Dailyhunt
ಆಟೋ ಚಾಲಕರಿಗೆ ಗ್ಯಾಸ್‌ ಚಿಂತೆಯಾದ್ರೆ ಶಾಸರಿಗೆ IPL ಚಿಂತೆ: ಬಿಟ್ಟಿ ಟಿಕೆಟ್‌ಗಾಗಿ ಕ್ಯೂ ನಿಂತ ಶಾಸಕರ ಪಿಎಗಳು..!

ಆಟೋ ಚಾಲಕರಿಗೆ ಗ್ಯಾಸ್‌ ಚಿಂತೆಯಾದ್ರೆ ಶಾಸರಿಗೆ IPL ಚಿಂತೆ: ಬಿಟ್ಟಿ ಟಿಕೆಟ್‌ಗಾಗಿ ಕ್ಯೂ ನಿಂತ ಶಾಸಕರ ಪಿಎಗಳು..!

Guaranteenews 2 weeks ago

ಬೆಂಗಳೂರು: ಒಂದೆಡೆ ಯುದ್ಧದ ಪರಿಣಾಮವಾಗಿ ಗ್ಯಾಸ್ ಅಭಾವ ಉಂಟಾಗಿ ಸಾವಿರಾರು ಆಟೋ ಚಾಲಕರು ಹಾಗೂ ಸಾರ್ವಜನಿಕರು ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಕ್ಯೂ ನಿಂತಿದ್ದರೆ, ಮತ್ತೊಂದೆಡೆ ರಾಜ್ಯದ ಜನಪ್ರತಿನಿಧಿಗಳು ಐಪಿಎಲ್ ಕ್ರಿಕೆಟ್ ಪಂದ್ಯದ ಉಚಿತ ಟಿಕೆಟ್‌ಗಳಿಗಾಗಿ ವಿಧಾನಸೌಧದಲ್ಲಿ ಕ್ಯೂ ನಿಂತಿದ್ದಾರೆ.

ಜನರ ಕಷ್ಟಕ್ಕೆ ದನಿಯಾಗಬೇಕಾದ ಶಾಸಕರು, ಮೋಜು-ಮಸ್ತಿಗೆ ಆದ್ಯತೆ ನೀಡುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ RCB Vs CSK ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಡೀ ನಗರವೇ ಕಾಯುತ್ತಿದೆ. ಆದರೆ, ಈ ಪಂದ್ಯವನ್ನು ವೀಕ್ಷಿಸಲು ಸಾಮಾನ್ಯ ಜನರು ಸಾವಿರಾರು ರೂಪಾಯಿ ತೆತ್ತು ಟಿಕೆಟ್ ಖರೀದಿಸಲು ಪರದಾಡುತ್ತಿದ್ದರೆ, ಶಾಸಕರಿಗೆ ಮಾತ್ರ ರಾಜಮರ್ಯಾದೆಯ ಸೌಲಭ್ಯ ದೊರೆಯುತ್ತಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮತ್ತು ಸರ್ಕಾರದ ನಡುವಿನ ಒಪ್ಪಂದದಂತೆ ಪ್ರತಿ ಶಾಸಕರಿಗೆ ತಲಾ ಮೂರು ಉಚಿತ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಈ ಟಿಕೆಟ್‌ಗಳನ್ನು ಪಡೆಯಲು ಇಂದು ವಿಧಾನಸೌಧದ ಸ್ಪೀಕರ್ ಕಚೇರಿ ಮುಂದೆ ಶಾಸಕರ ಆಪ್ತ ಸಹಾಯಕರ (PA) ದಂಡೇ ನೆರೆದಿತ್ತು.

ಗ್ಯಾಸ್ ಸಿಗದೆ ಆಟೋ ಚಾಲಕರ ದುಡಿಮೆ ಸ್ಥಗಿತಗೊಂಡಿದೆ. ಹಸಿವು, ಬಾಡಿಗೆ ಮತ್ತು ಜೀವನ ನಿರ್ವಹಣೆಯ ಚಿಂತೆಯಲ್ಲಿರುವ ಚಾಲಕರು ಗ್ಯಾಸ್ ಬಂಕ್‌ಗಳ ಮುಂದೆ ಹಗಲಿರುಳು ಕಾಯುತ್ತಿದ್ದಾರೆ. ಆದರೆ, ಇವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕಾದ ವಿಧಾನಸೌಧದ ಒಳಗೆ ಮಾತ್ರ ಕ್ರಿಕೆಟ್ ಟಿಕೆಟ್‌ಗಳದ್ದೇ ಚರ್ಚೆ. ಜನರ ಹಿತಕ್ಕಿಂತ ತಮ್ಮ ಮನೋರಂಜನೆಯೇ ಮುಖ್ಯ ಎಂಬಂತೆ ವರ್ತಿಸುತ್ತಿರುವ ಜನಪ್ರತಿನಿಧಿಗಳ ನಡೆ ನಾಗರಿಕ ಸಮಾಜಕ್ಕೆ ಮುಜುಗರ ತರುವಂತಿದೆ.

ಈಗಾಗಲೇ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಸದನದಲ್ಲಿ ಕೆಎಸ್‌ಸಿಎ ವಿರುದ್ಧ ಗುಡುಗಿದ್ದರು. ನಮಗೆ ಕನಿಷ್ಠ ಗೌರವ ಕೊಡಬೇಕು, ಕಳೆದ ಬಾರಿ ನಮ್ಮನ್ನು ಸಾಮಾನ್ಯ ಗ್ಯಾಲರಿಯಲ್ಲಿ ಕೂರಿಸಲಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರದಿಂದ ಎಲ್ಲಾ ಸೌಲಭ್ಯ ಪಡೆಯುವ ಕೆಎಸ್‌ಸಿಎ ಶಾಸಕರಿಗೆ ವಿಐಪಿ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿದೆ ಎಂಬುದು ಅವರ ಆರೋಪವಾಗಿತ್ತು. ಅಚ್ಚರಿಯೆಂದರೆ, ಈ ಬೇಡಿಕೆಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕೂಡ ಬೆಂಬಲ ನೀಡಿದ್ದರು. ಅಂದರೆ, ಆಡಳಿತ ಮತ್ತು ಪ್ರತಿಪಕ್ಷ ಎರಡೂ ಐಪಿಎಲ್ ಟಿಕೆಟ್ ವಿಚಾರದಲ್ಲಿ ಒಂದಾಗಿರುವುದು ಜನರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.

ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ

ಶಾಸಕರ ಈ ವರ್ತನೆಯನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಟುವಾಗಿ ಟೀಕಿಸಿದ್ದಾರೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಪವಿತ್ರ ಸದನದಲ್ಲಿ ಐಪಿಎಲ್ ಟಿಕೆಟ್‌ಗಾಗಿ ಪಟ್ಟು ಹಿಡಿಯುವುದು ವಿಧಾನಸೌಧದ ಘನತೆಗೆ ತಕ್ಕುದಲ್ಲ. ಜನಸಾಮಾನ್ಯರು ಕಷ್ಟಪಟ್ಟು ಹಣ ನೀಡಿ ಟಿಕೆಟ್ ಖರೀದಿಸುವಾಗ ಶಾಸಕರಿಗೆ ಮಾತ್ರ ಯಾಕೆ ಉಚಿತವಾಗಿ ನೀಡಬೇಕು? ಇದು ಜನಪ್ರತಿನಿಧಿಗಳ ಅಹಂಕಾರದ ಪರಮಾವಧಿ ಎಂದು ಅವರು ಲೇವಡಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews