Dailyhunt Logo
  • Light mode
    Follow system
    Dark mode
    • Play Story
    • App Story
ಭಾರತದಲ್ಲಿ ಮೊದಲ ಬಾರಿಗೆ ಮಾಸಿಕ ಸೇವಾ ಉತ್ಪಾದನಾ ಸೂಚ್ಯಂಕ (ISP) ಬಿಡುಗಡೆ

ಭಾರತದಲ್ಲಿ ಮೊದಲ ಬಾರಿಗೆ ಮಾಸಿಕ ಸೇವಾ ಉತ್ಪಾದನಾ ಸೂಚ್ಯಂಕ (ISP) ಬಿಡುಗಡೆ

GK KANNADA 1 week ago

Share With Friends

ದೇಶದ ಸೇವಾ ವಲಯದ ಬೆಳವಣಿಗೆಯನ್ನು ಮಾಸಿಕವಾಗಿ ಅಳೆಯುವ ಉದ್ದೇಶದಿಂದ ಕೇಂದ್ರದ ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಮೊದಲ ಬಾರಿಗೆ ಸೇವಾ ಉತ್ಪಾದನಾ ಸೂಚ್ಯಂಕ (Index of Services Production - ISP)ದ ಪ್ರಾಯೋಗಿಕ (Trial) ಆವೃತ್ತಿಯನ್ನು ಬಿಡುಗಡೆ ಮಾಡಿದೆ.

2026ರ ಏಪ್ರಿಲ್ ತಿಂಗಳ ಮಾಹಿತಿಯನ್ನು ಒಳಗೊಂಡಿರುವ ಈ ಸೂಚ್ಯಂಕಕ್ಕೆ 2024-25 ಅನ್ನು ಆಧಾರ ವರ್ಷವಾಗಿ ನಿಗದಿಪಡಿಸಲಾಗಿದೆ.

ಭಾರತದ ಒಟ್ಟು ಆರ್ಥಿಕತೆಯಲ್ಲಿ ಸೇವಾ ವಲಯದ ಪಾಲು 50%ಕ್ಕಿಂತ ಹೆಚ್ಚಿರುವುದರಿಂದ, ಈ ಸೂಚ್ಯಂಕವು ದೇಶದ ಆರ್ಥಿಕ ಚಟುವಟಿಕೆಗಳನ್ನು ಅಳೆಯುವ ಮಹತ್ವದ ಸಾಧನವಾಗಲಿದೆ. ಇದುವರೆಗೆ ಕೈಗಾರಿಕಾ ಉತ್ಪಾದನೆಯನ್ನು ಅಳೆಯಲು ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP) ಮಾತ್ರ ಲಭ್ಯವಿದ್ದರೆ, ಇದೀಗ ಸೇವಾ ವಲಯಕ್ಕೂ ಪ್ರತ್ಯೇಕ ಸೂಚ್ಯಂಕ ಸಿದ್ಧವಾಗಿದೆ.

ಪ್ರಾಯೋಗಿಕ ISPಯಲ್ಲಿ 19 ಪ್ರಮುಖ ಸೇವಾ ಉಪವಲಯಗಳನ್ನು ಒಳಗೊಂಡಿದ್ದು, ಇವು ದೇಶದ ಔಪಚಾರಿಕ ಸೇವಾ ವಲಯದ ಸುಮಾರು 60% ಪಾಲನ್ನು ಪ್ರತಿನಿಧಿಸುತ್ತವೆ.

ಏನಿದು ಸೇವಾ ಉತ್ಪಾದನಾ ಸೂಚ್ಯಂಕ (ISP-Index of Services Production)..?
ಸೇವಾ ಉತ್ಪಾದನಾ ಸೂಚ್ಯಂಕವು ದೇಶದ ಔಪಚಾರಿಕ ಸೇವಾ ವಲಯದ ಮಾಸಿಕ ಉತ್ಪಾದನೆ ಹಾಗೂ ಬೆಳವಣಿಗೆಯನ್ನು ಅಳೆಯುವ ಹೊಸ ಸೂಚ್ಯಂಕವಾಗಿದೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP-Index of Industrial Production) ಕೈಗಾರಿಕಾ ಕ್ಷೇತ್ರವನ್ನು ಅಳೆಯುವಂತೆಯೇ, ISP ಸೇವಾ ವಲಯದ ಅಲ್ಪಾವಧಿಯ ಕಾರ್ಯಕ್ಷಮತೆಯನ್ನು ಅಳೆಯಲಿದೆ.

MoSPI ಪ್ರತಿ ತಿಂಗಳ 29ನೇ ತಾರೀಖಿನಂದು ಸೇವಾ ಉತ್ಪಾದನಾ ಸೂಚ್ಯಂಕವನ್ನು ಪ್ರಕಟಿಸುವ ಯೋಜನೆ ಹೊಂದಿದೆ. ಆರಂಭಿಕ ಹಂತದಲ್ಲಿ ಇದು ಪ್ರಾಯೋಗಿಕ ಸೂಚ್ಯಂಕವಾಗಿ ಪ್ರಕಟವಾಗಲಿದ್ದು, ನಂತರ ಅದರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ.

⮞ ISP ಅಗತ್ಯ ಏಕೆ..?
ಇದುವರೆಗೆ ಭಾರತದಲ್ಲಿ ಸೇವಾ ವಲಯದ ಕಾರ್ಯಕ್ಷಮತೆಯನ್ನು ಮಾಸಿಕವಾಗಿ ಅಳೆಯುವ ಪ್ರತ್ಯೇಕ ಸೂಚ್ಯಂಕ ಇರಲಿಲ್ಲ. ಹೊಸ ISP ಮೂಲಕ ಸೇವಾ ವಲಯದ ತ್ವರಿತ ಮಾಹಿತಿ ಲಭ್ಯವಾಗಲಿದೆ.

ಆರ್ಥಿಕತೆಯ ಅಲ್ಪಾವಧಿಯ ಬೆಳವಣಿಗೆಯನ್ನು ಹೆಚ್ಚು ನಿಖರವಾಗಿ ಅಳೆಯಲು ಸಾಧ್ಯವಾಗಲಿದೆ.
ಸಾಕ್ಷ್ಯಾಧಾರಿತ ನೀತಿ ರೂಪಿಸಲು ಸರ್ಕಾರಕ್ಕೆ ನೆರವಾಗಲಿದೆ.ಉದ್ಯಮಿಗಳು, ಹೂಡಿಕೆದಾರರು ಹಾಗೂ ಸಂಶೋಧಕರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸಲಿದೆ.

⮞ ದತ್ತಾಂಶ ಸಂಗ್ರಹ ಹೇಗೆ..?
ISP ಅನ್ನು 2025ರ ಮೇ ತಿಂಗಳಲ್ಲಿ ರಚಿಸಲಾದ ತಾಂತ್ರಿಕ ಸಲಹಾ ಸಮಿತಿ (TAC-ISP) ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿದೆ.ಸೂಚ್ಯಂಕಕ್ಕಾಗಿ ವಿವಿಧ ಅಧಿಕೃತ ಮೂಲಗಳ ಮಾಹಿತಿಯನ್ನು ಬಳಸಲಾಗಿದೆ.
*GST ದತ್ತಾಂಶ: ವ್ಯಾಪಾರ, ವಸತಿ, ದೂರಸಂಪರ್ಕ, ರಿಯಲ್ ಎಸ್ಟೇಟ್, ಐಟಿ ಸೇವೆಗಳು.
*ಆಡಳಿತಾತ್ಮಕ ದಾಖಲೆಗಳು: ರೈಲ್ವೆ, ವಿಮಾನ ಸಾರಿಗೆ, ಬ್ಯಾಂಕಿಂಗ್ ಹಾಗೂ ವಿಮೆ.
*ASISSE ಸಮೀಕ್ಷೆ: ಸೇವಾ ವಲಯದ ನೋಂದಾಯಿತ ಸಂಸ್ಥೆಗಳ ವಾರ್ಷಿಕ ಸಮೀಕ್ಷೆಯ ಮಾಹಿತಿ.

ಏಪ್ರಿಲ್ 2026ರ ಪ್ರಮುಖ ಅಂಕಿಅಂಶಗಳು :
2026ರ ಏಪ್ರಿಲ್‌ನಲ್ಲಿ 19 ಉಪವಲಯಗಳಲ್ಲಿ 14 ಉಪವಲಯಗಳು ವರ್ಷದಿಂದ ವರ್ಷಕ್ಕೆ (YoY) ದ್ವಿಅಂಕಿ ಬೆಳವಣಿಗೆ ದಾಖಲಿಸಿವೆ.

ಅತ್ಯಧಿಕ ಬೆಳವಣಿಗೆ ಕಂಡ ಕ್ಷೇತ್ರಗಳು:
ವಸತಿ ಹಾಗೂ ಆಹಾರ ಸೇವೆಗಳು - 37.2%
ಚಿಲ್ಲರೆ ವ್ಯಾಪಾರ - 30.8%
ಆಡಳಿತಾತ್ಮಕ ಮತ್ತು ಬೆಂಬಲ ಸೇವೆಗಳು - 28.7%
ರಿಯಲ್ ಎಸ್ಟೇಟ್ - 27.7%
ದೂರಸಂಪರ್ಕ ಸೇವೆಗಳು - 22.8%
ಬ್ಯಾಂಕಿಂಗ್, ವಿಮೆ, ಸಗಟು ವ್ಯಾಪಾರ ಹಾಗೂ ಮಾಹಿತಿ ತಂತ್ರಜ್ಞಾನ (IT) ಸೇವೆಗಳಲ್ಲಿಯೂ ಗಮನಾರ್ಹ ಬೆಳವಣಿಗೆ ದಾಖಲಾಗಿದೆ.

ಇಳಿಕೆ ಕಂಡ ಕ್ಷೇತ್ರಗಳು :
ಎರಡು ಸಾರಿಗೆ ಸಂಬಂಧಿತ ವಲಯಗಳಲ್ಲಿ ಮಾತ್ರ ಕುಸಿತ ಕಂಡುಬಂದಿದೆ.
ವಿಮಾನ ಸಾರಿಗೆ: -13.9%
ರೈಲು ಸಾರಿಗೆ: -0.4%


Dailyhunt
Disclaimer: This content has not been generated, created or edited by Dailyhunt. Publisher: Spardha Times