Dailyhunt
ಧೋನಿ-ಕಪಿಲ್ ದೇವ್ ಬಳಿ ಕ್ಷಮೆ ಕೇಳಿದ ಯುವರಾಜ್ ಸಿಂಗ್..ಕಾರಣವೇನು?

ಧೋನಿ-ಕಪಿಲ್ ದೇವ್ ಬಳಿ ಕ್ಷಮೆ ಕೇಳಿದ ಯುವರಾಜ್ ಸಿಂಗ್..ಕಾರಣವೇನು?

Guaranteenews 0 months ago

ವದೆಹಲಿ: ತಮ್ಮ ತಂದೆ ಯೋಗರಾಜ್ ಸಿಂಗ್ ಅವರ ಸತತ ವಿವಾದಾತ್ಮಕ ಹೇಳಿಕೆಗಳಿಂದಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್ ಸಿಂಗ್, ದಿಗ್ಗಜ ನಾಯಕರಾದ ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಅವರ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪಾಡ್ಕಾಸ್ಟ್ ಟೀಸರ್‌ನಲ್ಲಿ ಮಾತನಾಡಿದ ಅವರು, ತಮ್ಮ ತಂದೆಯ ಆರೋಪಗಳನ್ನು ತಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯೋಗರಾಜ್ ಏನೆಲ್ಲಾ ಆರೋಪ ಮಾಡಿದ್ದರು?

ಕಳೆದ ಹಲವು ವರ್ಷಗಳಿಂದ ಯೋಗರಾಜ್ ಸಿಂಗ್, ಎಂಎಸ್ ಧೋನಿ ಅವರು ತಮ್ಮ ಪುತ್ರ ಯುವರಾಜ್ ಅವರನ್ನು ಭಾರತ ತಂಡದಿಂದ ಕೈಬಿಟ್ಟು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ, 1980ರ ದಶಕದ ಆರಂಭದಲ್ಲಿ ಕಪಿಲ್ ದೇವ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಹಾಳುಮಾಡಿದ್ದಾರೆ. ಅಲ್ಲದೇ ತನಗೆ ಬೆದರಿಕೆ ಹಾಕಿದ್ದಾರೆ ಎಂದೂ ಹೇಳಿಕೊಂಡಿದ್ದರು. ಒಮ್ಮೆ ತಾವು ಪಿಸ್ತೂಲ್ ಹಿಡಿದು ಕಪಿಲ್ ದೇವ್ ಮನೆಗೆ ಹೋಗಿದ್ದೆ ಎಂಬ ಸ್ಫೋಟಕ ಹೇಳಿಕೆಯನ್ನೂ ಯೋಗರಾಜ್ ನೀಡಿದ್ದರು. ಇವೆಲ್ಲವೂ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದವು.

ಯುವರಾಜ್ ಸಿಂಗ್ ಕ್ಷಮೆಯಾಚಿಸಿದ್ದೇಕೆ?

ಸ್ಪೋರ್ಟ್ಸ್ ತಕ್ ಬಿಡುಗಡೆ ಮಾಡಿದ ಪಾಡ್ಕಾಸ್ಟ್ ಟೀಸರ್‌ನಲ್ಲಿ ಯುವರಾಜ್ ಸಿಂಗ್ ಮಾತನಾಡಿ, 'ಇಂಥಾ ಹೇಳಿಕೆಗಳನ್ನು ನೀಡಬೇಡಿ, ಇದು ಸರಿಯಿಲ್ಲ ಎಂದು ಸಾಕಷ್ಟು ಬಾರಿ ತಮ್ಮ ತಂದೆಗೆ ಹೇಳಿದ್ದೇನೆ,' ಎಂದು ತಿಳಿಸಿದ್ದಾರೆ. ಅವರು ಮುಂದುವರಿಸಿ, 'ತಂದೆಯ ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ. ಕಪಿಲ್ ದೇವ್ ಸರ್ ಮತ್ತು ಮಹಿ ಭಾಯ್ (ಧೋನಿ) ಅವರನ್ನು ನಾನು ಗೌರವಿಸುತ್ತೇನೆ. ಅವರ ಬಗ್ಗೆ ಯಾವುದೇ ಅಗೌರವದ ಮಾತು ನನ್ನಿಂದಾದರೆ, ಅದಕ್ಕೆ ಕ್ಷಮೆ ಕೇಳುತ್ತೇನೆ' ಎಂದು ಹೇಳಿದ್ದಾರೆ.

ಧೋನಿ ಕುರಿತು ಯೋಗರಾಜ್ ನಿಲುವು ಬದಲಾವಣೆ

ಆದರೆ ಇತ್ತೀಚೆಗೆ ಯೋಗರಾಜ್ ಸಿಂಗ್ ಅವರ ನಿಲುವು ಬದಲಾಗಿದೆ. ಧೋನಿಯನ್ನು ತಾವು ಮೆಚ್ಚುತ್ತೇನೆ ಮತ್ತು ಅವರು ಸಾಧ್ಯವಾದಷ್ಟು ಕಾಲ ಕ್ರಿಕೆಟ್ ಆಡಬೇಕು ಎಂದು ಅವರು ಹೇಳಿದ್ದಾರೆ. ಮಾಜಿ ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್ ಸ್ಪಷ್ಟನೆ ನೀಡಿದ ಬಳಿಕ ಈ ಬದಲಾವಣೆ ಕಂಡುಬಂದಿದೆ. ಯುವರಾಜ್ ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರ ಧೋನಿಯದ್ದಲ್ಲ, ಬದಲಾಗಿ ಆಯ್ಕೆ ಸಮಿತಿಯದ್ದು ಎಂದು ಪಾಟೀಲ್ ತಿಳಿಸಿದ್ದರು.

ಯುವರಾಜ್-ಧೋನಿ ಸಂಬಂಧದ ನೆನಪು

2017ರಲ್ಲಿ ಕಮ್ ಬ್ಯಾಕ್ ಸಮಯದಲ್ಲಿ ತಮ್ಮ ಪಾತ್ರದ ಬಗ್ಗೆ ಸ್ಪಷ್ಟತೆ ನೀಡಿದ್ದು ಧೋನಿ ಎಂದು ಯುವರಾಜ್ ಮೊದಲೇ ಹೇಳಿಕೊಂಡಿದ್ದರು. ಟೀಮ್ ಮ್ಯಾನೇಜ್ಮೆಂಟ್ ತಮ್ಮನ್ನು ಭವಿಷ್ಯದ ಯೋಜನೆಗಳಲ್ಲಿ ಪರಿಗಣಿಸುತ್ತಿಲ್ಲ ಎಂದು ಧೋನಿ ತಮಗೆ ತಿಳಿಸಿದ್ದರು. ಇದು ನಂತರ ಯುವರಾಜ್ ಅವರ 2019ರ ನಿವೃತ್ತಿಗೆ ಕಾರಣವಾಯಿತು.

Dailyhunt
Disclaimer: This content has not been generated, created or edited by Dailyhunt. Publisher: Guaranteenews