Dailyhunt Logo
  • Light mode
    Follow system
    Dark mode
    • Play Story
    • App Story
12 ಸಾವಿರ ಕ್ಯುಸೆಕ್ ದಾಟಿದ ಘಟಪ್ರಭಾ ನದಿ ಒಳ ಹರಿವು; ಮಹಾಮಳೆಗೆ ಮರುಜೀವ ಪಡೆದ ನದಿಯೊಡಲು

12 ಸಾವಿರ ಕ್ಯುಸೆಕ್ ದಾಟಿದ ಘಟಪ್ರಭಾ ನದಿ ಒಳ ಹರಿವು; ಮಹಾಮಳೆಗೆ ಮರುಜೀವ ಪಡೆದ ನದಿಯೊಡಲು

ಬಾಗಲಕೋಟೆ, 08 ಜುಲೈ (ಹಿ.ಸ.)

ಯಂಕರ್ : ಕಳೆದ ನಾಲ್ಕೈದು ದಿನಗಳ ಹಿಂದೆ ಸಂಪೂರ್ಣ ಬತ್ತಿ ಬರಡಾಗಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಘಟಪ್ರಭಾ ನದಿಯೊಡಲು ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮತ್ತೆ ಜೀವಂತಗೊಂಡಿದೆ.

ದಿನದಿಂದ ದಿನಕ್ಕೆ ನದಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ಬುಧವಾರ ಬೆಳಗಿನ ಅಧಿಕೃತ ಮಾಹಿತಿಯ ಪ್ರಕಾರ, ಧೂಪದಾಳ ಜಲಾಶಯದಿಂದ 12,400 ಕ್ಯುಸೆಕ್ ಹಾಗೂ ಬಳ್ಳಾರಿ ನಾಲಾದಿಂದ 386 ಕ್ಯುಸೆಕ್ ಸೇರಿ ಲೋಳಸೂರ ಬ್ಯಾರೇಜ್ ಮೂಲಕ ಒಟ್ಟು 12,786 ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಹರಿದುಬರುತ್ತಿದೆ.

ಮಂಗಳವಾರ ಬೆಳಗಿನ ವೇಳೆಗೆ ನದಿಯಲ್ಲಿ 11,242 ಕ್ಯುಸೆಕ್ ನೀರು ಹರಿಯುತ್ತಿದ್ದು, ಕೇವಲ ಒಂದು ದಿನದ ಅವಧಿಯಲ್ಲಿ 1,544 ಕ್ಯುಸೆಕ್ ನೀರಿನ ಹರಿವಿನಲ್ಲಿ ಏರಿಕೆ ದಾಖಲಾಗಿದೆ. ಈ ಪ್ರಮಾಣ ಕಳೆದ ಕೆಲವು ದಿನಗಳಲ್ಲಿನ ಅತಿದೊಡ್ಡ ಹೆಚ್ಚಳವಾಗಿದ್ದು, ನಿರಂತರ ಮಳೆಯ ಪರಿಣಾಮ ನದಿಯು ಮತ್ತೆ ಚೈತನ್ಯ ಪಡೆದುಕೊಂಡಿದೆ.

ಮಹಾರಾಷ್ಟ್ರದ ಜಲಾನಯನ ಪ್ರದೇಶಗಳು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ನೀರು ಹರಿದುಬರುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆಯ ಮೂಲಗಳು ತಿಳಿಸಿವೆ.

ನದಿಯ ಹರಿವು ಹೆಚ್ಚುತ್ತಿರುವುದರಿಂದ ನದಿ ತೀರದ ಗ್ರಾಮಗಳ ರೈತರು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ನೀರಿನ ಕೊರತೆಯಿಂದ ಆತಂಕದಲ್ಲಿದ್ದ ರೈತರಿಗೆ ಈ ಬೆಳವಣಿಗೆ ಸಮಾಧಾನ ತಂದಿದೆ.

ಆದರೆ, ಮಳೆಯ ತೀವ್ರತೆ ಮುಂದುವರಿದರೆ ನದಿಯ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿ ತೀರದ ನಿವಾಸಿಗಳು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸಂಬಂಧಿತ ಇಲಾಖೆ ಸೂಚಿಸಿದೆ. ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸುತ್ತಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada