Dailyhunt Logo
  • Light mode
    Follow system
    Dark mode
    • Play Story
    • App Story
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಗುಡ್‌ಬೈ ಹೇಳ್ತಿದ್ದಂತೆ ಕಾರಿನಲ್ಲೇ ಕಣ್ಣೀರಿಟ್ಟ ಸಂತೋಷ್ ಲಾಡ್

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಗುಡ್‌ಬೈ ಹೇಳ್ತಿದ್ದಂತೆ ಕಾರಿನಲ್ಲೇ ಕಣ್ಣೀರಿಟ್ಟ ಸಂತೋಷ್ ಲಾಡ್

Guaranteenews 3 weeks ago

ಬೆಂಗಳೂರು, ಮೇ 28:ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ಕಾಂಗ್ರೆಸ್‌ನ ಅಧಿಕಾರ ಹಸ್ತಾಂತರ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿಸಿದ್ದರಾಮಯ್ಯಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಲು ಅಧಿಕೃತವಾಗಿ ತೀರ್ಮಾನಿಸಿದ್ದಾರೆ. ಇಂದು ಬೆಳಗ್ಗೆ ತಮ್ಮ ನಿವಾಸ 'ಕಾವೇರಿ' ಯಲ್ಲಿ ಹಮ್ಮಿಕೊಂಡಿದ್ದ ಕೊನೆಯ ಬ್ರೇಕ್ಫಾಸ್ಟ್ ಮೀಟಿಂಗ್‌ನಲ್ಲಿ ಸಚಿವರ ಸಮ್ಮುಖದಲ್ಲೇ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಡೆದ ವಿಶೇಷ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಸಚಿವರು ಹಾಗೂ ಆಪ್ತ ನಾಯಕರ ಸಮ್ಮುಖದಲ್ಲೇ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸಭೆಯಲ್ಲಿ ಭಾವುಕ ಕ್ಷಣಗಳಿಗೂ ಸಾಕ್ಷಿಯಾಯಿತು.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ನಾನು ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ. ಮುಂದಿನ ಮುಖ್ಯಮಂತ್ರಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಜಿ. ಪರಮೇಶ್ವರ್ ಆದರೂ ಸರಿ, ಡಿ.ಕೆ. ಶಿವಕುಮಾರ್ ಆದರೂ ಸರಿ, ಯಾರೇ ಮುಖ್ಯಮಂತ್ರಿ ಆದರೂ ಅವರಿಗೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ' ಎಂದು ಸ್ಪಷ್ಟ ಸಂದೇಶ ನೀಡಿದರು.

ಈ ಹೇಳಿಕೆಯ ಮೂಲಕ ಪಕ್ಷದ ಒಳಗಿನ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ ಸಿದ್ದರಾಮಯ್ಯ, ಪಕ್ಷದ ಏಕತೆ ಮತ್ತು ಸರ್ಕಾರದ ಸ್ಥಿರತೆ ಮುಖ್ಯ ಎಂಬ ಸಂದೇಶವನ್ನೂ ಪರೋಕ್ಷವಾಗಿ ರವಾನಿಸಿದರು.

ಸಭೆಯಲ್ಲಿ ಕೇವಲ ನಾಯಕತ್ವ ಬದಲಾವಣೆಯ ವಿಚಾರ ಮಾತ್ರವಲ್ಲ, ರಾಜ್ಯದ ಆರ್ಥಿಕ ಸ್ಥಿತಿ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತೂ ಸಿದ್ದರಾಮಯ್ಯ ಮಹತ್ವದ ಮಾತುಗಳನ್ನು ಹಂಚಿಕೊಂಡಿದ್ದಾರೆ. 'ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬಾರದು. ಆರಂಭದಲ್ಲಿ ಆರ್ಥಿಕ ಒತ್ತಡ ಕಂಡರೂ, ಇದೇ ಕಾಂಗ್ರೆಸ್ ಸರ್ಕಾರದ ಮಾದರಿ. ಜನರಿಗೆ ಕೊಟ್ಟ ಭರವಸೆ ಉಳಿಸಿಕೊಳ್ಳುವುದು ಮುಖ್ಯ' ಎಂದು ಸಚಿವರಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ವಿಚಾರ ಕೇಳಿ ಹಲವು ಸಚಿವರು ಭಾವುಕರಾಗಿದ್ದು, ಅದರಲ್ಲೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೆಚ್ಚು ಮನಸ್ಸಿಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸಭೆ ಮುಗಿದ ಬಳಿಕ ಅವರು ಕಾರಿನಲ್ಲಿ ತೆರಳುವ ವೇಳೆ ಕಣ್ಣೀರು ಹಾಕಿರುವ ದೃಶ್ಯ ಗಮನ ಸೆಳೆದಿದೆ. ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಲು ಮುಂದಾದರೂ, ಯಾವುದೇ ಮಾತು ಆಡದೇ ಕೈಮುಗಿದು ಅಲ್ಲಿಂದ ತೆರಳಿದ್ದಾರೆ.ಸಂತೋಷ್ ಲಾಡ್ ಅವರ ಈ ಭಾವುಕ ಕ್ಷಣ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

ಇದೀಗ ರಾಜ್ಯ ರಾಜಕೀಯದ ಸಂಪೂರ್ಣ ಗಮನ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಯತ್ತ ತಿರುಗಿದೆ. ಡಿ.ಕೆ. ಶಿವಕುಮಾರ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದರೂ, ಜಿ. ಪರಮೇಶ್ವರ್ ಹೆಸರು ಕೂಡ ಚರ್ಚೆಯಲ್ಲಿದೆ. ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಹೆಚ್ಚಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews