ಗದಗ, 07 ಜುಲೈ (ಹಿ.ಸ.)
ಆಯಂಕರ್:- ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರ 45ನೇ ಜನ್ಮದಿನದ ಅಂಗವಾಗಿ ಗದಗ ನಗರದಲ್ಲಿ ಅಭಿಮಾನಿಗಳು ವಿಶೇಷವಾಗಿ ಸಂಭ್ರಮಾಚರಣೆ ನಡೆಸಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಮಾಯಿಸಿದ ಧೋನಿ ಅಭಿಮಾನಿಗಳು ಕೇಕ್ ಕತ್ತರಿಸಿ ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಶುಭಾಶಯಗಳನ್ನು ಸಲ್ಲಿಸಿದರು.
ಭಾರತಕ್ಕೆ ಎರಡು ವಿಶ್ವಕಪ್ ಸೇರಿದಂತೆ ಅನೇಕ ಐತಿಹಾಸಿಕ ಸಾಧನೆಗಳನ್ನು ತಂದುಕೊಟ್ಟ ಧೋನಿ ಅವರ ನಾಯಕತ್ವ, ಶಾಂತ ಸ್ವಭಾವ ಹಾಗೂ ಆಟದ ಮೇಲಿನ ಬದ್ಧತೆಯನ್ನು ಅಭಿಮಾನಿಗಳು ಈ ಸಂದರ್ಭದಲ್ಲಿ ಸ್ಮರಿಸಿದರು. ಕೇಕ್ ಕತ್ತರಿಸಿದ ಬಳಿಕ ಧೋನಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಸಂತೋಷದ ಜೀವನವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ ಅಭಿಮಾನಿ ವಿನಾಯಕ ಪರಪೂರ, ಭಾರತ ಕ್ರಿಕೆಟ್ಗೆ ಧೋನಿ ಅವರ ಕೊಡುಗೆ ಅಪಾರವಾಗಿದೆ. ಅವರು ಭವಿಷ್ಯದಲ್ಲಿಯೂ ಭಾರತ ತಂಡಕ್ಕೆ ಮೆಂಟರ್ ಆಗಿ ಮಾರ್ಗದರ್ಶನ ನೀಡಬೇಕು. ಯುವ ಆಟಗಾರರಿಗೆ ಅವರ ಅನುಭವ ಬಹಳ ಅಗತ್ಯವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ ಆನಂದ ಮಡಿವಾಳರ್ ಅವರು ತಮಿಳು ಭಾಷೆಯಲ್ಲಿ ಧೋನಿ ಕುರಿತ ಸಂಭಾಷಣೆಯನ್ನು ಹೇಳುವ ಮೂಲಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದರು. ಅವರ ವಿಭಿನ್ನ ಶೈಲಿಯ ಮಾತುಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮದ ವೇಳೆ ಧೋನಿ ಅವರ ಕ್ರಿಕೆಟ್ ಜೀವನದ ಸಾಧನೆಗಳನ್ನು ಸ್ಮರಿಸಲಾಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತಕ್ಕೆ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಟಿ-20 ವಿಶ್ವಕಪ್ ಗೆದ್ದುಕೊಟ್ಟ ಏಕೈಕ ನಾಯಕ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಧೋನಿ, ಕೋಟ್ಯಂತರ ಭಾರತೀಯರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ ಎಂದು ಅಭಿಮಾನಿಗಳು ಹೇಳಿದರು.
ಈ ಸಂಭ್ರಮಾಚರಣೆಯಲ್ಲಿ ರಾಘವೇಂದ್ರ ಮುಟಗಾರ, ಹರೀಶ್ ಬಾದಾಮಿ, ಮಂಜುನಾಥ ಕೊರವರ, ಪ್ರಕಾಶ್, ಸಿದ್ದು, ಪ್ರವೀಣ ಸೇರಿದಂತೆ ಅನೇಕ ಧೋನಿ ಅಭಿಮಾನಿಗಳು ಭಾಗವಹಿಸಿ, ಪರಸ್ಪರ ಸಿಹಿ ಹಂಚಿಕೊಂಡು ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮವು ಕ್ರಿಕೆಟ್ ಅಭಿಮಾನಿಗಳ ಉತ್ಸಾಹ, ಧೋನಿ ಮೇಲಿನ ಅಭಿಮಾನ ಹಾಗೂ ಗೌರವವನ್ನು ಮತ್ತೊಮ್ಮೆ ಪ್ರತಿಬಿಂಬಿಸಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP

