Dailyhunt Logo
  • Light mode
    Follow system
    Dark mode
    • Play Story
    • App Story
ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ: ಪತ್ನಿಯ ಸಂಚು ಬಯಲು ಮಾಡಿದ ಪ್ರಿಯಕರ

ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ: ಪತ್ನಿಯ ಸಂಚು ಬಯಲು ಮಾಡಿದ ಪ್ರಿಯಕರ

Guaranteenews 1 day ago

ಬೆಳಗಾವಿ:ಮಾಜಿ ಸೈನಿಕನ ಕೊಲೆ ಪ್ರಕರಣ ಭೀಕರ ಟ್ವಿಸ್ಟ್ ಪಡೆದುಕೊಂಡಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮದಲ್ಲಿ ನಿವೃತ್ತ ಸೈನಿಕ ಸಂದೀಪ್ ಮಾಂಜರಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣ ಈಗ ಸಹಜ ಸಾವು ಅಲ್ಲ, ಬದಲಿಗೆ ಕೊಲೆ ಎಂದು ತಿಳಿದು ಬಂದಿದೆ.

ಸುಮಾರು 2 ಕೋಟಿ ರೂಪಾಯಿ ವಿಮಾ ಹಣಕ್ಕಾಗಿ ಪತ್ನಿಯೇ ತನ್ನ ಗಂಡನನ್ನು ಕೊಂದಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸೈನಿಕನ ಪತ್ನಿ ಸುಮಾ ಅವರ ಪ್ರಿಯಕರ ಪುಂಡಲೀಕ ಡೊಂಬರ್ ಎಂಬಾತನೇ ಸೆಲ್ಫಿ ವಿಡಿಯೋ ಮೂಲಕ ಸ್ಫೋಟಕ ಸಾಕ್ಷ್ಯ ಬಿಡುಗಡೆ ಮಾಡಿದ್ದಾನೆ.

ಪುಂಡಲೀಕ ತನ್ನ ವಿಡಿಯೋದಲ್ಲಿ ಹೇಳಿರುವ ಪ್ರಕಾರ, ತಾನು ಮೊದಲಿಗೆ ಒಂದು ಸಣ್ಣ ಎಗ್ ರೈಸ್ ಅಂಗಡಿ ನಡೆಸುತ್ತಿದ್ದನು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ಸಂದೀಪ್ ಮಾಂಜರಿ ಅವರ ಪರಿಚಯವಾಗಿದ್ದು, ನಂತರ ಅವರು ಟೀ ಅಂಗಡಿ ಆರಂಭಿಸಿದ್ದರು. ಆತ ನನ್ನ ಅಂಗಡಿ ಬಂದ್ ಮಾಡಿಸಿ ತನ್ನ ಟೀ ಅಂಗಡಿಗೆ ಕರೆದುಕೊಂಡು ಹೋದ. ಅಲ್ಲಿಯೇ ನನಗೆ ಸುಮಾ ಪರಿಚಯವಾಯಿತು. ಇದು ಸ್ನೇಹದಿಂದ ಆರಂಭವಾಗಿ ಅನೈತಿಕ ಸಂಬಂಧಕ್ಕೆ ತಿರುಗಿತು' ಎಂದು ತಿಳಿಸಿದ್ದಾನೆ.

ಆತನ ಹೇಳಿಕೆಯಲ್ಲಿ ಇನ್ನೊಂದು ಭಯಾನಕ ಅಂಶವೂ ಬಹಿರಂಗವಾಗಿದೆ. ಸುಮಾ ತನ್ನ ಗಂಡನಿಗೆ ಮನೆಯಲ್ಲಿ ಮದ್ಯದೊಂದಿಗೆ ನಿದ್ದೆ ಮಾತ್ರೆಗಳನ್ನು ಬೆರೆಸಿ ನೀಡುತ್ತಿದ್ದಳು ಎಂಬುದಾಗಿ ಆತ ಆರೋಪಿಸಿದ್ದಾನೆ. 'ಅವನು ಬದುಕಬಾರದು' ಎಂಬ ರೀತಿಯ ಮಾತುಗಳನ್ನು ಆಕೆ ಹೇಳುತ್ತಿದ್ದಳು ಎಂದು ಕೂಡ ಹೇಳಲಾಗಿದೆ. ಇವುಗಳ ನಡುವೆ, ಹುಕ್ಕೇರಿ ಜಾತ್ರೆಗೆ ತೆರಳಿದ ಸಂದರ್ಭದಲ್ಲಿ ಸಂದೀಪ್‌ಗೆ ಅಪಘಾತವಾಗಿದ್ದು, ನಂತರ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಆ ಸಮಯದಲ್ಲಿ ಸುಮಾ ತನ್ನನ್ನು ಸಂಪರ್ಕಿಸಿ, ವಿಷದ ಔಷಧಿಯನ್ನು ತರುವಂತೆ ಸೂಚಿಸಿದ್ದಾಳೆ ಎಂದು ಪುಂಡಲೀಕ ಆರೋಪಿಸಿದ್ದಾನೆ. ಅವನು ಹೇಳುವಂತೆ, ತಾನು ಆ ಔಷಧಿಯನ್ನು ತಂದುಕೊಟ್ಟ ನಂತರದ ದಿನವೇ ಸಂದೀಪ್ ಆಸ್ಪತ್ರೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ತನ್ನಲ್ಲಿ ಅನುಮಾನಗಳು ಮೂಡಿತ್ತು ಎಂದು ಆತ ಹೇಳಿದ್ದಾನೆ.

ಇದಲ್ಲದೆ, ಪತ್ನಿ ಸುಮಾ 2 ಕೋಟಿ ರೂಪಾಯಿ ವಿಮಾ ಹಣದ ಬಗ್ಗೆ ಮಾತನಾಡಿದ್ದಾಳೆ ಎಂಬುದೂ ವಿಡಿಯೋದಲ್ಲಿ ತಿಳಿಸಿದ್ದಾನೆ. ಆ ಹಣ ಬಂದ ನಂತರ ಎಲ್ಲರೂ ಸೇರಿ ಹೊಸ ಜೀವನ ಆರಂಭಿಸೋಣ ಎಂದು ಆಕೆ ಹೇಳಿದ್ದಾಳೆ ಎಂಬ ಆರೋಪವೂ ಇದೆ. ಇದೇ ವೇಳೆ, ಸಾಕ್ಷ್ಯ ನಾಶಪಡಿಸಲು ಕೆಲ ವಸ್ತುಗಳನ್ನು ದೂರ ಎಸೆಯಲು ಸೂಚಿಸಿದ್ದಳು ಎಂಬುದನ್ನು ಹೇಳಿದ್ದಾನೆ.

ಈ ವಿಡಿಯೋ ಬಹಿರಂಗವಾದ ನಂತರ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಆರಂಭದಲ್ಲಿ ಹೂಳಲಾಗಿದ್ದ ಮೃತರ ಶವವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಮರುಪರಿಶೀಲನೆ ನಡೆಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡವು ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದು, ವಿಷಪ್ರಯೋಗದ ಸಾಧ್ಯತೆಗಳ ಕುರಿತು ತನಿಖೆ ನಡೆಯುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews