Dailyhunt Logo
  • Light mode
    Follow system
    Dark mode
    • Play Story
    • App Story
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ :ಯುಎಸ್ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ!

ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ :ಯುಎಸ್ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ!

Guaranteenews 2 weeks ago

ಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೆಲೆಗಳ ಮೇಲೆ ಅಮೆರಿಕ ಸೇನೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಕೂಡ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಇದರಿಂದ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳು ಹಾಗೂ ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡಿರುವ ಅಮೆರಿಕ ಸೈನಿಕರ ಮೇಲೆ ದಾಳಿ ನಡೆಸಲು ಇರಾನ್ ಪ್ರಯತ್ನಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಸೇನೆ, IRGCಗೆ ಸೇರಿದ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಆರಂಭಿಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಇದೀಗ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ.

ಜೋರ್ಡಾನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಇರಾನ್‌ನಿಂದ ಒಟ್ಟು 13 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜೋರ್ಡಾನ್‌ನ ವಾಯುಪ್ರದೇಶ ಪ್ರವೇಶಿಸಿದ್ದು, ಈ ಪೈಕಿ 10 ಕ್ಷಿಪಣಿಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ತಡೆದಿವೆ ಎಂದು ಜೋರ್ಡಾನ್ ತಿಳಿಸಿದೆ. ಉಳಿದ ಮೂರು ಕ್ಷಿಪಣಿಗಳು ಜನನಿಬಿಡ ಪ್ರದೇಶಗಳಿಂದ ದೂರ ಬಿದ್ದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೇ ವೇಳೆ, ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೂ ಇರಾನ್ ದೊಡ್ಡ ಪ್ರಮಾಣದಲ್ಲಿ ಡ್ರೋನ್ ದಾಳಿ ನಡೆಸಿದೆ ಎನ್ನಲಾಗಿದೆ. ಈ ದಾಳಿಯಿಂದಾಗಿ ಅಮೆರಿಕ ಸೇನಾ ನೆಲೆಗಳ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಆದರೆ ದಾಳಿಯಲ್ಲಿ ಅಮೆರಿಕ ಸಿಬ್ಬಂದಿಗೆ ಉಂಟಾದ ಹಾನಿ ಅಥವಾ ಸಾವಿನ ಕುರಿತು ಅಮೆರಿಕದ ಅಧಿಕಾರಿಗಳಿಂದ ತಕ್ಷಣ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಇತ್ತ ಕುವೈತ್ ಕೂಡ ಇರಾನ್‌ನ ಪ್ರತೀಕಾರದ ಕಾರ್ಯಾಚರಣೆಯ ಬಳಿಕ ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಸಕ್ರಿಯಗೊಂಡಿವೆ ಎಂದು ತಿಳಿಸಿದೆ. ಪ್ರತಿಕೂಲ ಡ್ರೋನ್‌ಗಳ ದಾಳಿಗೆ ತನ್ನ ರಕ್ಷಣಾ ವ್ಯವಸ್ಥೆಗಳು ಪ್ರತಿಕ್ರಿಯಿಸುತ್ತಿವೆ ಎಂದು ಕುವೈತ್ ಹೇಳಿಕೊಂಡಿದೆ.

ಅಮೆರಿಕದ ದಾಳಿಗೆ ತಿರುಗೇಟು ಎಂದ ಇರಾನ್

IRGC ನೆಲೆಗಳ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಇರಾನ್ ತೀವ್ರವಾಗಿ ಖಂಡಿಸಿದೆ. ಅಮೆರಿಕವು ನಾಗರಿಕ ಪ್ರದೇಶಗಳು ಸೇರಿದಂತೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ ಎಂದು ಹೇಳಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಸುತ್ತಮುತ್ತ ವಿದೇಶಿ ಪಡೆಗಳ ವಿರುದ್ಧದ ಕಾರ್ಯಾಚರಣೆಯನ್ನು ಮತ್ತಷ್ಟು ಬಿಗಿಗೊಳಿಸಿರುವುದಾಗಿ IRGC ತಿಳಿಸಿದೆ.

ಜೋರ್ಡಾನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಅಮೆರಿಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಹೇಳಿಕೊಂಡಿದೆ. ಅಲ್ಲದೆ, ಬಹ್ರೇನ್‌ನಲ್ಲಿರುವ ಅಮೆರಿಕ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ದೊಡ್ಡ ಪ್ರಮಾಣದ ಡ್ರೋನ್ ದಾಳಿ ನಡೆಸಲಾಗಿದೆ ಎಂದು IRGC ಹೇಳಿದೆ.ಆದರೆ ಇರಾನ್ ಮಾಡಿರುವ ಈ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಅಮೆರಿಕದಿಂದ ಇನ್ನೂ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ

Dailyhunt
Disclaimer: This content has not been generated, created or edited by Dailyhunt. Publisher: Guaranteenews