ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಂಪುಟದ ಸಚಿವ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಡುತ್ತಲೇ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ ನಾಗೇಂದ್ರ, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.
ನಾಗೇಂದ್ರ ಅವರ ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಜಿ.ಸಿ. ಚಂದ್ರಶೇಖರ್, ಸಚಿವ ಡಾ. ಅಜಯ್ ಸಿಂಗ್ ಹಾಗೂ ಸಚಿವ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
'ಪಕ್ಷಕ್ಕೆ ಮುಜುಗರವಾಗಬಾರದು'
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗೇಂದ್ರ ತಮ್ಮ ರಾಜೀನಾಮೆಯ ಹಿಂದಿನ ಪ್ರಮುಖ ಕಾರಣವನ್ನು ವಿವರಿಸಿದ ನಾಗೇಂದ್ರ, ಪ್ರಕರಣದ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಯಾವುದೇ ರೀತಿಯ ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನ ತ್ಯಜಿಸುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.
ತಮ್ಮ ವಿರುದ್ಧದ ತನಿಖಾ ಸಂಸ್ಥೆಗಳಾದ ಎಸ್‌ಐಟಿ ಮತ್ತು ಸಿಐಡಿ ಮೇಲೆ ನಂಬಿಕೆ ಹಾಗೂ ಗೌರವವಿದೆ ಎಂದು ತಿಳಿಸಿದ ಅವರು, ತನಿಖೆಯಲ್ಲಿ ಸತ್ಯ ಹೊರಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
'ವಾಲ್ಮೀಕಿ ನಿಗಮದ ಹಗರಣದಲ್ಲಿ ನನ್ನ ಪಾತ್ರವಿಲ್ಲ'
ತಮ್ಮ ವಿರುದ್ಧದ ಆರೋಪಗಳನ್ನು ತೀವ್ರವಾಗಿ ಖಂಡಿಸಿದ ನಾಗೇಂದ್ರ, ವಾಲ್ಮೀಕಿ ನಿಗಮದ ಹಗರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು. ತಾವು ಕೇವಲ ಸಚಿವರಾಗಿದ್ದ ಕಾರಣಕ್ಕೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದರು.
ತಮ್ಮ ವಿರುದ್ಧದ ತನಿಖೆ ಹಾಗೂ ಕಾನೂನು ಕ್ರಮಗಳ ಕುರಿತು ಮಾತನಾಡಿದ ಅವರು, ಮೊದಲ ಚಾರ್ಜ್‌ಶೀಟ್‌ನಲ್ಲಿ ತಮ್ಮ ಹೆಸರು ಇರಲಿಲ್ಲ. ಆದರೆ ಎರಡನೇ ಚಾರ್ಜ್‌ಶೀಟ್‌ನಲ್ಲಿ ತಮ್ಮ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಿದರು. ತಾವು ಎರಡನೇ ಬಾರಿಗೆ ಸಚಿವರಾಗಿದ್ದ ಕಾರಣಕ್ಕೆ ಪ್ರಕರಣದಲ್ಲಿ ತಮ್ಮ ಹೆಸರನ್ನು ಸೇರಿಸಲಾಗಿದೆ ಎಂಬ ಆರೋಪವನ್ನೂ ಮಾಡಿದರು.
ಇದೇ ವೇಳೆ, ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲರ ಬಳಿಗೆ ತೆರಳಲಾಗಿದೆ ಎಂದು ಹೇಳಿದ ನಾಗೇಂದ್ರ, ತಮ್ಮ ಪಕ್ಷದ ನಾಯಕರ ವಿರುದ್ಧವೂ ಪ್ರಕರಣಗಳಿವೆ ಎಂದು ಉಲ್ಲೇಖಿಸಿದರು. 'ನನಗೊಂದು ನ್ಯಾಯ, ನಿಮಗೊಂದು ನ್ಯಾಯವೇ?' ಎಂಬ ಪ್ರಶ್ನೆ ಮಾಡಿದರು. .
ಬಿಜೆಪಿ ವಿರುದ್ಧ ನಾಗೇಂದ್ರ ವಾಗ್ದಾಳಿ
ವಿಪಕ್ಷಗಳ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ನಾಗೇಂದ್ರ, ಬಿಜೆಪಿ ಮತ್ತು ಜೆಡಿಎಸ್ ಉದ್ದೇಶಪೂರ್ವಕವಾಗಿ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಬರ, ಕಾವೇರಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿದ್ದರೂ ಅವುಗಳ ಬಗ್ಗೆ ಚರ್ಚೆ ನಡೆಸಲು ವಿಪಕ್ಷಗಳು ಅವಕಾಶ ನೀಡಲಿಲ್ಲ ಎಂದು ಹೇಳಿದರು.
ಬಳ್ಳಾರಿ ಪಾದಯಾತ್ರೆಗೆ ಯಾವುದೇ ಸೂಕ್ತ ವಿಷಯವಿಲ್ಲದ ಕಾರಣ ರಾಜಕೀಯ ಉದ್ದೇಶದಿಂದಲೇ ಅದನ್ನು ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ ಅವರು, ಮಾಧ್ಯಮಗಳ ಮೂಲಕವೂ ವಿಪಕ್ಷಗಳಿಗೆ ಚರ್ಚೆಗೆ ಬರುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು.
ನಾಗೇಂದ್ರ ಅವರು ಬಿಜೆಪಿ ವಿರುದ್ಧ ಸಾಮಾಜಿಕ ನ್ಯಾಯದ ವಿಚಾರವನ್ನೂ ಪ್ರಸ್ತಾಪಿಸಿದರು. ಬಿಜೆಪಿ 'ಮನುಸ್ಮೃತಿ ವಾದ'ವನ್ನು ಮುಂದಿಟ್ಟುಕೊಂಡು ಜನರಲ್ಲಿ ಮನುವಾದವನ್ನು ಬಿತ್ತಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ದಲಿತರು, ಆದಿವಾಸಿಗಳು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದರು.

