬೀಗ ಮುರಿದು ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ.ಸುನೀತಾ ಹನುಮಂತ ಎಂಬುವವರ ಮನೆಗೆ ನುಗ್ಗಿದ ಖದೀಮರು, ಅಲ್ಮೇರಾದಲ್ಲಿದ್ದ ಬರೋಬ್ಬರಿ 6 ತೋಲೆ ಚಿನ್ನಾಭರಣ ಹಾಗೂ ರೂ. 1 ಲಕ್ಷ ನಗದು ಹಣವನ್ನು ದೋಚಿದ್ದಾರೆ.
ಇದೇ ಕಾಲೋನಿಯ ಯೋಗೇಶ್ ಹಿರೇಮಠ ಅವರ ಮನೆಯ ಬೀಗ ಒಡೆದು 5 ಗ್ರಾಂ ಚಿನ್ನ ಮತ್ತು ರೂ. 8 ಸಾವಿರ ನಗದು ಹಣವನ್ನು ಕಳವು ಮಾಡಿದ್ದಾರೆ. ಇದೇ ವೇಳೆ ಸುತ್ತಮುತ್ತಲಿನ ಇನ್ನೂ ಹಲವು ಮನೆಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಬೆಲೆಬಾಳುವ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಬರಿಗೈಲಿ ವಾಪಸ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಭಾಲ್ಕಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂರು ಮನೆ ಕನ್ನ- ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಲೂಟಿ!
ಕಳ್ಳರ ಮಾಸ್ಕ್ ಗ್ಯಾಂಗ್ ಭಾಲ್ಕಿ ಮಾತ್ರವಲ್ಲದೆ ಹುಮ್ನಾಬಾದ್ ಪಟ್ಟಣದಲ್ಲೂ ಸರಣಿ ಕಳ್ಳತನ ನಡೆಸಿ ಪೊಲೀಸರಿಗೆ ಬಹಿರಂಗ ಸವಾಲು ಹಾಕಿದೆ. ಹುಮ್ನಾಬಾದ್‌ನ ಬಸವ ನಗರದಲ್ಲಿರುವ ಮೂರು ಮನೆಗಳಲ್ಲಿ ಕಳ್ಳತನ ನಡೆದಿದೆ.ಶಂಕರ್ ರಾಥೋಡ್, ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸಾಯಿಬಣ್ಣ ಹಾಗೂ ಜಗನ್ನಾಥ್ ಸದ್ಲಾಪುರ ಎಂಬುವವರ ಮನೆಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ.ವಾರಾಂತ್ಯದ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ನುಗ್ಗಿದ ಕಳ್ಳರು, ಒಟ್ಟಾರೆ ಸುಮಾರು 20 ತೋಲೆ ಬಂಗಾರದ ಆಭರಣ ಹಾಗೂ ಲಕ್ಷಾಂತರ ನಗದು ಹಣವನ್ನು ದೋಚಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರಿಂದ ತನಿಖೆ ಚುರುಕು!
ಒಂದೇ ದಿನ ಸರಣಿ ಕಳ್ಳತನ ನಡೆದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಹುಮ್ನಾಬಾದ್ DYSP ಮಡೋಳಪ್ಪ ಅವರು ಕಳ್ಳತನ ನಡೆದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಸುಳಿವು ಪತ್ತೆ ಹಚ್ಚಲು ಬೆರಳಚ್ಚು ತಜ್ಞರು ಹಾಗೂ ಡಾಗ್ ಸ್ಕ್ವಾಡ್ ತಂಡದವರು ಸ್ಥಳಕ್ಕೆ ಆಗಮಿಸಿ ಪ್ರಮುಖ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಒಂದೇ ದಿನ ಜಿಲ್ಲೆಯ ಎರಡು ಪ್ರಮುಖ ಪಟ್ಟಣಗಳಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿರುವ ಈ ಮುಸುಕುಧಾರಿ ಕಳ್ಳರ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಶೋಧಿಸುತ್ತಿದ್ದಾರೆ.
#BidarCrime #SerialTheft #MaskGang #BhalkiNews #Humnabad #HouseBurglary #GoldLooted #BidarPolice #CrimeAlert #KannadaNews #FreedomTV #KarnatakaCrime
