Dailyhunt Logo
  • Light mode
    Follow system
    Dark mode
    • Play Story
    • App Story
ಸಾರ್ವಜನಿಕ ವಿತರಣಾ ವ್ಯವಸ್ಥೆ SARTHAK-PDS ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಸಾರ್ವಜನಿಕ ವಿತರಣಾ ವ್ಯವಸ್ಥೆ SARTHAK-PDS ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

GK KANNADA 5 days ago

Share With Friends

ಕೇಂದ್ರ ಸಚಿವ ಸಂಪುಟವು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (PDS) ತಂತ್ರಜ್ಞಾನದ ಮೂಲಕ ನವೀಕರಿಸಲು ಮತ್ತು ಬಲಪಡಿಸಲು SARTHAK-PDS ಯೋಜನೆಗೆ ಅಧಿಕೃತ ಅನುಮೋದನೆ ನೀಡಿದೆ. "Scheme for Assistance in Ration Transport and Handling-Income with Automation in PDS" ಎಂಬ ಪೂರ್ಣ ರೂಪ ಹೊಂದಿರುವ ಈ ಯೋಜನೆಗೆ ₹25,530 ಕೋಟಿ ಕೇಂದ್ರ ಅನುದಾನ ಮಂಜೂರಾಗಿದೆ.

ಯೋಜನೆ 2026ರ ಏಪ್ರಿಲ್‌ನಿಂದ 2031ರ ಮಾರ್ಚ್‌ವರೆಗೆ ಜಾರಿಯಲ್ಲಿರಲಿದೆ.

ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರ ಪ್ರಕಾರ, SARTHAK-PDS ಯೋಜನೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಮೂಲಭೂತ ಹಾಗೂ ರಚನಾತ್ಮಕ ಸುಧಾರಣೆಗೆ ದಾರಿ ಮಾಡಿಕೊಡಲಿದೆ.

ಈ ಹೊಸ ಯೋಜನೆಯಡಿ ರಾಜ್ಯಗಳ ಒಳಗೆ ಆಹಾರ ಧಾನ್ಯ ಸಾಗಣೆ, ಹ್ಯಾಂಡ್ಲಿಂಗ್‌ ಹಾಗೂ ನ್ಯಾಯಬೆಲೆ ಅಂಗಡಿ (FPS) ವಿತರಕರಿಗೆ ಹೆಚ್ಚುವರಿ ಮಾರ್ಜಿನ್‌ ನೀಡಲಾಗುತ್ತದೆ. ಇದು ಕೊನೆಯ ಹಂತದ ಆಹಾರ ವಿತರಣೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

₹25,530 ಕೋಟಿ ಬಜೆಟ್, 5 ವರ್ಷಗಳ ಅವಧಿ :
ಈ ದೀರ್ಘಾವಧಿ ಯೋಜನೆಗೆ ಕೇಂದ್ರ ಸರ್ಕಾರವು ₹25,530 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಈ ಯೋಜನೆಯು 2026ರ ಏಪ್ರಿಲ್‌ನಿಂದ ಆರಂಭಗೊಂಡು 2031ರ ಮಾರ್ಚ್‌ವರೆಗೆ (5 ವರ್ಷಗಳ ಕಾಲ) ದೇಶಾದ್ಯಂತ ಜಾರಿಯಲ್ಲಿರಲಿದೆ.

ಎರಡು ಪ್ರಮುಖ ಯೋಜನೆಗಳ ಏಕೀಕರಣ :
SARTHAK-PDS ಯೋಜನೆಯಡಿ ಪ್ರಸ್ತುತ ಚಾಲ್ತಿಯಲ್ಲಿರುವ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ತರಲಾಗಿದೆ:
1.ರಾಜ್ಯಗಳ ಒಳಗಿನ ಆಹಾರ ಧಾನ್ಯ ಸಾಗಣೆ ಮತ್ತು ನಿರ್ವಹಣೆ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ರಾಜ್ಯದ ಒಳಗೆ ಆಹಾರ ಧಾನ್ಯಗಳ ಸಾಗಣೆ ವೆಚ್ಚ ಮತ್ತು ನ್ಯಾಯಬೆಲೆ ಅಂಗಡಿ (FPS) ಮಾಲೀಕರ ಮಾರ್ಜಿನ್ ಹೆಚ್ಚಳಕ್ಕೆ ಧನಸಹಾಯ.

2.SMART PDS: ತಂತ್ರಜ್ಞಾನದ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ಯೋಜನೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು NFSA
ಭಾರತದಲ್ಲಿ ಅಗತ್ಯ ಆಹಾರ ಧಾನ್ಯಗಳನ್ನು ಸಬ್ಸಿಡಿ ದರದಲ್ಲಿ ಜನರಿಗೆ ತಲುಪಿಸುವ ಪ್ರಮುಖ ವ್ಯವಸ್ಥೆಯೇ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS). 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಸುಮಾರು 80 ಕೋಟಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ.

ತಂತ್ರಜ್ಞಾನ ಆಧಾರಿತ ಹೊಸ ವ್ಯವಸ್ಥೆ :
ಡಿತರ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಸೋರಿಕೆಯನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನಗಳಾದ AI, ಮೆಷಿನ್ ಲರ್ನಿಂಗ್ (ML), ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP) ಹಾಗೂ ಬ್ಲಾಕ್‌ಚೈನ್‌ಗಳನ್ನು ಬಳಸಲಾಗುತ್ತಿದೆ. ಇದರ ಪ್ರಮುಖ ಮೂರು ಆಧಾರಸ್ತಂಭಗಳು ಹೀಗಿವೆ:
*ನಿರ್ಮಲ್ (Nirmal): ಪಡಿತರ ಫಲಾನುಭವಿಗಳ ನೈಜ-ಕಾಲದ (Real-time) ಮಾಹಿತಿ ಹಾಗೂ AI ಆಧಾರಿತ ಡೇಟಾಬೇಸ್ ನಿರ್ವಹಣೆ.
*ಆಶಾ (ASHA): ಸಾರ್ವಜನಿಕರು ಮತ್ತು ಪಡಿತರ ಚೀಟಿದಾರರ ದೂರುಗಳನ್ನು ಪರಿಹರಿಸಲು ಸಿದ್ಧಪಡಿಸಲಾದ ಬಹುಭಾಷಾ AI ನಾಗರಿಕ ಸಂಪರ್ಕ ವೇದಿಕೆ.
*ಸಕ್ಷಮ್ (Saksham): ಕ್ಯೂಆರ್ ಕೋಡ್ (QR Code) ಪತ್ತೆಹಚ್ಚುವಿಕೆ ಮತ್ತು ಜಿಪಿಎಸ್ (GPS) ವಾಹನ ಟ್ರ್ಯಾಕಿಂಗ್ ಹೊಂದಿರುವ ಅತ್ಯಾಧುನಿಕ ಸರಕು ಸರಪಳಿ (Supply Chain) ನಿರ್ವಹಣಾ ವ್ಯವಸ್ಥೆ.

ಯೋಜನೆಯ ಪ್ರಮುಖ ಪ್ರಯೋಜನಗಳು :
*80 ಕೋಟಿ ಜನರಿಗೆ ಲಾಭ:
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಿರುವ ದೇಶದ ಸುಮಾರು 80 ಕೋಟಿ ಫಲಾನುಭವಿಗಳಿಗೆ ಸಬ್ಸಿಡಿ ದರದ ಆಹಾರ ಧಾನ್ಯಗಳು ಯಾವುದೇ ವ್ಯತ್ಯಯವಿಲ್ಲದೆ ತಲುಪಲಿವೆ.

*ಕೊನೆಯ ಹಂತದ ವಿತರಣೆ ಬಲವರ್ಧನೆ:
ನ್ಯಾಯಬೆಲೆ ಅಂಗಡಿಗಳ (Fair Price Shops) ಡೀಲರ್‌ಗಳಿಗೆ ಹೆಚ್ಚುವರಿ ಮಾರ್ಜಿನ್ ಒದಗಿಸುವ ಮೂಲಕ ಕೊನೆಯ ಹಂತದ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲಾಗುತ್ತದೆ.

*ಪಾರದರ್ಶಕತೆ:
ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಯಿಂದಾಗಿ ಪಡಿತರ ದುರುಪಯೋಗ ಮತ್ತು ಕಾಳಸಂತೆಗೆ ಆಹಾರ ಧಾನ್ಯಗಳು ಜಾರುವುದನ್ನು ಸಂಪೂರ್ಣವಾಗಿ ತಡೆಯಬಹುದು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರ ಪ್ರಕಾರ, ಈ ಯೋಜನೆಯು ಭಾರತದ ಆಹಾರ ಭದ್ರತಾ ಇತಿಹಾಸದಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ತಂತ್ರಜ್ಞಾನದ ಮೂಲಕ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಪಡಿತರ ಸಿಗುವಂತೆ ಮಾಡುತ್ತದೆ.


Dailyhunt
Disclaimer: This content has not been generated, created or edited by Dailyhunt. Publisher: Spardha Times