Dailyhunt Logo
  • Light mode
    Follow system
    Dark mode
    • Play Story
    • App Story
"180 ರನ್‌ ಹೊಡೆದಿದ್ದರೆ ಕಪ್ ನಮ್ಮದಾಗುತ್ತಿತ್ತು": ಸೋಲಿಗೆ ಕಾರಣ ತಿಳಿಸಿದ ಶುಭಮನ್ ಗಿಲ್

"180 ರನ್‌ ಹೊಡೆದಿದ್ದರೆ ಕಪ್ ನಮ್ಮದಾಗುತ್ತಿತ್ತು": ಸೋಲಿಗೆ ಕಾರಣ ತಿಳಿಸಿದ ಶುಭಮನ್ ಗಿಲ್

Guaranteenews 3 weeks ago

ಹಮದಾಬಾದ್:2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಗುಜರಾತ್ ಟೈಟನ್ಸ್ ತಂಡ 5 ವಿಕೆಟ್‌ಗಳ ಸೋಲು ಅನುಭವಿಸಿತು. ಈ ಮೂಲಕ 2022ರ ಬಳಿಕ ಎರಡನೇ ಟ್ರೋಫಿ ಗೆಲ್ಲುವ ಗುಜರಾತ್ ತಂಡದ ಕನಸು ಭಗ್ನವಾಯಿತು.

ಸೋಲಿನ ಬಳಿಕ ಗುಜರಾತ್ ನಾಯಕ ಶುಭಮನ್ ಗಿಲ್ (Shubman Gill) ಸೋಲಿಗೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಗುಜರಾತ್ ಟೈಟನ್ಸ್, ಫೈನಲ್‌ಗೂ ಆತ್ಮವಿಶ್ವಾಸದೊಂದಿಗೆ ಕಾಲಿಟ್ಟಿತ್ತು. ಆದರೆ ನಿರ್ಣಾಯಕ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ನಾಯಕ ಶುಭಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಮೊದಲಾದ ಪ್ರಮುಖ ಬ್ಯಾಟರ್‌ಗಳು ನಿರೀಕ್ಷಿತ ಕೊಡುಗೆ ನೀಡಲಿಲ್ಲ. ಪರಿಣಾಮ ತಂಡವು 20 ಓವರ್‌ಗಳಲ್ಲಿ 155 ರನ್‌ಗಳಿಗೆ ಸೀಮಿತವಾಯಿತು.

ಪಂದ್ಯದ ಬಳಿಕ ಮಾತನಾಡಿದ ಗಿಲ್, 'ನಾವು 180ರಿಂದ 190 ರನ್‌ಗಳ ನಡುವೆ ಮೊತ್ತ ಕಲೆಹಾಕಿದ್ದರೆ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಗುತ್ತಿತ್ತು. ಈ ಪಿಚ್ ಆರಂಭಿಕ ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತಿತ್ತು. ಮೊದಲ ಕೆಲವು ಓವರ್‌ಗಳಲ್ಲೇ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಪರಿಣಾಮ ನಮ್ಮ ಬ್ಯಾಟಿಂಗ್ ಲಯ ಹದಗೆಟ್ಟಿತು. ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚುವರಿ ಒತ್ತಡ ಬಿದ್ದ ಕಾರಣ ದೊಡ್ಡ ಮೊತ್ತ ಕಟ್ಟಲು ಸಾಧ್ಯವಾಗಲಿಲ್ಲ,' ಎಂದು ಹೇಳಿದರು.

ಅವರು ಮುಂದುವರಿದು, 'ಫೈನಲ್ ಪಂದ್ಯವಾಗಿದ್ದ ಕಾರಣ ಪ್ರತಿಯೊಂದು ರನ್ ಕೂಡ ಅಮೂಲ್ಯವಾಗಿತ್ತು. 150-160 ರನ್‌ಗಳ ಗುರಿಯನ್ನು ನೀಡಿದರೂ ಆರಂಭಿಕ ಪವರ್‌ಪ್ಲೇನಲ್ಲಿ ಎರಡು ವಿಕೆಟ್‌ಗಳನ್ನು ಪಡೆದರೆ ನಾವು ಪಂದ್ಯದಲ್ಲಿ ಉಳಿಯಬಹುದೆಂಬ ವಿಶ್ವಾಸವಿತ್ತು. ಆದರೆ ಆರ್‌ಸಿಬಿ ಬ್ಯಾಟರ್‌ಗಳು ಒತ್ತಡವನ್ನು ಉತ್ತಮವಾಗಿ ನಿಭಾಯಿಸಿದರು,' ಎಂದರು.

ಗುಜರಾತ್ ತಂಡದ ಬ್ಯಾಟಿಂಗ್ ವೈಫಲ್ಯದ ನಡುವೆಯೂ ವಾಷಿಂಗ್ಟನ್ ಸುಂದರ್ ತಂಡಕ್ಕೆ ಆಸರೆಯಾದರು. ಸಂಕಷ್ಟದ ಸಂದರ್ಭದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಅವರು ಅಮೂಲ್ಯ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 155 ರನ್‌ಗಳವರೆಗೆ ಕೊಂಡೊಯ್ದರು. ಇಲ್ಲದಿದ್ದರೆ ಜಿಟಿ ಇನ್ನೂ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಸಾಧ್ಯತೆ ಇತ್ತು.

ಇನ್ನೊಂದೆಡೆ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಬಲಿಷ್ಠ ಆಧಾರವಾಗಿ ನಿಂತರು. ಅನುಭವಿಗಳಾದ ಕೊಹ್ಲಿ ಒತ್ತಡದ ಪಂದ್ಯದಲ್ಲೂ ಶಾಂತಚಿತ್ತದಿಂದ ಬ್ಯಾಟಿಂಗ್ ನಡೆಸಿ ಅಜೇಯ 75 ರನ್‌ಗಳನ್ನು ಸಿಡಿಸಿದರು. ಅವರ ಜವಾಬ್ದಾರಿಯುತ ಇನ್ನಿಂಗ್ಸ್ ನೆರವಿನಿಂದ ಆರ್‌ಸಿಬಿ 18 ಓವರ್‌ಗಳಲ್ಲಿ 161 ರನ್‌ಗಳನ್ನು ಗಳಿಸಿ 5 ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಪ್ರದರ್ಶನಕ್ಕಾಗಿ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

ಸೋಲಿನ ನಿರಾಶೆಯ ನಡುವೆಯೂ ಗಿಲ್ ತಮ್ಮ ತಂಡದ ಹೋರಾಟದ ಮನೋಭಾವವನ್ನು ಶ್ಲಾಘಿಸಿದರು. 'ನಾವು ಪ್ರತಿಯೊಂದು ಪಂದ್ಯದಲ್ಲೂ ಸುಧಾರಣೆಗೆ ಒತ್ತು ನೀಡಿದ್ದೇವೆ. ತಂಡವಾಗಿ ನಿರಂತರವಾಗಿ ಚರ್ಚೆ ನಡೆಸುತ್ತಾ, ಸವಾಲುಗಳನ್ನು ಸ್ವೀಕರಿಸುತ್ತಾ ಮುಂದುವರಿದಿದ್ದೇವೆ. ಈ ಬಾರಿ ಗುರಿ ತಲುಪಲು ಸಾಧ್ಯವಾಗದಿದ್ದರೂ ಕಲಿಯಬೇಕಾದ ಹಲವು ಪಾಠಗಳು ಸಿಕ್ಕಿವೆ. ಟ್ರೋಫಿ ಗೆದ್ದಿದ್ದರೂ ಸಹ ತಂಡವಾಗಿ ಇನ್ನಷ್ಟು ಉತ್ತಮಗೊಳ್ಳಬೇಕಾದ ಅನೇಕ ಕ್ಷೇತ್ರಗಳಿವೆ ಎಂಬುದನ್ನು ನಾವು ಅರಿತಿದ್ದೇವೆ,' ಎಂದು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Guaranteenews