Dailyhunt Logo
  • Light mode
    Follow system
    Dark mode
    • Play Story
    • App Story
ಆಧುನಿಕ ಕೃಷಿಗಾಗಿ ಮಣ್ಣು ಪರೀಕ್ಷೆ ಅಗತ್ಯ:ಕೃಷಿ ಇಲಾಖೆ

ಆಧುನಿಕ ಕೃಷಿಗಾಗಿ ಮಣ್ಣು ಪರೀಕ್ಷೆ ಅಗತ್ಯ:ಕೃಷಿ ಇಲಾಖೆ

ಗದಗ, 07 ಜುಲೈ (ಹಿ.ಸ.)

ಯಂಕರ್:- ಮಣ್ಣು ಪರೀಕ್ಷೆಯು ಕೃಷಿ ಇಲಾಖೆಯ ಮೂಲಭೂತ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಸಮತೋಲನ ಮತ್ತು ಸಮಗ್ರ ರಸಗೊಬ್ಬರಗಳ ಬಳಕೆ ಹಾಗೂ ಮಣ್ಣು ಆರೋಗ್ಯ ಸಂರಕ್ಷಣೆ ಮತ್ತು ಸುಧಾರಣೆ ಕೈಗೊಳ್ಳಲು ಆಧುನಿಕ ಕೃಷಿ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಮಣ್ಣು ಪರೀಕ್ಷೆ ಆಧಾರದ ಮೇಲೆ ರೈತರು ಬೆಳೆಗಳಿಗೆ ಸಮತೋಲನ ರಸಗೊಬ್ಬರಗಳ ಬಳಕೆ ಹಾಗೂ ಸಮಗ್ರ ಸಸ್ಯ ಪೋಷಕಾಂಶಗಳ ನಿರ್ವಹಣೆ ಮಾಡುವುದರಿಂದ ಮಣ್ಣು ಆರೋಗ್ಯವನ್ನು ಮತ್ತು ಭೂಫಲವತ್ತತೆ ನಿರಂತರವಾಗಿ ಕಾಪಾಡಿಕೊಂಡು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ರಾಜ್ಯದ ರೈತ ಹಿಡುವಳಿದಾರರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸುವುದು ಹಾಗೂ ಪೋಷಕಾಂಶಗಳ ಕೊರತೆ ನೀಗಿಸಲು ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರ ಬಳಕೆ ಮಾಡಲು ಪ್ರೋತ್ಸಾಹಿಸುವುದು ಇಲಾಖೆಯ ಪ್ರಮುಖ ಆದ್ಯತೆಗಳಲ್ಲೊಂದಾಗಿದೆ. ಮಣ್ಣು ಆರೋಗ್ಯ ಚೀಟಿಗಳನ್ನು ಇಲಾಖೆಯಿಂದ ಪ್ರತಿ ವರ್ಷವೂ ರೈತರಿಗೆ ವಿತರಿಸಲಾಗುತ್ತಿದೆ. ರೈತರು ಶಿಫಾರಸ್ಸುಗಳನ್ನು ಅಳವಡಿಸಿಕೊಂಡಾಗ ಮಾತ್ರ ಮಣ್ಣು ಆರೋಗ್ಯ ಚೀಟಿಗಳ ಉದ್ದೇಶವು ಸಾರ್ಥಕವಾಗುತ್ತದೆ. ಆದುದರಿಂದ ಮಣ್ಣು ಆರೋಗ್ಯ ಚೀಟಿಗಳಲ್ಲಿಯ ಶಿಫಾರಸ್ಸುಗಳನ್ನು ರೈತರಿಗೆ ವಿವರವಾಗಿ ತಿಳಿಸಲು ಇಲಾಖೆಯು ಕೃಷಿಸಖಿಯರ ಸೇವೆಯನ್ನು ಪಡೆಯಲು ಮುಂದಾಗಿದೆ.

ಸ್ಥಳೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ಕೃಷಿ ಸಖಿ/ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು/ಆತ್ಮ ಸಿಬ್ಬಂದಿಗಳನ್ನು ಬಳಸಿಕೊಂಡು ಮಣ್ಣು ಆರೋಗ್ಯ ಚೀಟಿಗಳಲ್ಲಿ ರೈತರ ತಾಕುಗಳ ಪೋಷಕಾಂಶಗಳ ಲಭ್ಯತೆಯನ್ನು ವಿವರಿಸಲಾಗುವುದು. ರೈತರು ತಮ್ಮ ತಾಕುಗಳಲ್ಲಿ ಸಾವಯವ ಇಂಗಾಲ, ರಸಸಾರ, ಮುಖ್ಯ ಪೋಷಕಾಂಶಗಳು, ಲಘು ಪೋಷಕಾಂಶಗಳು, ಕ್ಷಾರ/ಆಮ್ಲ ಸ್ಥಿತಿ ಇತ್ಯಾದಿಗಳನ್ನು ಅರಿತು, ಆ ಪ್ರಕಾರ ತಮ್ಮ ತಾಕುಗಳಲ್ಲಿ ಉಪಯೋಗಿಸುವ ಸಾವಯವ ಗೊಬ್ಬರ, ರಾಸಾಯನಿಕ ಗೊಬ್ಬರ ಇತ್ಯಾದಿಗಳ ಪ್ರಮಾಣಗಳನ್ನು ನಿರ್ಧರಿಸಬಹುದಾಗಿದೆ. ಇದರಿಂದ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಅಧಿಕ ಉತ್ಪಾದನೆಗೆ ಭೂಫಲವತ್ತತೆಗೆ ಸಂಬಂಧಿಸಿದ ಅಪಾಯಗಳನ್ನು ನಿಯಂತ್ರಿಸಲು ಪೋಷಕಾಂಶಗಳ ಸಮತೋಲನ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೇ, ರಸಗೊಬ್ಬರಗಳು ಹಾಗೂ ರಾಸಾಯನಿಕಗಳ ಉಪಯೋಗದಿಂದ ಆಗಬಹುದಾದ ಹೆಚ್ಚುವರಿ ವೆಚ್ಚವನ್ನು ನಿಯಂತ್ರಿಸಬಹುದಾಗಿದೆ. ತತ್ಪರಿಣಾಮವಾಗಿ ಗುಣಮಟ್ಟದ ಉತ್ಪಾದನೆಯನ್ನು ಪಡೆಯಬಹುದಾಗಿದೆ.

ರೈತ ಬಾಂಧವರು ಬೆಳೆ ಪರಿವರ್ತನೆ, ಅಂತರ್ ಬೆಳೆ ಪದ್ಧತಿ, ಸಮಗ್ರ ಕೃಷಿ ಪದ್ಧತಿ, ಸಾವಯವ ಕೃಷಿ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಲ್ಲಿ ಮಣ್ಣು ಆರೋಗ್ಯವನ್ನು ಉತ್ತಮಗೊಳಿಸಬಹುದಾಗಿದೆ. ರೈತ ಬಾಂಧವರು ಮಣ್ಣು ಆರೋಗ್ಯ ಚೀಟಿಗಳಲ್ಲಿನ ಶಿಫಾರಸ್ಸುಗಳನ್ನು ಕಡ್ಡಾಯವಾಗಿ ಪಾಲಿಸಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada