Dailyhunt
ಕಲ್ಲಿದ್ದಲು ಕಳ್ಳಸಾಗಣೆ ಕೇಸ್‌: ದೆಹಲಿ, ಹೈದರಾಬಾದ್, ಬೆಂಗಳೂರಿನ ಐಪ್ಯಾಕ್ ಕಚೇರಿ ಮೇಲೆ ಇಡಿ ದಾಳಿ

ಕಲ್ಲಿದ್ದಲು ಕಳ್ಳಸಾಗಣೆ ಕೇಸ್‌: ದೆಹಲಿ, ಹೈದರಾಬಾದ್, ಬೆಂಗಳೂರಿನ ಐಪ್ಯಾಕ್ ಕಚೇರಿ ಮೇಲೆ ಇಡಿ ದಾಳಿ

Guaranteenews 2 weeks ago

ವದೆಹಲಿ: ಪಶ್ಚಿಮ ಬಂಗಾಳದ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಮೂರು ಪ್ರಮುಖ ನಗರಗಳಲ್ಲಿ ಏಕಕಾಲಿಕ ದಾಳಿ ನಡೆಸಿದೆ. ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿರುವ ಐಪ್ಯಾಕ್ (ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ) ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ಸೋಧನೆ ನಡೆಸಿದ್ದಾರೆ.

ಜೊತೆಗೆ ಐಪ್ಯಾಕ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ರಿಷಿ ರಾಜ್ ಸಿಂಗ್ ಅವರ ನಿವಾಸಗಳಲ್ಲೂ ಪರಿಶೀಲನೆ ನಡೆಸಲಾಗಿದೆ. ಬೆಂಗಳೂರಿನ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆದಿರುವುದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಪಶ್ಚಿಮ ಬಂಗಾಳದಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಮತ್ತು ಕಳ್ಳಸಾಗಣೆ ನಡೆಯುತ್ತಿದೆ ಎಂಬ ಆರೋಪದ ಮೇಲೆ ಇಡಿ ಕಳೆದ ಹಲವು ತಿಂಗಳುಗಳಿಂದ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಕೋಲ್ಕತ್ತಾ ಸೇರಿದಂತೆ ಹಲವು ಕಡೆಗಳಲ್ಲಿ ಈಗಾಗಲೇ ಆರ್ಥಿಕ ವಹಿವಾಟುಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆದಿತ್ತು.

ಇದಕ್ಕೂ ಮುನ್ನ, ಜನವರಿ ತಿಂಗಳಲ್ಲಿ ಇಡಿ ಐಪ್ಯಾಕ್‌ನ ಕೋಲ್ಕತ್ತಾ ಕಚೇರಿ ಮತ್ತು ಸಂಸ್ಥಾಪಕ-ನಿರ್ದೇಶಕ ಪ್ರತೀಕ್ ಗಾಂಧಿ ಅವರ ಕೋಲ್ಕತ್ತಾ ನಿವಾಸದ ಮೇಲೆ ದಾಳಿ ನಡೆಸಿತ್ತು. ಆ ಬಳಿಕ ವಿಚಾರಣೆಗಾಗಿ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ಪ್ರತೀಕ್ ಗಾಂಧಿ ಮತ್ತು ರಿಷಿ ರಾಜ್ ಸಿಂಗ್ ಅವರು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ನಡೆಯುತ್ತಿರುವ ಚುನಾವಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿ ನೀಡಿದ ನೋಟಿಸ್ ಅನ್ನು ರದ್ದುಪಡಿಸಬೇಕೆಂದು ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಏಪ್ರಿಲ್ 2 ರ ದಾಳಿಯು ಮೂರು ನಗರಗಳಲ್ಲಿ ಏಕಕಾಲದಲ್ಲಿ ನಡೆದಿದ್ದು, ಇಡಿ ತಂಡಗಳು ದೆಹಲಿಯ ಐಪ್ಯಾಕ್ ಕೇಂದ್ರ ಕಚೇರಿ, ಹೈದರಾಬಾದ್ ಮತ್ತು ಬೆಂಗಳೂರಿನ ಕಚೇರಿಗಳಲ್ಲಿ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದೆ. ಬೆಂಗಳೂರಿನ ರಿಷಿ ರಾಜ್ ಸಿಂಗ್ ಅವರ ವಾಸಸ್ಥಾನದಲ್ಲೂ ತನಿಖೆ ನಡೆಸಲಾಗಿದೆ. ಕಲ್ಲಿದ್ದಲು ಕಳ್ಳಸಾಗಣೆಯಿಂದ ಗಳಿಸಿದ ಹಣವನ್ನು ಐಪ್ಯಾಕ್ ಮೂಲಕ ಹರಿಸಲಾಗಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಐಪ್ಯಾಕ್ ಪ್ರಮುಖ ರಾಜಕೀಯ ಸಲಹಾ ಸಂಸ್ಥೆಯಾಗಿದ್ದು, ಹಲವಾರು ರಾಜ್ಯಗಳಲ್ಲಿ ಪಕ್ಷಗಳಿಗೆ ತಂತ್ರಗಾರಿಕೆಯನ್ನು ಒದಗಿಸುತ್ತದೆ. ಪ್ರತೀಕ್ ಗಾಂಧಿ ಮತ್ತು ರಿಷಿ ರಾಜ್ ಸಿಂಗ್ ಇದರ ಸಂಸ್ಥಾಪಕರು. ಚುನಾವಣಾ ಕಾರ್ಯಗಳಿಂದಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂಬ ಅವರ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇನ್ನೂ ವಿಚಾರಣೆಗೆ ಸ್ವೀಕರಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಇಡಿ ಮಾತ್ರ ತನ್ನ ತನಿಖೆಯನ್ನು ಚುರುಕುಗೊಳಿಸಿದೆ.

ಈ ದಾಳಿಯಲ್ಲಿ ಸಂಗ್ರಹಿಸಿದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಇಡಿ ಶೀಘ್ರದಲ್ಲೇ ಆರೋಪಿತರನ್ನು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews