Dailyhunt Logo
  • Light mode
    Follow system
    Dark mode
    • Play Story
    • App Story
ಅಭಿವೃದ್ಧಿ ಕಾಮಗಾರಿಗಳ ವಿಳಂಬಕ್ಕೆ ಸಂಸದ ಬಸವರಾಜ್ ಬೊಮ್ಮಾಯಿ ತೀವ್ರ ಅಸಮಾಧಾನ

ಅಭಿವೃದ್ಧಿ ಕಾಮಗಾರಿಗಳ ವಿಳಂಬಕ್ಕೆ ಸಂಸದ ಬಸವರಾಜ್ ಬೊಮ್ಮಾಯಿ ತೀವ್ರ ಅಸಮಾಧಾನ

ಗದಗ, 04 ಜುಲೈ (ಹಿ.ಸ.)

ಯಂಕರ್:- ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಹಾಗೂ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಗದಗ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿಳಂಬಕ್ಕೆ ಸಂಸದ ಬಸವರಾಜ್ ಬೊಮ್ಮಾಯಿ ತೀವ್ರ ಅಸಮಾಧಾನ ಒಂದು ವಾರದೊಳಗೆ ಪ್ರಗತಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ್ ಬೊಮ್ಮಾಯಿ ಸೂಚನೆ ನೀಡಿದರು.

ಗದಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ರಂದು ಜರುಗಿದ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿ ಶಿಫಾರಸು ಮಾಡಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ್ ಬೊಮ್ಮಾಯಿ ಅವರ ಮಾತನಾಡಿದರು.

2024-25 ಮತ್ತು 2025-26ನೇ ಸಾಲಿನ ಅನುದಾನದಡಿ ಹಂಚಿಕೆಯಾದ ಒಟ್ಟು 35 ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಪ್ರಸ್ತುತ 8 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿದ್ದು, ಇನ್ನು 11 ಕಾಮಗಾರಿಗಳಿಗೆ ಇಲಾಖೆಗಳಿಂದ ಅಂದಾಜು ಪತ್ರಿಕೆ ಸಲ್ಲಿಕೆಯಾಗದಿರುವುದಕ್ಕೆ ಹಾಗೂ 16 ಕಾಮಗಾರಿಗಳ ಎರಡನೇ ಹಂತದ ಅನುದಾನ ಬಿಡುಗಡೆಗೆ (25% ಬಿಲ್ ಪ್ರಗತಿ) ಪ್ರಸ್ತಾವನೆ ಸಲ್ಲಿಸದೇ ಇರುವುದಕ್ಕೆ ಅಧಿಕಾರಿಗಳ ವಿಳಂಬ ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕರ ಹಣ ವ್ಯರ್ಥವಾಗಬಾರದು. ವ್ಯವಸ್ಥೆಯಲ್ಲಿ ಆರ್.ಟಿ.ಸಿ (ಆಸ್ತಿ ವಿವರ, ಈ-ಸ್ವತ್ತು ಮತ್ತು ಕಟ್ಟಡ ನಿರ್ಮಾಣ ಪರವಾನಗಿ ದಾಖಲೆಗಳಲ್ಲಿ ಯಾವುದೇ ತಾಂತ್ರಿಕ ತೊಂದರೆಗಳಿದ್ದರೂ ಅವುಗಳನ್ನು ತಕ್ಷಣವೇ ಬಗೆಹರಿಸಿ, ಒಂದು ವಾರದೊಳಗೆ ಎಲ್ಲಾ ದಾಖಲಾತಿಗಳನ್ನು ಸರಿಪಡಿಸಿ ವರದಿ ನೀಡಬೇಕು, ಎಂದು ಕಟ್ಟುನಿಟ್ಟಾಗಿ ನಿರ್ದೇಶಿಸಿದರು.

ಸಭೆಯಲ್ಲಿ ಪ್ರಸ್ತಾಪಿಸಲಾದ 5 ಪ್ರಮುಖ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಏಜೆನ್ಸಿಗಳು ಅಥವಾ ಗುತ್ತಿಗೆದಾರರು ಒಂದು ವಾರದೊಳಗೆ ಅಗತ್ಯ ದಾಖಲೆಗಳನ್ನು ಒದಗಿಸದಿದ್ದರೆ, ಅನುದಾನವನ್ನು ರದ್ದುಪಡಿಸಿ ಬೇರೆ ಅಗತ್ಯ ಕಾಮಗಾರಿಗಳಿಗೆ ಮರುಹಂಚಿಕೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಸಭಾಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಕಂಪ್ಯೂಟರ್ ಉತಾರದಲ್ಲಿ ತಾಂತ್ರಿಕ ದೋಷ ಇರುವುದನ್ನು ಗಮನಿಸಿದ ಸಂಸದರು,ಸರ್ವೆ ನಂಬರ್ ಬದಲಾವಣೆ ಮತ್ತು ಇಲಾಖೆಯ ಹೆಸರಿನ ಗೊಂದಲಗಳನ್ನು ನಿವಾರಿಸಿ, ತಕ್ಷಣವೇ ನಿಯಮಾನುಸಾರ ಅಗತ್ಯ ಮಾರ್ಪಾಡುಗಳೊಂದಿಗೆ ಕಾಮಗಾರಿ ಪ್ರಾರಂಭಿಸಲು ತಿಳಿಸಿದರು.

ಕಂಪ್ಯೂಟರ್ ಉತಾರದಲ್ಲಿ ದೋಷಗಳಿದ್ದರೆ ಅದನ್ನು ಸರಿಪಡಿಸಲು ಎಸಿ ಅವರಿಗೆ ಅಧಿಕಾರವಿದೆ. ತಕ್ಷಣವೇ ಸಂಬಂಧಪಟ್ಟವರ ಒಪ್ಪಿಗೆ ಪತ್ರ ಪಡೆದು, ನಿಯಮಾನುಸಾರ ಅಗತ್ಯ ಮಾರ್ಪಾಡುಗಳೊಂದಿಗೆ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಿ ಎಂದು ಕಂದಾಯ ಅಧಿಕಾರಿಗಳಿಗೆ ತಿಳಿಸಿದರು. ವಿವಿಧ ಗ್ರಾಮಗಳಲ್ಲಿ ನನೆಗುದಿಗೆ ಬಿದ್ದಿರುವ ಸ್ಮಶಾನ ವೈರಾಗ್ಯ ಧಾಮ, ಅಂಬೇಡ್ಕರ್ ಭವನ ಮತ್ತು ಇತರೆ ಸಮುದಾಯ ಭವನಗಳ ಕಾಮಗಾರಿಗಳಿಗೆ ಅಗತ್ಯವಿರುವ ಜಾಗದ ದಾಖಲೆ ಹಾಗೂ ನಿರಾಕ್ಷೇಪಣಾ ಪತ್ರಗಳನ್ನು ಶೀಘ್ರವಾಗಿ ಪಡೆದು ಪ್ರಗತಿ ಸಾಧಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಸರ್ಕಾರದ 'ದರ್ಪಣ್ ಪೋರ್ಟಲ್' ನಲ್ಲಿ ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ನಿಖರ ಮಾಹಿತಿ ಹಾಗೂ ಜಿಪಿಎಸ್ ವಿವರಗಳನ್ನು ಕಾಲಕಾಲಕ್ಕೆ ಕಡ್ಡಾಯವಾಗಿ ಅಪ್ಡೇಟ್ ಮಾಡಬೇಕು ಎಂದು ತಿಳಿಸಿದರು. ಇನ್ನು ಒಂದು ವಾರದೊಳಗೆ 5 ಪ್ರಮುಖ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಒದಗಿಸದಿದ್ದರೆ, ಸದರಿ ಅನುದಾನವನ್ನು ರದ್ದುಪಡಿಸಿ ಬೇರೆ ಅಗತ್ಯ ಕಾಮಗಾರಿಗಳಿಗೆ ಮರುಹಂಚಿಕೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಎಚ್ಚರಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಮಾತನಾಡಿ ಸಂಸದರು ನೀಡಿದ ಎಲ್ಲಾ ಸೂಚನೆಗಳನ್ನು ಜಿಲ್ಲಾಡಳಿತವು ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ ಎಂದು ಭರವಸೆ ನೀಡಿದರು. ಸಂಸದರು ನೀಡಿರುವ ಒಂದು ವಾರದ ಗಡುವಿನೊಳಗೆ ಎಲ್ಲಾ ಬಾಕಿ ಇರುವ ಅಂದಾಜು ಪತ್ರಿಕೆಗಳು ಹಾಗೂ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕು. ಯಾವುದೇ ಇಲಾಖೆಯ ಅಧಿಕಾರಿಯಾಗಲಿ ತಾಂತ್ರಿಕ ನೆಪಗಳನ್ನು ಹೇಳಿಕೊಂಡು ಸಾರ್ವಜನಿಕ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ. ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು. ಇದೇ ನಿಮಗೆ ಕೊನೆಯ ಅವಕಾಶ, ಮುಂದಿನ ದಿನಗಳಲ್ಲಿ ಲೋಪ ಕಂಡುಬಂದರೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲಾಗುವುದು ತಾಂತ್ರಿಕ ಕಾರಣಗಳನ್ನು ಒಡ್ಡಿ ಕಾಮಗಾರಿಗಳನ್ನು ವಿಳಂಬ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ, ಎಂದು ಅಧಿಕಾರಿಗಳಿಗೆ ತಿಳಿಸಿದರು.

ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಇತರೆ ಅನುಷ್ಠಾನಾಧಿಕಾರಿಗಳು ತಕ್ಷಣವೇ ಸಮನ್ವಯ ಸಾಧಿಸಿ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು. 'ದರ್ಪಣ್ ಪೋರ್ಟಲ್' ಅಪ್ಡೇಟ್ ಮಾಡುವಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು, ಸಂಸದರು ನೀಡಿರುವ ಗಡುವಿನೊಳಗೆ ಎಲ್ಲಾ ಬಾಕಿ ಇರುವ ಪ್ರಗತಿ ವರದಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಮತ್ತು ದರ್ಪಣ್ ಪೋರ್ಟಲ್ನಲ್ಲಿ ತಕ್ಷಣವೇ ಅಪ್ಡೇಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ವಿಳಂಬ ಧೋರಣೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ನಿಗದಿತ ಕಾಲಮಿತಿಯೊಳಗೆ ಪ್ರಗತಿ ವರದಿಗಳನ್ನು ಸಲ್ಲಿಸದ ಅಥವಾ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಎಸ್. ವ್ಹಿ.ಸಂಕನೂರು, ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್, ಅಧಿಕಾರಿಗಳು, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಪಾಲಕ ಅಭಿಯಂತರರು ಹಾಗೂ ಹಿರಿಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada