Dailyhunt Logo
  • Light mode
    Follow system
    Dark mode
    • Play Story
    • App Story
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಸರಿಪಡಿಸಲು ಬಿಜೆಪಿ ಧರಣಿ: ಸಹಾಯವಾಣಿ ಕೇಂದ್ರ ಆರಂಭಕ್ಕೆ ಆಗ್ರಹ

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಸರಿಪಡಿಸಲು ಬಿಜೆಪಿ ಧರಣಿ: ಸಹಾಯವಾಣಿ ಕೇಂದ್ರ ಆರಂಭಕ್ಕೆ ಆಗ್ರಹ

Hindusthan Samachar 3 months ago

ವಿಜಯಪುರ , 07 ಜುಲೈ (ಹಿ.ಸ.)

ಆಯಂಕರ್ : ವಿಜಯಪುರ ಮಹಾನಗರದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ಕಂಡುಬಂದಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಬೇಕು, ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.

ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‌ಐಆರ್ ಒಂದು ಮಹತ್ವದ ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಪರಿಷ್ಕರಿಸುವ ಉದ್ದೇಶ ಹೊಂದಿದೆ. ಆದರೆ ಕೆಲವು ವ್ಯಕ್ತಿಗಳು ಮತ್ತು ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯದಿಂದ ಈ ಪ್ರಕ್ರಿಯೆಯ ಮೂಲ ಆಶಯವೇ ಹಾಳಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಜಯಪುರ ನಗರದಲ್ಲಿ ಎಸ್‌ಐಆರ್ ಕಾರ್ಯ ಅತ್ಯಂತ ಅವ್ಯವಸ್ಥೆಯಿಂದ ನಡೆಯುತ್ತಿದ್ದು, ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಬೇಕಾದ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಬಹುತೇಕ ಕಡೆಗಳಲ್ಲಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಅವರು ಆರೋಪಿಸಿದರು. ದೇವಸ್ಥಾನ, ಮಸೀದಿ, ಶಾಲೆ ಸೇರಿದಂತೆ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಅರ್ಜಿಗಳನ್ನು ವಿತರಿಸುತ್ತಿದ್ದು, ಇದರಿಂದ ನೈಜ ಮತದಾರರಿಗೆ ಅನಗತ್ಯ ತೊಂದರೆಯಾಗುತ್ತಿದೆ ಎಂದು ದೂರಿದರು.

ಮೇಯರ್ ಎಂ.ಎಸ್. ಕರಡಿ ಮಾತನಾಡಿ, ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಪಾರದರ್ಶಕತೆ ಮತ್ತು ನಿಖರತೆ ಅತ್ಯಂತ ಮುಖ್ಯವಾಗಿದೆ. ಆದರೆ ನಗರದಲ್ಲಿ ನಡೆಯುತ್ತಿರುವ ಮ್ಯಾಪಿಂಗ್ ಕಾರ್ಯವೂ ವೈಜ್ಞಾನಿಕವಾಗಿ ನಡೆದಿಲ್ಲ. ಅನೇಕ ವಾರ್ಡ್ಗಳಲ್ಲಿ ತಪ್ಪು ಮಾಹಿತಿ ದಾಖಲಾಗಿದ್ದು, ಅರ್ಹ ಮತದಾರರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದರು.

ನಗರ ಬಿಜೆಪಿ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಬಿಎಲ್‌ಒಗಳಿಗೆ ಸಮರ್ಪಕ ತರಬೇತಿ ನೀಡದಿರುವುದೇ ಇಂತಹ ಗಂಭೀರ ಲೋಪಗಳಿಗೆ ಪ್ರಮುಖ ಕಾರಣವಾಗಿದೆ.

ಈಗಾಗಲೇ ಸರ್ಕಾರಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಎಸ್‌ಐಆರ್ ಜವಾಬ್ದಾರಿಯನ್ನೂ ನೀಡಿರುವುದರಿಂದ ಸಮಯದ ಅಭಾವ ಎದುರಾಗಿದೆ. ಎಲ್ಲ ದಾಖಲೆಗಳನ್ನು ಹೊತ್ತು ಮನೆ-ಮನೆಗೆ ತೆರಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳೇ ಸಾರ್ವಜನಿಕರಿಗೆ ಹೇಳುತ್ತಿರುವುದು ದುರಂತವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಬಿಎಲ್‌ಒಗಳಿಗೆ ಹೆಚ್ಚುವರಿ ಸಹಾಯಕ ಸಿಬ್ಬಂದಿಯನ್ನು ನೇಮಿಸಿ, ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ನಗರದ ಇಬ್ರಾಹಿಂಪುರ ವಾರ್ಡ್ ಸಂಖ್ಯೆ 21, ಶಾಲೆ ಸಂಖ್ಯೆ 06, ಆಲಅಮೀನ್ ಪ್ರದೇಶ ಸೇರಿದಂತೆ 9, 11, 14, 31 ಹಾಗೂ 33ನೇ ವಾರ್ಡ್ಗಳಲ್ಲಿ ಎಸ್‌ಐಆರ್ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರ ಪರಿಣಾಮವಾಗಿ ಸಾವಿರಾರು ಮತದಾರರು ಅರ್ಜಿ ಸಲ್ಲಿಕೆ ಮತ್ತು ದಾಖಲೆ ಪರಿಶೀಲನೆಗೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ವಿಜಯಪುರ ನಗರದ ಪ್ರಮುಖ ಸ್ಥಳಗಳಲ್ಲಿ ತಕ್ಷಣವೇ ಶಾಶ್ವತ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಿ, ಮತದಾರರಿಗೆ ಅಗತ್ಯ ಮಾಹಿತಿ, ಅರ್ಜಿ ಸಲ್ಲಿಕೆ ಹಾಗೂ ದಾಖಲೆ ಪರಿಶೀಲನೆಗೆ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಜೊತೆಗೆ ಬಿಎಲ್‌ಒಗಳು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಕಾರ್ಯನಿರ್ವಹಿಸುವಂತೆ ಚುನಾವಣಾ ಅಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಲಾಯಿತು.

ಧರಣಿಯಲ್ಲಿ ಉಪ ಮೇಯರ್ ಸುಮಿತ್ರಾ ಜಾಧವ, ಡಾ. ಸುರೇಶ ಬಿರಾದಾರ, ಗೋಪಾಲ ಘಟಕಾಂಬಳೆ, ಉಮೇಶ್ ಕಾರಜೋಳ, ಭೀಮಾಶಂಕರ ಹದನೂರ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ್, ಶಿವರುದ್ರ ಬಾಗಲಕೋಟ, ರಾಹುಲ ಜಾಧವ, ರಾಜಶೇಖರ ಮಗಿಮಠ, ಸುನೀತಾ ಒಡೆಯರ, ಬಸವರಾಜ ಬೈಚಬಾಳ, ಹರ್ಷಗೌಡ ವಿಜಯ್ ಜೋಶಿ ಪಾಟೀಲ, ಕೃಷ್ಣ ಗುನ್ನಾಳಕರ, ಶ್ರೀಕಾಂತ ಶಿಂಧೆ, ರಾಜೇಶ ತಾವಸೆ, ವಿನಾಯಕ ದಹಿಂಡಿ, ರವೀಂದ್ರ ಲೋಣಿ, ಮಹೇಶ ಒಡೆಯರ, ಪಾಪುಸಿಂಗ್ ರಜಪೂತ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada