ಗದಗ, 07 ಜುಲೈ (ಹಿ.ಸ.)
ಆಯಂಕರ್:- ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಹಾಗೂ ಪರಿಶಿಷ್ಟ ವರ್ಗದ ಗಿರಿಜನ ಉಪಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಉದ್ದೇಶಿತ ಫಲಾನುಭವಿಗಳ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡುವ ಮೂಲಕ ಸರ್ಕಾರದ ಯೋಜನೆಗಳ ಉದ್ದೇಶ ಈಡೇರಿಸಬೇಕು ಎಂದು ತಾಲೂಕು ಪಂಚಾಯತ್ ನರಗುಂದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಮತ್ತು ಪರಿಶಿಷ್ಟ ವರ್ಗದ ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಮಿತಿ ಅಧ್ಯಕ್ಷ ಶ್ರೀಧರ್ ಚಿನಗುಂಡಿ ಹೇಳಿದರು.
ತಾಲೂಕು ಪಂಚಾಯತ್ ಕಚೇರಿ ಸಭಾಭವನದಲ್ಲಿ 2026-27ನೇ ಸಾಲಿನ ಜೂನ್-2026 ತಿಂಗಳ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಹಾಗೂ ಪರಿಶಿಷ್ಟ ವರ್ಗದ ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಇಲಾಖೆಗಳಿಗೆ ಮೀಸಲಿಡುವ ಶೇ.25ರ ಅನುದಾನದ ವೆಚ್ಚ ಹಾಗೂ ಪ್ರಗತಿ ಕುರಿತು ಇಲಾಖಾವಾರು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಉದ್ದೇಶಿತ ಫಲಾನುಭವಿಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಯಾವುದೇ ರೀತಿಯ ದುರ್ಬಳಕೆಯಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾವಹಿಸಬೇಕು. ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿದಾಗ ಮಾತ್ರ ಸರ್ಕಾರದ ಯೋಜನೆಗಳ ನಿಜವಾದ ಉದ್ದೇಶ ಸಾರ್ಥಕವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸುಭಾಸ ಕುದಾನಪುರ ಮಾತನಾಡಿ, ಯೋಜನೆಯಡಿ ಲಭ್ಯವಾಗುವ ಶೇ.25ರ ಅನುದಾನವನ್ನು ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ. ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ, ಸುರಕ್ಷತಾ ಸಾಮಗ್ರಿಗಳ ಖರೀದಿ ಹಾಗೂ ಅವರ ಮಕ್ಕಳ ಶೈಕ್ಷಣಿಕ ವೆಚ್ಚಕ್ಕೆ ಅನುದಾನವನ್ನು ವಿನಿಯೋಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾತನಾಡಿ, ಯೋಜನೆಯಡಿ ದೊರೆಯುವ ಅನುದಾನವನ್ನು ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಹಾಗೂ ಅವಶ್ಯಕ ಸಾಮಗ್ರಿಗಳ ಖರೀದಿಗೆ ಬಳಸಲಾಗುತ್ತಿದೆ. ಅನುದಾನದ ಸದ್ಬಳಕೆಗೆ ಇಲಾಖೆಯಿಂದ ನಿರಂತರ ನಿಗಾವಹಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳು, ಸಹಕಾರ ಇಲಾಖೆ ಅಧಿಕಾರಿಗಳು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP

