Dailyhunt
ಆಟೋ ಗ್ಯಾಸ್ ದರ ಕೃತಕ ಅಭಾವ, ಬಂಕ್ ಮಾಲೀಕರ ವಿರುದ್ಧ ಆಕ್ರೋಶ

ಆಟೋ ಗ್ಯಾಸ್ ದರ ಕೃತಕ ಅಭಾವ, ಬಂಕ್ ಮಾಲೀಕರ ವಿರುದ್ಧ ಆಕ್ರೋಶ

ಗದಗ, 02 ಏಪ್ರಿಲ್ (ಹಿ.ಸ.) :

ಯಂಕರ್ : ಗದಗ ಜಿಲ್ಲೆಯಲ್ಲಿ ಆಟೋ ಗ್ಯಾಸ್ (ಎಲ್ಪಿಜಿ) ದರದಲ್ಲಿ ಭಾರೀ ಏರಿಕೆ ಹಾಗೂ ಕೃತಕ ಅಭಾವ ಸೃಷ್ಟಿಸಿ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಆಟೋ ಚಾಲಕರ ಸಂಕಷ್ಟ ತೀವ್ರಗೊಂಡಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಯುದ್ಧದ ನೆಪವೊಡ್ಡಿ ತೈಲ ಕಂಪನಿಗಳು ದರ ಏರಿಸುತ್ತಿರುವುದರ ನಡುವೆಯೇ ಜಿಲ್ಲೆಯ ಕೆಲ ಗ್ಯಾಸ್ ಬಂಕ್ ಮಾಲೀಕರು 'ನೋ ಸ್ಟಾಕ್' ಫಲಕ ಹಾಕಿ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ತುರ್ತು ಪರಿಸ್ಥಿತಿಯಲ್ಲಿ ಗ್ಯಾಸ್ ಕೇಳುವ ಚಾಲಕರಿಂದ ಲೀಟರ್ಗೆ ₹5 ರಿಂದ ₹20 ರವರೆಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾರ್ಚ್ 1ರಂದು ಪ್ರತಿ ಲೀಟರ್ಗೆ ₹60 ಇದ್ದ ಎಲ್ಪಿಜಿ ದರವು ಕೇವಲ ಒಂದು ತಿಂಗಳ ಅವಧಿಯಲ್ಲಿ ₹97ಕ್ಕೆ ಏರಿಕೆಯಾಗಿದೆ. ₹37ರ ಈ ಭಾರೀ ಏರಿಕೆ ಬಡ ಮತ್ತು ಮಧ್ಯಮ ವರ್ಗದ ಆಟೋ ಚಾಲಕರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಆದರೂ, ಚಾಲಕರು ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಮಾಡದೆ ಹಳೆಯ ದರದಲ್ಲೇ ಸೇವೆ ನೀಡುತ್ತಿರುವುದು ಗಮನಾರ್ಹವಾಗಿದೆ ಎಂದು ಹಡಪದ ತಿಳಿಸಿದ್ದಾರೆ.

ದರ ಏರಿಕೆ ಮತ್ತು ಅಕ್ರಮ ವಸೂಲಿ ಪರಿಣಾಮ ದಿನವಿಡೀ ದುಡಿದರೂ ಚಾಲಕರಿಗೆ ಕೇವಲ ₹100ರಿಂದ ₹200ರವರೆಗೆ ಮಾತ್ರ ಆದಾಯ ಉಳಿಯುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಮಕ್ಕಳ ಶಿಕ್ಷಣ, ಆಹಾರ ಹಾಗೂ ಔಷಧ ವೆಚ್ಚಗಳನ್ನು ಭರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲಾ ಆಟೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರಾದ ವಿಜಯ ಕಲ್ಮನಿ ಹಾಗೂ ಮಂಜುನಾಥ ಆಗಸಿಮನಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಬಳಿಕ ಕೆಲ ದಿನಗಳ ಕಾಲ ದರ ಇಳಿಸಲಾಗಿತ್ತು. ಆದರೆ ಇದೀಗ ಮತ್ತೆ ₹97ಕ್ಕೆ ಏರಿಸಿರುವುದು ಚಾಲಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಕ್ಷಣವೇ ಕ್ರಮ ಕೈಗೊಂಡು, ಬಂಕ್ಗಳ ಮೇಲೆ ದಾಳಿ ನಡೆಸಿ ಸ್ಟಾಕ್ ಪರಿಶೀಲನೆ ಮಾಡಬೇಕು. ಕೃತಕ ಅಭಾವ ಸೃಷ್ಟಿಸುವ ಬಂಕ್ಗಳ ಪರವಾನಗಿ ರದ್ದುಪಡಿಸಿ, ಆಟೋ ಚಾಲಕರಿಗೆ ರಿಯಾಯಿತಿ ದರದಲ್ಲಿ ಗ್ಯಾಸ್ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ಇದಕ್ಕೆ ತಕ್ಷಣ ಪರಿಹಾರ ದೊರೆಯದಿದ್ದರೆ, ಸಾವಿರಾರು ಆಟೋ ಚಾಲಕರು ಕುಟುಂಬ ಸಮೇತರಾಗಿ ರಸ್ತೆಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಕೃಷ್ಣಾ ಎಚ್. ಹಡಪದ ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada