Dailyhunt Logo
  • Light mode
    Follow system
    Dark mode
    • Play Story
    • App Story
CM ಬದಲಾವಣೆಯಿಂದ ರಾಜ್ಯದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ಟಾಂಗ್

CM ಬದಲಾವಣೆಯಿಂದ ರಾಜ್ಯದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ಟಾಂಗ್

Guaranteenews 1 week ago

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ನಾಯಕರು ಅವರಿಗೆ ಶುಭಾಶಯ ಕೋರಿದ್ದಾರೆ. ಆದರೆ, ಇದೇ ವೇಳೆ ವಿಪಕ್ಷ ನಾಯಕ ಆರ್.

ಅಶೋಕ್ ಅವರು ಶುಭಾಶಯಗಳ ಜೊತೆಗೆ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯೆ ನೀಡಿರುವ ಆರ್. ಅಶೋಕ್, 'ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ರಾಜ್ಯದ ಅಭಿವೃದ್ಧಿ ಮತ್ತು ಜನರ ಹಿತಕ್ಕಾಗಿ ಅವರು ಕೆಲಸ ಮಾಡಲಿ ಎಂದು ಹಾರೈಸುತ್ತೇನೆ' ಎಂದು ಶುಭಕೋರಿದ್ದಾರೆ.

ಆದರೆ ಇದರ ಬೆನ್ನಲ್ಲೇ ಅವರು ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳ ಆಡಳಿತವನ್ನು ಗುರಿಯಾಗಿಸಿಕೊಂಡು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೂ ಆಡಳಿತದ ಮನಸ್ಥಿತಿ ಮತ್ತು ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

'ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರ, ವರ್ಗಾವಣೆ ದಂಧೆ, ಕಮಿಷನ್ ಸಂಸ್ಕೃತಿ ಹಾಗೂ ಆಡಳಿತ ವೈಫಲ್ಯಗಳಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ. ಈಗ ಮುಖ್ಯಮಂತ್ರಿಯ ಮುಖ ಬದಲಾಗಿರುವುದನ್ನು ಹೊರತುಪಡಿಸಿ ವ್ಯವಸ್ಥೆಯಲ್ಲಿ ಯಾವುದೇ ಹೊಸತನ ಕಾಣಿಸುತ್ತಿಲ್ಲ' ಎಂದು ಅಶೋಕ್ ಟೀಕಿಸಿದ್ದಾರೆ.

ಜನರು ನಾಯಕತ್ವ ಬದಲಾವಣೆಗಿಂತ ಹೆಚ್ಚಾಗಿ ಆಡಳಿತದ ದಿಕ್ಕು ಬದಲಾಗುತ್ತದೆ, ಸರ್ಕಾರದ ಆದ್ಯತೆಗಳು ಬದಲಾಗುತ್ತವೆ ಎಂದು ನಿರೀಕ್ಷಿಸಿದ್ದರು. ಆದರೆ ಇಂದು ಸಚಿವ ಸಂಪುಟವನ್ನು ನೋಡಿದಾಗ, ಕರ್ನಾಟಕವನ್ನು ಈ ದುಸ್ಥಿತಿಗೆ ತಳ್ಳಿದ ಅದೇ ಹಳೆಯ ಭ್ರಷ್ಟ ಮುಖಗಳು ಮತ್ತೆ ಅಧಿಕಾರದ ಕೇಂದ್ರದಲ್ಲಿರುವುದು ಕಾಣುತ್ತಿದೆ. ರಾಜ್ಯವನ್ನು ಲೂಟಿ ಮಾಡಿದವರು, ಅಭಿವೃದ್ಧಿಯನ್ನು ಹಿಮ್ಮೆಟ್ಟಿಸಿದವರು ಮತ್ತು ಜನರ ವಿಶ್ವಾಸವನ್ನು ಕಳೆದುಕೊಂಡವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, 'ಇದು ಹೊಸ ಸರ್ಕಾರವಲ್ಲ, ಹಳೆಯ ಸರ್ಕಾರದ ಹೊಸ ಮಾರುವೇಷ ಮಾತ್ರ' ಎಂಬ ಭಾವನೆ ಜನರಲ್ಲಿ ಮೂಡಿರುವುದು ಸಹಜ ಎಂದು ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಬದಲಾಗುವುದರಿಂದಲೇ ರಾಜ್ಯದ ಪರಿಸ್ಥಿತಿ ಬದಲಾಗುವುದಿಲ್ಲ. ಭ್ರಷ್ಟಾಚಾರ, ಅಧಿಕಾರದ ದುರುಪಯೋಗ ಮತ್ತು ಜನವಿರೋಧಿ ರಾಜಕಾರಣವನ್ನು ಬದಿಗೊತ್ತಿ, ಶ್ರೀಸಾಮಾನ್ಯರ ಪರವಾದ ಜನಸ್ನೇಹಿ ಸರ್ಕಾರ ನೀಡುವ ಇಚ್ಛಾಶಕ್ತಿ ಇದ್ದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದ್ದಾರೆ.

ರಾಜ್ಯದ ಜನತೆ ಈಗ ಭರವಸೆಗಳಿಗಿಂತ ಫಲಿತಾಂಶಗಳನ್ನು ನೋಡಲು ಬಯಸುತ್ತಿದ್ದಾರೆ. ಮಾತುಗಳಿಗಿಂತ ಕಾರ್ಯವನ್ನು, ಪ್ರಚಾರಕ್ಕಿಂತ ಆಡಳಿತವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ನೂತನ ಮುಖ್ಯಮಂತ್ರಿಗಳ ಮುಂದೆ ಈಗ ನಿಂತಿರುವುದು ಅವಕಾಶಗಳ ಪರ್ವತವಲ್ಲ, ತಮ್ಮದೇ ಸರ್ಕಾರದ ಮೂರು ವರ್ಷಗಳ ವೈಫಲ್ಯಗಳ ಅವಶೇಷಗಳು. ಕಳೆದ ಮೂರು ವರ್ಷಗಳ ಭ್ರಷ್ಟಾಚಾರ, ಆಡಳಿತ ವೈಫಲ್ಯ ಮತ್ತು ಮುರಿದ ಭರವಸೆಗಳ ಕರಿನೆರಳು ಅವರನ್ನು ಪ್ರತಿ ಹೆಜ್ಜೆಯಲ್ಲೂ ಹಿಂಬಾಲಿಸಲಿದೆ. ಕಳೆದ ಮೂರು ವರ್ಷಗಳಲ್ಲಿ ತಮ್ಮದೇ ಪಕ್ಷದ ಸರ್ಕಾರ ಬಿತ್ತಿರುವ ಮುಳ್ಳುಗಳ ಮೇಲೆಯೇ ಅವರು ಆಡಳಿತದ ಪಯಣ ಆರಂಭಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಕುಸಿದ ಆಡಳಿತದ ಅವಶೇಷಗಳ ಮೇಲೆ ಹೊಸ ಸರ್ಕಾರ ಕಟ್ಟುವುದು ಸುಲಭವಲ್ಲ. ಮುಖ್ಯಮಂತ್ರಿ ಬದಲಾಗಿರಬಹುದು, ಆದರೆ ಕರ್ನಾಟಕದ ಜನತೆ ಕಳೆದ ಮೂರು ವರ್ಷಗಳ ಕಹಿ ನೆನಪನ್ನು ಇನ್ನೂ ಮರೆತಿಲ್ಲ ಮತ್ತು ಮುಖ್ಯಸ್ಥರು ಮಾತ್ರ ಬದಲಾದ ಈ ಹೊಸ ಸರ್ಕಾರದಿಂದ ಕನ್ನಡಿಗರು ಯಾವುದೇ ಹೆಚ್ಚಿನ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews