Dailyhunt Logo
  • Light mode
    Follow system
    Dark mode
    • Play Story
    • App Story

ಬಳ್ಳಾರಿ ಜಿಲ್ಲೆಯಲ್ಲಿ 'ಪರ್ಯಾಯ ಬೆಳೆ ಪದ್ಧತಿ'ಗೆ ಕರೆ

ಬಳ್ಳಾರಿ, 03 ಜುಲೈ (ಹಿ.ಸ.)

ಯಂಕರ್: ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ, ರೈತರು ಆತಂಕಕ್ಕೆ ಒಳಗಾಗದೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶಿಫಾರಸ್ಸು ಮಾಡಿರುವ 'ಪರ್ಯಾಯ ಬೆಳೆ ಪದ್ಧತಿ'ಯನ್ನು ಅಳವಡಿಸಿಕೊಳ್ಳಬೇಕಾಗಿ ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ಕೋರಿದ್ದಾರೆ.

ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 599.0 ಮಿ.ಮೀ ಇದ್ದು, ಜೂನ್-30ರ ಅಂತ್ಯದ ವೇಳೆಗೆ 146.1 ಮಿ.ಮೀ ವಾಡಿಕೆ ಮಳೆಗೆ ಎದುರಾಗಿ 140.7 ಮಿ.ಮೀ (ಶೇ.97) ಮಳೆಯಾಗಿದೆ. ಒಟ್ಟಾರೆ ಬಿದ್ದ ಮಳೆಯ ಪ್ರಮಾಣ ಹೆಚ್ಚಾಗಿದ್ದರೂ ಸಹ, ಮಳೆ ದಿನಗಳು ಕಡಿಮೆಯಿರುವುದು, ಹೆಚ್ಚು ದಿನಗಳ ಅಂತರ ಮತ್ತು ಸಮಪ್ರಮಾಣದ ಹಂಚಿಕೆ ಇಲ್ಲದಿರುವುದರಿಂದ ಜಿಲ್ಲೆಯಲ್ಲಿ ಕೇವಲ ಶೇ.24 ರಷ್ಟು ಮಾತ್ರ ಬಿತ್ತನೆಯಾಗಿದೆ.

ವಿಶೇಷವಾಗಿ ಸಂಡೂರು ತಾಲ್ಲೂಕಿನಲ್ಲಿ 221.6 ಮಿ.ಮೀ ವಾಡಿಕೆ ಮಳೆಗೆ ಎದುರಾಗಿ ಕೇವಲ 88.0 ಮಿ.ಮೀ ಮಳೆಯಾಗಿದ್ದು, ಶೇ. 60 ರಷ್ಟು ಮಳೆ ಕೊರತೆ ಉಂಟಾಗಿದೆ. ಉಳಿದ ತಾಲ್ಲೂಕುಗಳಲ್ಲೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ.

*'ಎಲ್ ನಿನೋ' ಮುನ್ಸೂಚನೆ - ಪರ್ಯಾಯ ಬೆಳೆಗೆ ಒತ್ತು:*

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಪ್ರಸ್ತುತ ವರ್ಷವು 'ಎಲ್ ನಿನೋ' ವರ್ಷವಾಗಿದ್ದು, ಇನ್ನು ಮುಂದೆಯೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಂಭವವಿದೆ. ಹಾಗಾಗಿ ರೈತರು ಸಾಂಪ್ರದಾಯಿಕ ಬೆಳೆಗಳನ್ನೇ ನಂಬಿ ಕೂರದೆ, ತಿಂಗಳು ಮತ್ತು ವಾರವಾರು ಬೀಳುವ ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ಕೆಳಗಿನ ಪರ್ಯಾಯ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ಜುಲೈ 3ನೇ ಅಥವಾ 4ನೇ ವಾರದಲ್ಲಿ ಮಳೆಯಾದರೆ ತೊಗರಿ, ಶೇಂಗಾ, ಸಜ್ಜೆ, ಸೂರ್ಯಕಾಂತಿ ಮತ್ತು ನವಣೆ ಬೆಳೆಗಳನ್ನು ಬೆಳೆಯಬಹುದು. ಮೆಕ್ಕೆಜೋಳವನ್ನೂ ಸಹ ಪರಿಗಣಿಸಬಹುದು.

ಆಗಸ್ಟ್ 1ನೇ ವಾರದಲ್ಲಿ ಮಳೆಯಾದರೆ ತೊಗರಿ, ಶೇಂಗಾ, ಸಜ್ಜೆ, ಸೂರ್ಯಕಾಂತಿ, ನವಣೆ ಮತ್ತು ರಾಗಿ ಬೆಳೆಗಳಿಗೆ ಆದ್ಯತೆ ನೀಡಬೇಕು.

*ಅಂತರಬೆಳೆ ಪದ್ಧತಿ:* ತೊಗರಿ ಮತ್ತು ಶೇಂಗಾ ಬೆಳೆಯನ್ನು (3:1) ಅನುಪಾತದಲ್ಲಿ ಅಂತರಬೆಳೆಯಾಗಿ ಬೆಳೆಯಲು ವಿಜ್ಞಾನಿಗಳು ಶಿಫಾರಸ್ಸು ಮಾಡಿದ್ದಾರೆ. ನವಣೆ ಮತ್ತು ರಾಗಿ ಬೆಳೆಗಳನ್ನೂ ಪರಿಸ್ಥಿತಿಗೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada