Dailyhunt Logo
  • Light mode
    Follow system
    Dark mode
    • Play Story
    • App Story
ಎಸ್‌ಐಆರ್ ಜಾಗೃತಿ: ಆಕರ್ಷಕ ರಂಗೋಲಿ ಸ್ಪರ್ಧೆ

ಎಸ್‌ಐಆರ್ ಜಾಗೃತಿ: ಆಕರ್ಷಕ ರಂಗೋಲಿ ಸ್ಪರ್ಧೆ

ಬಳ್ಳಾರಿ, 05 ಜುಲೈ (ಹಿ.ಸ.)

ಯಂಕರ್ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪಾರದರ್ಶಕ ಮತದಾರರ ಪಟ್ಟಿ ಸಿದ್ಧಪಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದ ಮುಂಭಾಗದಲ್ಲಿ ವಿಶೇಷ 'ಎಸ್‌ಐಆರ್ ಮತದಾನ ಜಾಗೃತಿ ರಂಗೋಲಿ ಸ್ಪರ್ಧೆ' ಆಯೋಜಿಸಲಾಗಿತ್ತು.

ಮತದಾರರಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಮಹತ್ತರ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತವೂ ಅಮೂಲ್ಯವಾಗಿದೆ. ದೋಷರಹಿತ ಮತದಾರರ ಪಟ್ಟಿ ರೂಪಿಸಲು ಪ್ರತಿಯೊಬ್ಬ ಅರ್ಹ ನಾಗರಿಕನೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ರಂಗೋಲಿ ಅತ್ಯುತ್ತಮ ಮಾಧ್ಯಮವಾಗಿದೆ ಎಂದು ತಿಳಿಸಿದರು.

ಈ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಈ ತಿಂಗಳ ಜುಲೈ 29ರ ವರೆಗೆ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆ ಮನೆಗೂ ಭೇಟಿ ನೀಡಿ ಗಣತಿ ನಮೂನೆಗಳನ್ನು ಮನೆ-ಮನೆಗೆ ನೀಡಲಿದ್ದಾರೆ. ಆ ಫಾರ್ಮ್ಗಳನ್ನು ಯಾವುದೇ ತಪ್ಪುಗಳಿಲ್ಲದಂತೆ ಜಾಗರೂಕತೆಯಿಂದ ಭರ್ತಿ ಮಾಡಿ ನೀಡಬೇಕು ಎಂದರು.

ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು ಪ್ರತಿಯೊಬ್ಬ ಅರ್ಹ ನಾಗರಿಕನೂ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದು ಕಡ್ಡಾಯ. ಹಾಗಾಗಿ ಈ ಮಹತ್ವದ ಪ್ರಕ್ರಿಯೆಯ ಕುರಿತು ಸಮಾಜದ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ತಾವು ಬಿಡಿಸಿದ ಆಕರ್ಷಕ ರಂಗೋಲಿಗಳ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ತಮ್ಮ ಮೊಬೈಲ್ ಸ್ಟೇಟಸ್ಗಳಲ್ಲಿ ಹಂಚಿಕೊಳ್ಳಬೇಕು. ಈ ಮೂಲಕ ಸಾರ್ವಜನಿಕರಲ್ಲಿ ಮತದಾನ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಇನ್ನಷ್ಟು ಹೆಚ್ಚಿನ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಇದೇ ಮಾದರಿಯ ಎಸ್‌ಐಆರ್ ಜಾಗೃತಿ ರಂಗೋಲಿ ಸ್ಪರ್ಧೆಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲೂ ಸಹ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

*ರಂಗೋಲಿಯಲ್ಲಿ ಮೂಡಿದ ಎಸ್‌ಐಆರ್ ಜಾಗೃತಿ ಸಂದೇಶ:*

ಸ್ಪರ್ಧೆಯಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧಾಳುಗಳು ತಮ್ಮ ಕಲ್ಪನಾ ಶಕ್ತಿಯ ಮೂಲಕ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ಗಮನ ಸೆಳೆದರು. ಎಸ್‌ಐಆರ್ ಕುರಿತ ಜಾಗೃತಿ ಸಂದೇಶಗಳು ಮತ್ತು ಲೋಗೋಗಳು ರಂಗೋಲಿ ಬಣ್ಣಗಳ ಮೂಲಕ ನೆಲದ ಮೇಲೆ ಮೂಡಿಬಂದವು.

ನAತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾಡಳಿತದ ವತಿಯಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಜಿಪಂ ಸಹಾಯಕ ನಿರ್ದೇಶಕ ಬಸವರಾಜ ಹಿರೇಮಠ ಸೇರಿದಂತೆ ಎನ್‌ಎಲ್‌ಆರ್‌ಎಂ ಯೋಜನೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸ್ವಸಹಾಯ ಸಂಘಗಳ ಗುಂಪಿನ ಮಹಿಳಾ ಸದಸ್ಯರು ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ತಾವು ಬಿಡಿಸಿದ ಆಕರ್ಷಕ ರಂಗೋಲಿಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಜಾಗೃತಿ ಅಭಿಯಾನಕ್ಕೆ ಸಾಕ್ಷಿಯಾದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada