Dailyhunt Logo
  • Light mode
    Follow system
    Dark mode
    • Play Story
    • App Story
ಭೂಸ್ವಾಧೀನ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅರಿವು: ಗ್ರಾಮಸಭೆ

ಭೂಸ್ವಾಧೀನ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅರಿವು: ಗ್ರಾಮಸಭೆ

ವಿಜಯಪುರ, 07 ಜುಲೈ (ಹಿ.ಸ.)

ಯಂಕರ್ : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ಲೋಕ ಅದಾಲತ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಾಗೂ ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ರೈತರನ್ನು ಉತ್ತೇಜಿಸುವ ಉದ್ದೇಶದಿಂದ ವಿಶೇಷ ಗ್ರಾಮಸಭೆ ನಡೆಯಿತು.

ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ, ಆಲಮಟ್ಟಿ (ಕೃಷ್ಣಾ ಮೇಲ್ದಂಡೆ ಯೋಜನೆ) ಹಾಗೂ ಕಾರ್ಯನಿರ್ವಾಹಕ ಅಭಿಯಂತರರು, ಕೆಬಿಜೆಎನ್‌ಎಲ್ ಎಂಎಲ್‌ಐಡಿಎನ್-4, ದೇವರಹಿಪ್ಪರಗಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಅಧಿಕಾರಿಗಳು ಲೋಕ ಅದಾಲತ್ನ ಮಹತ್ವ, ಅದರ ಮೂಲಕ ದೊರೆಯುವ ಕಾನೂನು ಸೌಲಭ್ಯಗಳು ಹಾಗೂ ನ್ಯಾಯಾಲಯದಲ್ಲಿ ವರ್ಷಗಳ ಕಾಲ ಬಾಕಿ ಉಳಿಯುವ ಪ್ರಕರಣಗಳನ್ನು ಪರಸ್ಪರ ಸಮ್ಮತಿಯೊಂದಿಗೆ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳುವ ಅವಕಾಶಗಳ ಕುರಿತು ರೈತರಿಗೆ ವಿವರಿಸಿದರು.

ಭೂಸ್ವಾಧೀನ ಪರಿಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೊರೆ ಹೋಗಿರುವ ರೈತರು ಲೋಕ ಅದಾಲತ್ನ ಪ್ರಯೋಜನವನ್ನು ಪಡೆದು ತಮ್ಮ ಪ್ರಕರಣಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದರು. ಲೋಕ ಅದಾಲತ್ ಮೂಲಕ ಸಮಯ, ಹಣ ಮತ್ತು ಶ್ರಮ ಉಳಿತಾಯವಾಗುವುದರ ಜೊತೆಗೆ ಎರಡೂ ಪಕ್ಷಗಳಿಗೂ ನ್ಯಾಯಸಮ್ಮತ ಹಾಗೂ ಶಾಂತಿಯುತ ಪರಿಹಾರ ದೊರೆಯುತ್ತದೆ ಎಂದು ತಿಳಿಸಿದರು.

ಗ್ರಾಮಸ್ಥರು ಹಾಗೂ ರೈತರು ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಭೂಸ್ವಾಧೀನ ಪರಿಹಾರ, ಕಾನೂನು ಪ್ರಕ್ರಿಯೆಗಳು ಹಾಗೂ ಲೋಕ ಅದಾಲತ್ ಕುರಿತು ತಮ್ಮ ಅನುಮಾನಗಳನ್ನು ಅಧಿಕಾರಿಗಳ ಮುಂದಿಟ್ಟರು. ಅಧಿಕಾರಿಗಳು ರೈತರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ, ಸರ್ಕಾರದ ನಿಯಮಾನುಸಾರ ಎಲ್ಲರಿಗೂ ನ್ಯಾಯ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ರೈತ ಮುಖಂಡರು, ಭೂಸ್ವಾಧೀನಕ್ಕೆ ಒಳಗಾದ ರೈತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada