Dailyhunt
ಜ್ಯೂಸ್‌ನಲ್ಲಿ ಮತ್ತು ಬೆರೆಸಿ ಅ*ತ್ಯಾಚಾರ, ವಿಡಿಯೋ ರೆಕಾರ್ಡ್ ಮಾಡಿ ಬೆದರಿಕೆ: ಸಮೀರ್‌ ವಿರುದ್ಧ ಯುವತಿ ಆರೋಪ

ಜ್ಯೂಸ್‌ನಲ್ಲಿ ಮತ್ತು ಬೆರೆಸಿ ಅ*ತ್ಯಾಚಾರ, ವಿಡಿಯೋ ರೆಕಾರ್ಡ್ ಮಾಡಿ ಬೆದರಿಕೆ: ಸಮೀರ್‌ ವಿರುದ್ಧ ಯುವತಿ ಆರೋಪ

Guaranteenews 1 week ago

ಹುಬ್ಬಳ್ಳಿ (ಏ. 03): ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಜಿಮ್ ಟ್ರೈನರ್ ಸಮೀರ್ ಮುಲ್ಲಾ ಎಂಬುವನು ಅವನ ಮನೆಯಲ್ಲಿ ಅತ್ಯಾಚಾರ ಎಸಗಿದ್ದಲ್ಲದೇ, ಅದರ ವಿಡಿಯೊ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆ ಯುವತಿಯೊಬ್ಬರು ವಿಡಿಯೊ ಹೇಳಿಕೆ ಮೂಲಕ ಆರೋಪಿಸಿದ್ದಾರೆ.

ಯುವತಿ ಏನು ಹೇಳಿದ್ದಾರೆ?

ವಿಡಿಯೊದಲ್ಲಿ ಆಕೆ ಮಾತನಾಡಿ, 'ಸಮೀರ್‌ನ ಅಕ್ಕ ತೈಸೀಮ್ ಮುಲ್ಲಾ ನನ್ನ ಸ್ನೇಹಿತೆ. ಆಕೆಯ ಮೂಲಕವೇ ಸಮೀರ್ ಪರಿಚಯವಾಯಿತು. ತೈಸೀಮ್ ಜೊತೆ ಸ್ನೇಹಿತೆಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ವೀಕೆಂಡ್ ಪಾರ್ಟಿ, ಬರ್ತ್ಡೇ ಪಾರ್ಟಿಗಳಿಗೆ ಒಟ್ಟಿಗೆ ಹೋಗುತ್ತಿದ್ದೆವು. ಅಲ್ಲೆಲ್ಲ ಸಮೀರ್ ಸಹ ಇರುತ್ತಿದ್ದ. ಅವನು ಕ್ರಮೇಣ ಹತ್ತಿರವಾಗಿದ್ದ. ಒಂದು ದಿನ ತನ್ನ ಮನೆಗೆ ಕರೆದುಕೊಂಡು ಹೋಗಿ, ಜ್ಯೂಸ್‌ನಲ್ಲಿ ಔಷಧ ಬೆರೆಸಿ ಕುಡಿಸಿದ್ದ. ಆಗ ನನ್ನ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ. ಅದರ ವಿಡಿಯೋ ಕೂಡ ಮಾಡಿಕೊಂಡಿದ್ದಾನೆ' ಎಂದು ಆರೋಪಿಸಿದ್ದಾರೆ.

ವಿಡಿಯೋ ವಿಚಾರ ತಿಳಿದು ಪ್ರಶ್ನಿಸಿದಾಗ, ಯಾರಿಗೂ ತೋರಿಸುವುದಿಲ್ಲ ಎಂದು ಹೇಳಿದ್ದ. ಆದರೆ ನಂತರದ ದಿನಗಳಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಇನ್ನೂ ಅನೇಕ ಹುಡುಗಿಯರನ್ನು ಇದೇ ರೀತಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು, ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಎಂದು ಯುವತಿ ಹೇಳಿದ್ದಾರೆ.

ಸಮೀರ್ ಮೊಬೈಲ್‌ನಲ್ಲಿ ಸಿಕ್ಕ ಸ್ಪಷ್ಟ ಪುರಾವೆಗಳು

ಪೊಲೀಸ್ ವಶಕ್ಕೆ ಪಡೆದ ಸಮೀರ್ ಮುಲ್ಲಾ ಮೊಬೈಲ್ ಪರಿಶೀಲನೆಯಲ್ಲಿ ಹಲವು ಹಿಂದೂ ಯುವತಿಯರ ಫೋಟೋಗಳು, ಪ್ರೆಗ್ನೆನ್ಸಿ ಟ್ಯಾಬ್ಲೆಟ್‌ಗಳ ಫೋಟೋಗಳು, ಸ್ಕ್ಯಾನಿಂಗ್ ರಿಪೋರ್ಟ್ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ತಾಯಿಯ ಆಕ್ರೋಶ

ಸಂತ್ರಸ್ತೆಯ ತಾಯಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಸಮೀರ್ ನನ್ನ ಮಗಳ ತಲೆ ಕೆಡಿಸಿದ್ದಾನೆ. ಆಕೆಯನ್ನು ಹಿಪ್ನೋಟೈಸ್ ಮಾಡಲಾಗಿದೆ. ನನ್ನ ಮಗಳಿಗೂ ಸಮೀರ್‌ಗೂ ಯಾವುದೇ ಸಂಬಂಧ ಇರಲಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಸಮೀರ್ ಮತ್ತು ಅವನ ಕುಟುಂಬದವರು ನಮಗೆ ಕಿರುಕುಳ ನೀಡುತ್ತಿದ್ದಾರೆ. ಇಂದು ನಮ್ಮ ಮನೆಗೆ ಪೆಟ್ರೋಲ್ ಹಾಕಿ ಸ್ಟಿಕ್, ತಲವಾರು ತೆಗೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ' ಎಂದು ಆರೋಪಿಸಿದ್ದಾರೆ.

ಸಮೀರ್ ಸಹೋದರಿಯ ಪ್ರತಿಆರೋಪ

ಇತ್ತ ಸಮೀರ್ ಸಹೋದರಿ ತೈಸೀಮ್ ಮುಲ್ಲಾ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. 'ಇದು ಲವ್ ಜಿಹಾದ್ ಅಲ್ಲ. ಅವರಿಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದರು. ನೂರು ಜನ ಸೇರಿ ನನ್ನ ತಮ್ಮನನ್ನು ಹೊಡೆದು ಕಿಡ್ನ್ಯಾಪ್ ಮಾಡಿದ್ದಾರೆ' ಎಂದು ಆಕೆ ಹೇಳಿದ್ದಾರೆ.

ಪೊಲೀಸ್ ಆಯುಕ್ತರು ಏನು ಹೇಳಿದ್ದಾರೆ?

ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, 'ಮೊದಲು ಯುವತಿ ಕುಟುಂಬಸ್ಥರು ಸಮೀರ್ ಮನೆಗೆ ಹೋಗಿ ಗಲಾಟೆ ಮಾಡಿದ್ದರು. ನಂತರ ಆತನನ್ನು ಠಾಣೆಗೆ ಒಪ್ಪಿಸಿದ್ದಾರೆ. ಸಮೀರ್ ಸಣ್ಣ ಗಾಯಗಳೊಂದಿಗೆ ಕಿಮ್ಸ್ ಆಸ್ಪತ್ರೆಯಲ್ಲಿದ್ದಾನೆ. ಬಳಿಕ ಸಮೀರ್ ಕುಟುಂಬದವರು ಯುವತಿ ಮನೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಕೆಲವರನ್ನು ವಶಕ್ಕೆ ಪಡೆದಿದ್ದೇವೆ. ದೂರು ದಾಖಲಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews