Dailyhunt
ತುಮಕೂರು ನವಿಲುಗಳ ಮಾರಣಹೋಮಕ್ಕೆ ಬಿಗ್ ಟ್ವಿಸ್ಟ್ : ನವಿಲುಗಳ ಸರಣಿ ಸಾವಿಗೆ ಕಾರಣ H5N1 ಹಕ್ಕಿ ಜ್ವರ..!

ತುಮಕೂರು ನವಿಲುಗಳ ಮಾರಣಹೋಮಕ್ಕೆ ಬಿಗ್ ಟ್ವಿಸ್ಟ್ : ನವಿಲುಗಳ ಸರಣಿ ಸಾವಿಗೆ ಕಾರಣ H5N1 ಹಕ್ಕಿ ಜ್ವರ..!

Guaranteenews 1 week ago

ತುಮಕೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ನವಿಲುಗಳ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತಪಟ್ಟ ನವಿಲುಗಳ ರಕ್ತ ಮತ್ತು ಅಂಗಾಂಗಗಳ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ (FSL)ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು.

ಆ ವರದಿಯಲ್ಲಿ H5N1 ಹಕ್ಕಿ ಜ್ವರ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

ಏಪ್ರಿಲ್ 16ರಿಂದ ತುಮಕೂರು ತಾಲೂಕಿನ ಬೊಮ್ಮನಹಳ್ಳಿ, ಮಾಚೇನಹಳ್ಳಿ, ಊರ್ಡಿಗೆರೆ, ಗೂಳೂರು, ಟಿ.ಜಿ.ಪಾಳ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ನವಿಲುಗಳ ಸರಣಿ ಸಾವು ಆರಂಭವಾಗಿತ್ತು. ಕೇವಲ 11 ದಿನಗಳಲ್ಲಿ ಬರೋಬ್ಬರಿ 44 ನವಿಲುಗಳು ಮೃತಪಟ್ಟಿದ್ದವು.

ಆರಂಭದಲ್ಲಿ ಅತಿಯಾದ ಶಾಖ, ನಿರ್ಜಲೀಕರಣ ಮತ್ತು ಬೇಸಿಗೆಯ ತಾಪಮಾನ ಏರಿಕೆಯಿಂದಾಗಿ ಈ ಸಾವುಗಳು ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದರು. ಆದರೆ ಪ್ರಾಥಮಿಕ ತನಿಖೆಯಲ್ಲಿ ಹಕ್ಕಿ ಜ್ವರದ ಸಾಧ್ಯತೆಯನ್ನು ಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿರಲಿಲ್ಲ. ಅದರಂತೆ ಮಾದರಿಗಳನ್ನು FSLಗೆ ಕಳುಹಿಸಲಾಗಿತ್ತು.ಈಗ ಲಭ್ಯವಾಗಿರುವ FSL ವರದಿಯು ನವಿಲುಗಳಲ್ಲಿ H5N1 ವೈರಸ್ ಇರುವುದನ್ನು ಸ್ಪಷ್ಟವಾಗಿ ದೃಢಪಡಿಸಿದೆ.

ಈ ಸುದ್ದಿ ಜಿಲ್ಲೆಯ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ. ಹಕ್ಕಿ ಜ್ವರ ದೃಢಪಟ್ಟ ಬೆನ್ನಲ್ಲೇ ಜಿಲ್ಲಾಡಳಿತ ಮತ್ತು ಪಶುಸಂಗೋಪನಾ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ರ್ಯಾಪಿಡ್ ರೆಸ್ಪಾನ್ಸ್ ಟೀಮ್ (RRT) ಗಳನ್ನು ರಚಿಸಲಾಗಿದೆ. ಐದು ಹಳ್ಳಿಗಳಿಗೆ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದ್ದು, ಪ್ರತಿ ತಂಡದಲ್ಲಿ ಪಿಡಿಒ, ಪಶುಸಂಗೋಪನಾ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇರಲಿದ್ದಾರೆ.

ಸೋಂಕು ಹರಡದಂತೆ ನವಿಲುಗಳು ಮೃತಪಟ್ಟ ಪ್ರದೇಶದ 10 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಬರುವ 33 ಹಳ್ಳಿಗಳಲ್ಲಿ ನಿಗಾ ಹೆಚ್ಚಿಸಲಾಗಿದ್ದು, ಡಿಸ್‌ಇನ್ಫೆಕ್ಷನ್ ಸ್ಪ್ರೇ ಮಾಡುವ ಕೆಲಸ ಆರಂಭವಾಗಿದೆ. ಸುತ್ತಮುತ್ತಲಿನ ಕೋಳಿ ಫಾರ್ಮ್‌ಗಳಲ್ಲಿ ನಾಟಿ ಕೋಳಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲು ನಿರ್ಧರಿಸಲಾಗಿದೆ.

ಕೋಳಿ ಫಾರ್ಮ್‌ಗಳಿಗೆ ಅಪರಿಚಿತರ ಪ್ರವೇಶ ನಿಷೇಧಿಸಲಾಗಿದ್ದು, ಯಾವುದೇ ಕೋಳಿಗಳು ಮೃತಪಟ್ಟರೆ ತಕ್ಷಣ ಮಾಹಿತಿ ನೀಡುವಂತೆ ಮಾಲೀಕರಿಗೆ ಸೂಚಿಸಲಾಗಿದೆ.ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವತ್ತ ಎಲ್ಲಾ ಗಮನವನ್ನು ಹರಿಸಿದೆ. ಅನಗತ್ಯ ಆತಂಕ ಪಡದಂತೆ ಮನವಿ ಮಾಡಿದೆ. ಆದರೆ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews