Dailyhunt
ಅನಧಿಕೃತ ಮರಳುಗಾರಿಕೆಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಸೂಚನೆ

ಅನಧಿಕೃತ ಮರಳುಗಾರಿಕೆಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಸೂಚನೆ

ರಾಯಚೂರು, ಜೂ.21(ಹಿ.ಸ): ಅನಧಿಕೃತ ಮರಳು ಸಾಗಾಣಿಕೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಸಂಬoಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜೂ.21 ರ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಕ್ರಮ ಮರಳು ಸಾಗಣೆ ನಿಯಂತ್ರಿಸಲು ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಮರಳುಗಾರಿಕೆಗೆ ನಿಗದಿ ಪಡಿಸಿದ ರಾಜಧನ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿನಿತ್ಯ ಪಾಳಿಯ ಪ್ರಕಾರ ಪೊಲೀಸ್, ಗೃಹ ರಕ್ಷಕದಳ ಹಾಗೂ ಇತರೆ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸುವಂತೆ ಅವರು ಸೂಚಿಸಿದರು.


ತನಿಖಾ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು.

ಪರವಾನಗಿ ಇಲ್ಲದೇ ಮರಳನ್ನು ಸಾಗಿಸಿದವರನ್ನು ಪತ್ತೆ ಮಾಡಬೇಕು, ಅಲ್ಲದೆ ದೇವದುರ್ಗ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಮರಳು ತುಂಬುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಪರಿಶೀಲಿಸಿ ಕ್ರಮ ಜರುಗಿಸಿ ಎಂದರು.

ಮರಳು ಸಾಗಾಣಿಕೆ ವಾಹನಗಳ ಮೇಲ್ಭಾಗದಲ್ಲಿ ಹೆಚ್ಚುವರಿಯಾಗಿ ಕಬ್ಬಿಣ ಪಟ್ಟಿಯನ್ನು ಅಳವಡಿಸಿ ಅಥವಾ ವಾಹನದ ಸಾಮರ್ಥ್ಯ, ಗಾತ್ರ ಬದಲಾಯಿಸಿ ಹೆಚ್ಚು ಪ್ರಮಾಣದ ಮರಳು ಸಾಗಾಣಿಕೆ ಮಾಡುತ್ತಿರುವ ವಾಹನಗಳಿಗೆ ದಂಡವನ್ನು ವಿಧಿಸಲು ಹಾಗೂ ಪರವಾನಗಿಗಳನ್ನು ರದ್ದುಪಡಿಸಬೇಕು ಮತ್ತು ಅಂತಹ ವಾಹನಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗೆ ಸೂಚಿಸಿದರು.

ಮರಳು ಜಾಗೃತ ದಳವು ಅನಧಿಕೃತ ಮರಳು ಗಣಿಗಾರಿಕೆ, ದಾಸ್ತಾನು, ಸಾಗಣೆ ಕುರಿತು ಬರುವ ದೂರುಗಳ ಬಗ್ಗೆ ಮಾಹಿತಿ ಪಡೆಯಬೇಕು. ದೂರುಗಳು ಬಂದಲ್ಲಿ ತಕ್ಷಣವೇ ಕಾರ್ಯ ಪ್ರವೃತ್ತರಾಗಬೇಕು, ಎಲ್ಲ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿ ಪರಿಶೀಲಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ಸಹಾಯಕ ಆಯುಕ್ತರಾದ ಸಂತೋಷ್ ಕಾಮಗೌಡ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ವಿಶ್ವನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ್ ಸೇರಿದಂತೆ ಮರಳು ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.


Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada