ಇಂದಿನ ಧಾವಂತದ ಬದುಕಿನಲ್ಲಿ ನಾವು ಮುಖದ ಸೌಂದರ್ಯ ಮತ್ತು ಚರ್ಮದ ಆರೈಕೆಗೆ ನೀಡುವಷ್ಟು ಆದ್ಯತೆಯನ್ನು ನಮ್ಮ ಪಾದಗಳಿಗೆ ನೀಡುವುದಿಲ್ಲ. ಆದರೆ, ಆಯುರ್ವೇದ ಮತ್ತು ಆಧುನಿಕ ಜೀವನಶೈಲಿ ಎರಡರ ಪ್ರಕಾರವೂ ರಾತ್ರಿ ಮಲಗುವ ಮುನ್ನ ಕಾಲು ತೊಳೆಯುವುದು ಕೇವಲ ಸ್ವಚ್ಛತೆಯಲ್ಲ, ಅದೊಂದು ಅತ್ಯುತ್ತಮ ಆರೋಗ್ಯಕರ ಅಭ್ಯಾಸ.
ದಿನವಿಡೀ ನಮ್ಮ ಇಡೀ ದೇಹದ ಭಾರವನ್ನು ಹೊತ್ತು ತಿರುಗುವ ಪಾದಗಳನ್ನು ಸರಿಯಾಗಿ ಆರೈಕೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಸುಧಾರಿಸಬಹುದು.
1. ಗಾಢ ನಿದ್ರೆಗೆ ಪಾದಗಳ ಆರೈಕೆ ಅಗತ್ಯ
ಇಂದಿನ ದಿನಗಳಲ್ಲಿ ಅನೇಕರು ಕೆಲಸದ ಒತ್ತಡ ಅಥವಾ ಮೊಬೈಲ್ ಬಳಕೆಯಿಂದಾಗಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲು ತೊಳೆಯುವುದರಿಂದ ಪಾದಗಳ ರಕ್ತನಾಳಗಳು ಸಡಿಲಗೊಳ್ಳುತ್ತವೆ. ಇದು ದೇಹದ ಉಷ್ಣತೆಯನ್ನು ಸಮತೋಲನಕ್ಕೆ ತರುತ್ತದೆ ಮತ್ತು ಮೆದುಳಿಗೆ ಆರಾಮದಾಯಕ ಸಂದೇಶವನ್ನು ರವಾನಿಸುತ್ತದೆ. ನಿದ್ರಾಹೀನತೆ ಇರುವವರಿಗೆ ಇದೊಂದು ಸರಳ ಮತ್ತು ನೈಸರ್ಗಿಕ ಚಿಕಿತ್ಸೆಯಿದ್ದಂತೆ.
2. ಮಾನಸಿಕ ಒತ್ತಡ ಮತ್ತು ಆತಂಕ ನಿವಾರಣೆ
ನಮ್ಮ ಪಾದಗಳಲ್ಲಿ ನೂರಾರು ನರಗಳ ತುದಿಗಳಿರುತ್ತವೆ (Nerve endings). ದಿನವಿಡೀ ಕೆಲಸದ ಒತ್ತಡದಿಂದ ಸುಸ್ತಾದ ಮನಸ್ಸಿಗೆ ಪಾದಗಳ ಸ್ವಚ್ಛತೆ ಹೊಸ ಚೈತನ್ಯ ನೀಡುತ್ತದೆ. ರಾತ್ರಿ ಕಾಲು ತೊಳೆದು ಸ್ವಚ್ಛಗೊಳಿಸಿದಾಗ ಪಾದಗಳ ಸ್ನಾಯುಗಳು ಸಡಿಲಗೊಂಡು ಮನಸ್ಸಿಗೆ ನಿರಾಳತೆ ಸಿಗುತ್ತದೆ. ಇದು ಒತ್ತಡದ ಹಾರ್ಮೋನ್‌ಗಳನ್ನು ಕಡಿಮೆ ಮಾಡಿ ಮಾನಸಿಕ ಪ್ರಶಾಂತತೆಗೆ ದಾರಿ ಮಾಡಿಕೊಡುತ್ತದೆ.
3. ಪಾದಗಳ ಸೌಂದರ್ಯ
ದಿನವಿಡೀ ಶೂ ಅಥವಾ ಚಪ್ಪಲಿ ಧರಿಸುವುದರಿಂದ ಪಾದಗಳಲ್ಲಿ ಬೆವರು ಮತ್ತು ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತವೆ. ಇದು ಪಾದದ ದುರ್ಗಂಧ (Foot Odor) ಹಾಗೂ ಚರ್ಮದ ಸೋಂಕಿಗೆ ಕಾರಣವಾಗಬಹುದು. ಮಲಗುವ ಮುನ್ನ ಕಾಲು ತೊಳೆಯುವುದರಿಂದ ಚರ್ಮದ ರಂಧ್ರಗಳು ಮುಕ್ತವಾಗಿ ಉಸಿರಾಡಲು ಸಾಧ್ಯವಾಗುತ್ತದೆ. ಇದರಿಂದ ಪಾದದ ಹಿಮ್ಮಡಿ ಒಡೆಯುವುದು ತಪ್ಪುತ್ತದೆ ಮತ್ತು ಪಾದಗಳು ಮೃದುವಾಗಿ ಸುಂದರವಾಗಿ ಕಾಣುತ್ತವೆ.
4. ದೇಹದ ಉಷ್ಣತೆ ಸಮತೋಲನ
ಕೆಲವರಿಗೆ ರಾತ್ರಿ ವೇಳೆ ಪಾದಗಳಲ್ಲಿ ವಿಪರೀತ ಉರಿ ಕಾಣಿಸಿಕೊಳ್ಳುತ್ತದೆ. ಇಂತಹವರು ಮಲಗುವ ಮುನ್ನ ತಣ್ಣೀರಿನಲ್ಲಿ ಕಾಲು ತೊಳೆದರೆ ದೇಹದ ಹೆಚ್ಚುವರಿ ಉಷ್ಣತೆ (Body Heat) ಕಡಿಮೆಯಾಗುತ್ತದೆ. ದಿನವಿಡೀ ನಿಂತು ಕೆಲಸ ಮಾಡುವವರಿಗೆ ಅಥವಾ ದೀರ್ಘಕಾಲ ಓಡಾಡುವವರಿಗೆ ಕಾಲುಗಳಲ್ಲಿ ನೋವು ಮತ್ತು ಸ್ನಾಯು ಸೆಳೆತ ಸಾಮಾನ್ಯ. ಕಾಲು ತೊಳೆದು ಲಘುವಾಗಿ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸಿ, ಬೆಳಗ್ಗೆ ಎದ್ದಾಗ ಕಾಲುಗಳು ಹಗುರವೆನಿಸುತ್ತವೆ.
ಅನುಸರಿಸಬೇಕಾದ ಕ್ರಮಗಳು:
ಕಾಲು ತೊಳೆದ ನಂತರ ಪಾದಗಳನ್ನು ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿ ನಂತರ ಮಲಗುವುದು ಉತ್ತಮ.
ಸಾಧ್ಯವಾದರೆ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ಮಾಯಿಶ್ಚರೈಸರ್ ಹಚ್ಚುವುದು ಪಾದಗಳ ಆರೋಗ್ಯವನ್ನು ಮತ್ತಷ್ಟು ವೃದ್ಧಿಸುತ್ತದೆ.
ಪಾದದ ತಳಭಾಗದಲ್ಲಿರುವ ನರಗಳ ಮೇಲೆ ನೀರು ಬಿದ್ದಾಗ ದೇಹದ ಉಷ್ಣತೆ ಕಡಿಮೆಯಾಗಿ ರಕ್ತಪರಿಚಲನೆ ಸುಧಾರಿಸುತ್ತದೆ, ಇದರಿಂದ ದುಃಸ್ವಪ್ನಗಳು ದೂರವಾಗಿ ಸುಖಕರವಾದ ನಿದ್ರೆ ನಿಮ್ಮದಾಗುತ್ತದೆ.

