Dailyhunt
ಅಮಿತ್ ಶಾ ರೋಡ್ ಶೋ ವೇಳೆ ಹಿಂಸಾಚಾರ ಆರೋಪ

ಅಮಿತ್ ಶಾ ರೋಡ್ ಶೋ ವೇಳೆ ಹಿಂಸಾಚಾರ ಆರೋಪ

ಕೋಲ್ಕತ್ತಾ, 02 ಏಪ್ರಿಲ್ (ಹಿ.ಸ.) :

ಯಂಕರ್ : ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರದಲ್ಲಿ ಚುನಾವಣಾ ಕಾವು ಗರಿಗೆದರಿದ್ದು, ಸುವೇಂದು ಅಧಿಕಾರಿ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಹಜ್ರಾ ಕ್ರಾಸಿಂಗ್ನಿಂದ ಭರ್ಜರಿ ರೋಡ್ ಶೋ ನಡೆಸಲಾಯಿತು.

ರೋಡ್ ಶೋ ವೇಳೆ ಸಾವಿರಾರು ಬಿಜೆಪಿ ಬೆಂಬಲಿಗರು ಭಾಗವಹಿಸಿದರೂ, ಕಾರ್ಯಕ್ರಮದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸ ಇರುವ ಕಾಲಿಘಾಟ್ ಪ್ರದೇಶದ ಬಳಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರ ನಡುವೆ ಪರಸ್ಪರ ಘೋಷಣೆ-ಪ್ರತಿಘೋಷಣೆಗಳು ಕೇಳಿ ಬಂದವು.

ಈ ವೇಳೆ ಟಿಎಂಸಿ ಕಾರ್ಯಕರ್ತರು ಬಿಜೆಪಿ ರ‍್ಯಾಲಿ ಗೆ ನುಗ್ಗಿ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಘಟನೆಯಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದು, ಕೆಲವರಿಗೆ ಕಣ್ಣಿನ ಭಾಗದಲ್ಲಿ ಗಾಯಗಳಾಗಿವೆ ಎನ್ನಲಾಗಿದೆ.

ಈ ಘಟನೆಯನ್ನು ಭದ್ರತಾ ವೈಫಲ್ಯವೆಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ. ಗೃಹ ಸಚಿವರಂತಹ ಉನ್ನತ ಮಟ್ಟದ ನಾಯಕರ ರ್ಯಾಲಿಗೆ ಸೂಕ್ತ ಭದ್ರತೆ ಒದಗಿಸಲಾಗಿಲ್ಲ ಎಂದು ಪಶ್ಚಿಮ ಬಂಗಾಳ ಪೊಲೀಸರ ವಿರುದ್ಧ ಟೀಕೆ ವ್ಯಕ್ತವಾಗಿದೆ.

ಸ್ಥಳದಲ್ಲಿನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ, ಭದ್ರತಾ ಕಾರಣಗಳಿಂದ ಒಂದು ಹಂತದಲ್ಲಿ ಅಮಿತ್ ಶಾ ಅವರನ್ನು ವಾಹನ ಬದಲಾವಣೆ ಮಾಡಿ ಸುರಕ್ಷಿತವಾಗಿ ಸಾಗಿಸಲಾಯಿತು. ಆದರೂ ರೋಡ್ ಶೋ ನಿಗದಿತ ಮಾರ್ಗದಲ್ಲಿ ಮುಂದುವರಿಯಿತು.

ಇದೇ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಭವಾನಿಪುರ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯ ಅಗತ್ಯವಿದೆ ಎಂದು ಒತ್ತಿ ಹೇಳಿ, ಸುವೇಂದು ಅಧಿಕಾರಿ ಅವರಿಗೆ ಭರ್ಜರಿ ಗೆಲುವು ನೀಡುವಂತೆ ಮತದಾರರಿಗೆ ಮನವಿ ಮಾಡಿದರು. "ಈ ಕ್ಷೇತ್ರದ ಫಲಿತಾಂಶ ರಾಜ್ಯ ರಾಜಕೀಯದ ದಿಕ್ಕನ್ನು ನಿರ್ಧರಿಸಲಿದೆ" ಎಂದು ಅವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada