Dailyhunt Logo
  • Light mode
    Follow system
    Dark mode
    • Play Story
    • App Story
ಬಿಜೆಪಿಯ ಬಳ್ಳಾರಿ ಚಲೋಗೆ ಭರ್ಜರಿ ಬೆಂಬಲ; ಇಂದು 21 ಕಿ.ಮೀ. ಪಾದಯಾತ್ರೆ

ಬಿಜೆಪಿಯ ಬಳ್ಳಾರಿ ಚಲೋಗೆ ಭರ್ಜರಿ ಬೆಂಬಲ; ಇಂದು 21 ಕಿ.ಮೀ. ಪಾದಯಾತ್ರೆ

Guaranteenews 2 weeks ago

ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ವಿವಿಧ ವಿಚಾರಗಳನ್ನು ಖಂಡಿಸಿ ಕರ್ನಾಟಕ ಬಿಜೆಪಿ ಹಮ್ಮಿಕೊಂಡಿರುವ 'ಬಳ್ಳಾರಿ ಚಲೋ' ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬಿಜೆಪಿ ಕಾರ್ಯಕರ್ತರ ದಂಡು ಪಾದಯಾತ್ರೆಯಲ್ಲಿ ಸೇರಿಕೊಳ್ಳುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.

ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಈ 10 ದಿನಗಳ ಪಾದಯಾತ್ರೆ ಸೆಪ್ಟೆಂಬರ್ 1ರಂದು ಲಿಂಗಸುಗೂರಿನಿಂದ ಆರಂಭವಾಗಿದ್ದು, ಸೆಪ್ಟೆಂಬರ್ 10ರವರೆಗೆ ನಡೆಯಲಿದೆ.

ಎರಡನೇ ದಿನವಾದ ಇಂದು ಸಂತೆಕೆಲ್ಲೂರಿನ ಘನಮಠೇಶ್ವರ ಮಠದಿಂದ ಮಸ್ಕಿ ತಾಲೂಕಿನ ಗುಡದೂರುವರೆಗೆ ಸುಮಾರು 21 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಸಂತೆಕೆಲ್ಲೂರಿನಿಂದ ಮುದಬಾಳ ಕ್ರಾಸ್‌ವರೆಗೆ ಬೆಳಗ್ಗೆ ಪಾದಯಾತ್ರೆ ಸಾಗಲಿದ್ದು, ಬಳಿಕ ಮಧ್ಯಾಹ್ನ ಊಟದ ವಿರಾಮ ನೀಡಲಾಗುತ್ತದೆ. ನಂತರ ಮುದಬಾಳ ಕ್ರಾಸ್‌ನಿಂದ ಗುಡದೂರುವರೆಗೆ ಪಾದಯಾತ್ರೆ ಮುಂದುವರಿಯಲಿದೆ.

ಇಂದಿನ ಪಾದಯಾತ್ರೆಯಲ್ಲಿ ಮಸ್ಕಿ, ಮಾನ್ವಿ, ಹುನಗುಂದ, ಕುಷ್ಟಗಿ, ಲಿಂಗಸುಗೂರು ಹಾಗೂ ಮುದ್ದೇಬಿಹಾಳ ಸೇರಿದಂತೆ ಹಲವು ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಎರಡನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಈ ಮೂಲಕ ಬಿಜೆಪಿ ತನ್ನ ಬಲ ಪ್ರದರ್ಶಿಸಲು ಸಜ್ಜಾಗಿದೆ.

ಇನ್ನು ಪಾದಯಾತ್ರೆಯ ನಡುವೆಯೇ ಮುದಬಾಳ ಕ್ರಾಸ್ ಬಳಿ ಬಿ.ವೈ. ವಿಜಯೇಂದ್ರ ಅವರು ದಲಿತ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ. ರಾಜ್ಯ ಸರ್ಕಾರದ ಆಡಳಿತ, ದಲಿತ ಸಮುದಾಯಕ್ಕೆ ಸಂಬಂಧಿಸಿದ ವಿಚಾರಗಳು ಸೇರಿದಂತೆ ಹಲವು ವಿಷಯಗಳ ಕುರಿತು ಈ ವೇಳೆ ಚರ್ಚೆ ನಡೆಯುವ ಸಾಧ್ಯತೆಯಿದೆ.

ಎರಡನೇ ದಿನದ ಪಾದಯಾತ್ರೆಯ ಅಂತ್ಯವನ್ನು ಸಂಜೆ ಮಸ್ಕಿ ಕ್ಷೇತ್ರದ ಗುಡದೂರಿನಲ್ಲಿ ಮಾಡಲಾಗುತ್ತದೆ. ಬಳಿಕ ಬಿಜೆಪಿ ನಾಯಕರು ಮಸ್ಕಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೆಪ್ಟೆಂಬರ್ 3ರಂದು ಗುಡದೂರಿನಿಂದ ಸಿಂಧನೂರುವರೆಗೆ ಸುಮಾರು 20 ಕಿ.ಮೀ. ಪಾದಯಾತ್ರೆ ಸಾಗಲಿದೆ.

ಇಂದಿನ ಪಾದಯಾತ್ರೆಯಲ್ಲಿ ಬಿಜೆಪಿ ಹಿರಿಯ ನಾಯಕರಾದ ಸಿ.ಟಿ. ರವಿ, ಬಿ. ಶ್ರೀರಾಮುಲು, ಜನಾರ್ದನ ರೆಡ್ಡಿ, ಎನ್. ರವಿಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪಾದಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಈಗಾಗಲೇ ಪಾದಯಾತ್ರೆಯ ಮೊದಲ ದಿನ ಲಿಂಗಸುಗೂರಿನಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸೇರಿ ಶಕ್ತಿ ಪ್ರದರ್ಶನ ನಡೆಸಿದ್ದರು.

ಒಟ್ಟು 170 ಕಿ.ಮೀ. ಉದ್ದದ 'ಬಳ್ಳಾರಿ ಚಲೋ' ಪಾದಯಾತ್ರೆ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಲಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸುವುದಾಗಿ ಬಿಜೆಪಿ ಹೇಳಿದ್ದು, ಸೆಪ್ಟೆಂಬರ್ 10ರಂದು ಪಾದಯಾತ್ರೆ ಅಂತ್ಯಗೊಳ್ಳಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews