Dailyhunt Logo
  • Light mode
    Follow system
    Dark mode
    • Play Story
    • App Story
ಆಳವಾದ ಕಂದಕಕ್ಕೆ ಉರುಳಿದ ಕಾರು: 8 ಜನ ಪ್ರವಾಸಿಗರು ಸಾವು

ಆಳವಾದ ಕಂದಕಕ್ಕೆ ಉರುಳಿದ ಕಾರು: 8 ಜನ ಪ್ರವಾಸಿಗರು ಸಾವು

Guaranteenews 2 hrs ago

ರಾಯಗಡ (ಮಹಾರಾಷ್ಟ್ರ):ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಅಂಬೆನಾಲಿ ಘಾಟ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ. ಪ್ರವಾಸಕ್ಕೆಂದು ಯುವಕರ ತಂಡವೊಂದು ಸಾಗುತ್ತಿದ್ದ ಸ್ಕಾರ್ಪಿಯೋ ವಾಹನದಲ್ಲಿ ತೆರಳಿದ್ದರು. ಮಹಾಬಲೇಶ್ವರ ಹಾಗೂ ಪೋಲಾದ್‌ಪುರ ನಡುವಿನ ಅಂಬೆನಾಲಿ ಘಾಟ್‌ನಲ್ಲಿ ಸ್ಕಾರ್ಪಿಯೋ ವಾಹನವು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ ಈ ದುರಂತ ಸಂಭವಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ಸ್ಕಾರ್ಪಿಯೋ ಎಸ್‌ಯುವಿ ಸತಾರಾ ಜಿಲ್ಲೆಯ ಅಸ್ಗಾಂವ್ ಗ್ರಾಮದವರದ್ದಾಗಿದ್ದು, ವಾಹನದಲ್ಲಿ ಪ್ರಯಾಣಿಸುತ್ತಿದ್ದವರು ಕೊಂಕಣ ಪ್ರದೇಶದಿಂದ ಸತಾರಾಕ್ಕೆ ಮರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅಂಬೆನಾಲಿ ಘಾಟ್‌ನ ತಿರುವು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ನೇರವಾಗಿ ಸುಮಾರು 500 ರಿಂದ 700 ಅಡಿ ಆಳದ ಕಂದಕಕ್ಕೆ ಬಿದ್ದಿದೆ.

ಅಪಘಾತದ ಸುದ್ದಿ ತಿಳಿದ ತಕ್ಷಣ ಸ್ಥಳೀಯ ಆಡಳಿತ, ಪೊಲೀಸರು, ಚಾರಣಿಗರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಆರಂಭಿಕ ಕಾರ್ಯಾಚರಣೆಯಲ್ಲಿ ಎರಡು ಶವಗಳನ್ನು ಹೊರತೆಗೆದಿದ್ದು, ನಂತರ ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿಸಲಾಯಿತು. ಕಂದಕದ ಆಳ ಹಾಗೂ ಮಳೆಯ ಪರಿಣಾಮ ನೆಲ ಜಾರುವ ಪರಿಸ್ಥಿತಿ ರಕ್ಷಣಾ ಸಿಬ್ಬಂದಿಗೆ ಅಡಚಣೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರ್ಘಟನೆಯಲ್ಲಿ ಮೃತಪಟ್ಟವರನ್ನು ರತ್ನಗಿರಿ ಜಿಲ್ಲೆಯ ಅಂಶ್ ಸಮೀರ್ ಚವ್ಹಾಣ್ (19), ಸತಾರಾ ಜಿಲ್ಲೆಯ ರಿತೇಶ್ ರಾಜೇಂದ್ರ ಲೋಖಂಡೆ (22), ಸುಹಾಸ್ ಜಿತೇಂದ್ರ ಲೋಖಂಡೆ (20), ಉತ್ಕರ್ಷ್ ಆನಂದ್ ಶಿಂಗ್ಟೆ (21), ನಿಖಿಲ್ ಅಭಿಮನ್ಯು ಶಿಂಗ್ಟೆ (25), ಮಹೇಶ್ ಅನಿಲ್ ಪವಾರ್ (25), ಆದಿತ್ಯ ಅಶೋಕ್ ಸಾಳುಂಖೆ (21) ಹಾಗೂ ರಾಜೇಶ್ ಅಶೋಕ್ ಕಾಟ್ಕರ್ (35) ಎಂದು ಗುರುತಿಸಲಾಗಿದೆ.

ಮೃತರೆಲ್ಲರೂ ಸ್ನೇಹಿತರಾಗಿದ್ದು, ಪ್ರವಾಸದ ಬಳಿಕ ಮನೆಗೆ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳೀಯರು ಘಾಟ್ ರಸ್ತೆಯಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews