Dailyhunt Logo
  • Light mode
    Follow system
    Dark mode
    • Play Story
    • App Story
ಕಾಮನ್‌ವೆಲ್ತ್ ಪದಕ ವಿಜೇತೆ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

ಕಾಮನ್‌ವೆಲ್ತ್ ಪದಕ ವಿಜೇತೆ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

Guaranteenews 1 week ago

ವದೆಹಲಿ, ಆಗಸ್ಟ್ 5:2026ರ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತದ ಪ್ಯಾರಾ ಅಥ್ಲೀಟ್, ಹೆಮ್ಮೆಯ ಕನ್ನಡತಿ ಶಿಲ್ಪಾ ಕೆ.ಶೈಲಾ ಅವರನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ವಿಶೇಷವಾಗಿ ಸತ್ಕರಿಸಿ ಗೌರವಿಸಿದರು.

ಈ ಐತಿಹಾಸಿಕ ಸಾಧನೆಯನ್ನು ಗುರುತಿಸಿ, ಸಚಿವರು ಶಿಲ್ಪಾ ಅವರನ್ನು ಮತ್ತು ಅವರ ಇಬ್ಬರು ತರಬೇತುದಾರರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ, ಅವರ ಪ್ರತಿಭೆ ಮತ್ತು ಪರಿಶ್ರಮವನ್ನು ಶ್ಲಾಘಿಸಿದರು.

ಸಚಿವರ ಸ್ಪಂದನೆ ಮತ್ತು ಸನ್ಮಾನ

ಈ ಸಂದರ್ಭದಲ್ಲಿ ಶಿಲ್ಪಾ ಅವರ ಹಿನ್ನೆಲೆ, ಅವರ ಈವರೆಗಿನ ಸಾಧನೆ, ತಂದೆ-ತಾಯಿ ಮತ್ತು ಕುಟುಂಬದ ಬಗ್ಗೆ ಸಚಿವರು ವಿವರವಾಗಿ ಮಾಹಿತಿ ಪಡೆದುಕೊಂಡರು. ಅವರು ಶಿಲ್ಪಾ ಅವರನ್ನು ಉದ್ದೇಶಿಸಿ ಮಾತನಾಡಿ, 'ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ನಿಮ್ಮ ಸಾಧನೆ ಪ್ರೇರಣಾದಾಯಕ ಮತ್ತು ಐತಿಹಾಸಿಕವಾಗಿದೆ. ನೀವು ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆ.ಆರ್. ನಗರ ತಾಲೂಕಿನವರು. ಯುವ ತಲೆಮಾರಿಗೆ ನೀವು ಮಾದರಿಯಾಗಿದ್ದೀರಿ' ಎಂದು ಹೇಳಿದರು.

ಶಿಲ್ಪಾ ಅವರ ಹೋರಾಟದ ಹಿನ್ನೆಲೆ

ಶಿಲ್ಪಾ ಕೆ.ಶೈಲಾ ಅವರು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದರು. ಕೇವಲ ನಾಲ್ಕು ವರ್ಷದ ಬಾಲಕಿಯಾಗಿದ್ದಾಗಲೇ ಭೀಕರ ಅಪಘಾತವೊಂದರಲ್ಲಿ ಅವರ ಎಡಗಾಲು ಕಳೆದುಕೊಂಡರು. ಬಾಲ್ಯದಲ್ಲೇ ಅಂಗವೈಕಲ್ಯವನ್ನು ಎದುರಿಸಬೇಕಾದ ದುರ್ದೈವ ಶಿಲ್ಪಾ ಅವರಿಗೆ ಆದರೂ, ಅದನ್ನು ತನ್ನ ದುರ್ಬಲತೆಯನ್ನಾಗಿಸದೆ, ಅದನ್ನೇ ತನ್ನ ಶಕ್ತಿಯನ್ನಾಗಿ ಪರಿವರ್ತಿಸಿದರು. ತಮ್ಮ ಧೃಢ ಸಂಕಲ್ಪ, ಕಠಿಣ ಪರಿಶ್ರಮ ಮತ್ತು ಅಪಾರ ಆತ್ಮವಿಶ್ವಾಸದಿಂದ ಅವರು ಪ್ಯಾರಾ ಸ್ಪೋರ್ಟ್ಸ್ನತ್ತ ಹೆಜ್ಜೆ ಇಟ್ಟರು.

ಸ್ಫೂರ್ತಿದಾಯಕ ಪ್ರಯಾಣ

ಶಿಲ್ಪಾ ಅವರ ಕ್ರೀಡಾ ಜೀವನವು ಹೋರಾಟ, ತ್ಯಾಗ ಮತ್ತು ಅಚಲ ನಿಶ್ಚಯದಿಂದ ಕೂಡಿದೆ. ತಮ್ಮ ದೈಹಿಕ ಅಸಾಮರ್ಥ್ಯವನ್ನು ಮೆಟ್ಟಿ ನಿಲ್ಲುವ ಮೂಲಕ ಅವರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು.

2026ರ ಕಾಮನ್‌ವೆಲ್ತ್ ಗೇಮ್ಸ್ ನ F-57 ವಿಭಾಗದ ಶಾಟ್‌ಪುಟ್ ಸ್ಪರ್ಧೆಯಲ್ಲಿ ಅವರು ತೋರಿದ ನಿಖರತೆ ಮತ್ತು ಶಕ್ತಿಯು ಪ್ರಪಂಚದಾದ್ಯಂತ ಗಮನ ಸೆಳೆಯಿತು. ಕಂಚಿನ ಪದಕ ಗೆಲ್ಲುವ ಮೂಲಕ ಅವರು ಭಾರತ ಮತ್ತು ವಿಶೇಷವಾಗಿ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.

ಸತ್ಕಾರ ಸಂದರ್ಭದಲ್ಲಿ ಶಿಲ್ಪಾ ಅವರು ಮಾತನಾಡಿ, 'ಈ ಕಂಚಿನ ಪದಕವು ನನ್ನ ಜೀವನದ ಪ್ರಮುಖ ತಿರುವು. ಮುಂದಿನ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವುದು ನನ್ನ ಗುರಿ' ಎಂದು ಹೇಳಿದರು. ಅವರ ಈ ಸಾಧನೆಯು ಲಕ್ಷಾಂತರ ಯುವಕರು ಮತ್ತು ಅಂಗವಿಕಲರಿಗೆ ಪ್ರೇರಣೆಯಾಗಿದೆ.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಶಿಲ್ಪಾ ಅವರಿಗೆ ಎಲ್ಲಾ ರೀತಿಯ ಸಹಾಯ ಮತ್ತು ಪ್ರೋತ್ಸಾಹವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. 'ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ' ಎಂದು ಅವರು ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Guaranteenews