ಕೊಪ್ಪಳ, 07 ಜುಲೈ (ಹಿ.ಸ.)
ಆಯಂಕರ್ : ಬಲ್ಡೋಟ ಕಾರ್ಖಾನೆಗಳ ಮಾಲಿನ್ಯದಿಂದ ಕಳೆದ ಎರಡು ದಶಕಗಳಿಂದ 22 ಗ್ರಾಮಗಳ ಕೃಷಿ ಬದುಕು ಹಾಳಾಗಿದ್ದು, ರೈತರಿಗೆ ಉಂಟಾದ ನಷ್ಟವನ್ನು ಸರ್ಕಾರ ತಕ್ಷಣದಿಂದಲೇ ಭರಿಸಬೇಕು ಹಾಗೂ ಪರಿಸರಕ್ಕೆ ಹಾನಿ ಉಂಟುಮಾಡುತ್ತಿರುವ ಕಾರ್ಖಾನೆಗಳನ್ನು ಮುಚ್ಚಬೇಕು ಎಂದು ಕೆ.ಆರ್.ಎಸ್.
ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಗ್ರಹಿಸಿದರು.
ಬಲ್ಡೋಟ ಕಾರ್ಖಾನೆ ತೆರವುಗೊಳಿಸುವ ಹೋರಾಟದ 250ನೇ ದಿನದ ಅಂಗವಾಗಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ಫೋಸ್ಕೋ ಉಕ್ಕು ಘಟಕ ಹಾಗೂ ಕಪ್ಪತ್ತಗುಡ್ಡ ಗಣಿಗಾರಿಕೆ ವಿರುದ್ಧ ತೋಂಟದ ಶ್ರೀ ಸಿದ್ದಲಿಂಗ ಸ್ವಾಮೀಜಿ ನಡೆಸಿದ ಹೋರಾಟವನ್ನು ಸ್ಮರಿಸಿದ ಅವರು, ನಾಡು, ನೆಲ ಮತ್ತು ರೈತರ ಹಿತ ಕಾಪಾಡುವಲ್ಲಿ ಧರ್ಮಗುರುಗಳ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದರು. ಗವಿಮಠದ ಗವಿಸಿದ್ಧೇಶ್ವರ ಶ್ರೀಗಳು ಪರಿಸರದ ಪರವಾದ ನಿಲುವಿನಿಂದ ಜನರ ವಿಶ್ವಾಸ ಗಳಿಸಿದ್ದು, ಬಲ್ಡೋಟ ವಿರುದ್ಧದ ಹೋರಾಟ ಇಷ್ಟೊಂದು ದೀರ್ಘಕಾಲ ಮುಂದುವರಿಯುವ ಪರಿಸ್ಥಿತಿ ಬರಬಾರದು ಎಂದು ಹೇಳಿದರು.
ಕಾರ್ಖಾನೆಗಳ ಮಾಲಿನ್ಯದಿಂದ ಕೃಷಿ ನಿರಂತರವಾಗಿ ಹಾನಿಯಾಗುತ್ತಿದ್ದು, ಕೃಷಿ ಇಲಾಖೆ ಈ ಕುರಿತು ಯಾವ ವರದಿ ನೀಡಿದೆ ಎಂಬುದನ್ನು ಬಹಿರಂಗಪಡಿಸಬೇಕು. ಮಾಲಿನ್ಯ ನಿಯಂತ್ರಣವಾಗದಿದ್ದರೆ ಕೃಷಿ ಉಳಿಯುವುದಿಲ್ಲ. ಕಳೆದ ಎರಡು ದಶಕಗಳ ನಷ್ಟದ ಸಮಗ್ರ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕೆ.ಆರ್.ಎಸ್. ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಶಾ ವೀರೇಶ ಮಾತನಾಡಿ, ಪರಿಸರ ಹಾನಿ ಮತ್ತು ಭ್ರಷ್ಟಾಚಾರದಲ್ಲಿ ರಾಜಕಾರಣಿಗಳೂ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದರು. ಜನರು ಜಾಗೃತರಾಗಿ ಭ್ರಷ್ಟಾಚಾರರಹಿತ ರಾಜಕೀಯಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯ ಭಾಗವಾಗಿ ಧರಣಿ ಸ್ಥಳದಿಂದ ರೈತ ಸಂಪರ್ಕ ಕೇಂದ್ರದವರೆಗೆ ಕೊಪ್ಪಳ ಸಪ್ಪಳ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾಕಾರರು ಖಾಲಿ ತಟ್ಟೆ ಹಾಗೂ ವಿವಿಧ ವಾದ್ಯಗಳನ್ನು ಬಾರಿಸುವ ಮೂಲಕ ನಮ್ಮ ಅನ್ನ ಕಸಿದುಕೊಳ್ಳಬೇಡಿ ಎಂಬ ಸಂದೇಶ ಸಾರಿದರು. ಕಿವುಡಾದ ಆಡಳಿತ ಮತ್ತು ರಾಜಕಾರಣಿಗಳ ಕಿವಿ ತೆರೆಯುವ ಉದ್ದೇಶದಿಂದ ಈ ವಿಶಿಷ್ಟ ಪ್ರತಿಭಟನೆ ನಡೆಸಲಾಗಿದೆ ಎಂದು ಸಂಘಟಕರು ತಿಳಿಸಿದರು.
ಅಶೋಕ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಲ್ಡೋಟ ತೊಲಗಲಿ, ಕೊಪ್ಪಳ ಉಳಿಯಲಿ, ಕೃಷಿ ಉಳಿಸಿ, ಜೀವ ಉಳಿಸಿ, ಬಸಾಪುರ ಕೆರೆ ಮುಕ್ತಗೊಳಿಸಿ, ತುಂಗಭದ್ರಾ ಉಳಿಸಿ ಎಂಬ ಘೋಷಣೆಗಳನ್ನು ಕೂಗಿದರು.
ರೈತ ಸಂಪರ್ಕ ಕೇಂದ್ರದ ಎದುರು ನಡೆದ ಪ್ರತಿಭಟನೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಜೀವನಸಾಬ್ ಹಾಗೂ ಮುಖ್ಯ ಕಚೇರಿಯ ಕೃಷಿ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡು, ಮಾಲಿನ್ಯದಿಂದ ಉಂಟಾದ ನಷ್ಟವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೋರಾಟಗಾರರನ್ನು ಸ್ವಾಗತಿಸಿದರು. ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ಬಾಕಳೆ ಮಾತನಾಡಿದರು. ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪ್ರತಿಭಟನೆಯಲ್ಲಿ ಕೆ.ಆರ್.ಎಸ್. ಪಕ್ಷದ ಜಂಟಿ ಕಾರ್ಯದರ್ಶಿ ಎಲ್. ಜೀವನ್, ರಾಜ್ಯ ಎಸ್‌ಸಿ-ಎಸ್‌ಟಿ ಘಟಕದ ಅಧ್ಯಕ್ಷ ಪಿ.ಯ. ಗಣೇಶ್, ಜಿಲ್ಲಾ ಅಧ್ಯಕ್ಷ ಗಣೇಶ್ ಅಮೃತ್, ಆಪ್ ಜಿಲ್ಲಾ ಅಧ್ಯಕ್ಷ ಕನಕಪ್ಪ ಮಳಗಾವಿ, ಜಿಲ್ಲಾ ಕಾರ್ಯದರ್ಶಿ ಮಹೆಬೂಬ ಜಮಕಾನದಾರ, ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್, ಸರೋಜಾ ಬಾಕಳೆ, ಮಾಲಾ ಬಡಿಗೇರ, ವಿದ್ಯಾ ನಾಲವಾಡ, ಶಂಭುಲಿಂಗಪ್ಪ ಹರಗೇರಿ, ಡಾ. ಬಸವರಾಜ ಪೂಜಾರ, ಡಿ.ಎಂ. ಬಡಿಗೇರ, ಮಂಜುನಾಥ ಸೊರಟೂರು, ಭೀಮಸೇನ ಕಲಕೇರಿ, ಮೂಕಪ್ಪ ಮೇಸ್ತ್ರಿ, ಚೆನ್ನವೀರಯ್ಯ ಹಿರೇಮಠ, ಮಹೇಶ್ ವದ್ನಾಳ, ಶಿವಪ್ಪ ದೇವರಮನಿ, ಗವಿಸಿದ್ದಪ್ಪ ಪುಟಗಿ, ಗವಿಸಿದ್ದರೆಡ್ಡಿ ರಡ್ಡೇರ, ಮಂಜುನಾಥ ಕೆಂಚನಗೌಡ್ರ, ರಮೇಶ್ ಡಂಬ್ರಳ್ಳಿ, ಸುಖಮುನಿ ಬಡಿಗೇರ, ಮಹಾದೇವಪ್ಪ ಮಾವಿನಮಡು, ಮಲ್ಲಪ್ಪ ಮಾದಿನೂರು, ಶರಣು ಪಾಟೀಲ, ಲಂಬಾಣಿ ಸಂಪ್ರದಾಯದ ಉಡುಗೆಯಲ್ಲಿದ್ದ ಮಹಿಳೆಯರು ಸೇರಿದಂತೆ ನೂರಾರು ರೈತರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

