Dailyhunt Logo
  • Light mode
    Follow system
    Dark mode
    • Play Story
    • App Story
ಫೇಸ್ಬುಕ್ ನಕಲಿ ಹೂಡಿಕೆ ಜಾಹೀರಾತು ನಂಬಿದ ವೃದ್ಧ ಉದ್ಯಮಿಗೆ ₹76.97 ಲಕ್ಷ ವಂಚನೆ

ಫೇಸ್ಬುಕ್ ನಕಲಿ ಹೂಡಿಕೆ ಜಾಹೀರಾತು ನಂಬಿದ ವೃದ್ಧ ಉದ್ಯಮಿಗೆ ₹76.97 ಲಕ್ಷ ವಂಚನೆ

ಬಾಗಲಕೋಟೆ, 05 ಆಗಸ್ಟ್ (ಹಿ.ಸ.)

ಯಂಕರ್ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ನಕಲಿ ಹೂಡಿಕೆ ಜಾಹೀರಾತುಗಳನ್ನು ನಂಬಿ ವಯೋವೃದ್ಧ ಉದ್ಯಮಿಯೊಬ್ಬರು ಬರೋಬ್ಬರಿ ₹76,96,974 ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಬಾಗಲಕೋಟೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುನಗುಂದ ತಾಲೂಕಿನ ಕಮತಗಿ ಗ್ರಾಮದ ವಯೋವೃದ್ಧ ಉದ್ಯಮಿಯೇ ವಂಚನೆಗೆ ಒಳಗಾದವರು. ಫೇಸ್ಬುಕ್ನಲ್ಲಿ ಕಾಣಿಸಿಕೊಂಡಿದ್ದ ಕ್ವಾಂಟ್ ಪ್ಲಸ್ ಲಂಡನ್ ಎಂಬ ಹೆಸರಿನ ಹೂಡಿಕೆ ಜಾಹೀರಾತನ್ನು ನಂಬಿದ ಅವರು, ಕ್ರೂಡ್ ಆಯಿಲ್ ಹಾಗೂ ಗೋಲ್ಡ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂಬ ಭರವಸೆಗೆ ಮಾರು ಹೋಗಿದ್ದಾರೆ.

ವಂಚಕರು ಮೊದಲು ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಲಾಭ ದೊರೆಯುತ್ತದೆ ಎಂದು ವಿಶ್ವಾಸ ಮೂಡಿಸಿದ್ದರು. ಅದರಂತೆ 2025ರ ಆಗಸ್ಟ್ 14ರಂದು ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹23,76,184 ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಳಿಕ ಹಣವನ್ನು ಕ್ರೂಡ್ ಆಯಿಲ್ ಹಾಗೂ ಚಿನ್ನದ ವಹಿವಾಟಿನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ನಂಬಿಸಿದ್ದಾರೆ.

ಕೆಲ ದಿನಗಳ ನಂತರ ಮತ್ತೆ ಸಂಪರ್ಕಿಸಿದ ಆರೋಪಿಗಳು, ಹೂಡಿಕೆಗೆ ₹74,95,066 ಲಾಭಾಂಶ ಬಂದಿದೆ ಎಂದು ಹೇಳಿ, ಆ ಹಣವನ್ನು ಬಿಡುಗಡೆ ಮಾಡಲು ಭಾರತೀಯ ಟ್ರೇಡಿಂಗ್ ಲೈಸೆನ್ಸ್, ಲಂಡನ್ ಟ್ರೇಡಿಂಗ್ ಲೈಸೆನ್ಸ್ ನವೀಕರಣ, ಜಿಎಸ್ಟಿ ಹಾಗೂ ಇತರೆ ಶುಲ್ಕಗಳನ್ನು ಪಾವತಿಸಬೇಕೆಂದು ನೆಪ ಹೇಳಿದ್ದಾರೆ. ಈ ಮಾತನ್ನು ನಂಬಿದ ಉದ್ಯಮಿ 2025ರ ಸೆಪ್ಟೆಂಬರ್ 25ರಿಂದ ಡಿಸೆಂಬರ್ 5ರವರೆಗೆ ವಿವಿಧ ಹಂತಗಳಲ್ಲಿ ಮತ್ತಷ್ಟು ₹53,20,790 ಅನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.

ಹೀಗೆ ಒಟ್ಟು ₹76,96,974 ಪಡೆದುಕೊಂಡ ಬಳಿಕ ವಂಚಕರು ಯಾವುದೇ ಹಣವನ್ನು ಹಿಂದಿರುಗಿಸದೆ ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ತಾವು ವಂಚನೆಗೆ ಒಳಗಾಗಿರುವುದು ಅರಿತ ವಯೋವೃದ್ಧರು ಬಾಗಲಕೋಟೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಣ ವರ್ಗಾವಣೆಗೊಂಡಿರುವ ಬ್ಯಾಂಕ್ ಖಾತೆಗಳು, ಮೊಬೈಲ್ ಸಂಖ್ಯೆಗಳು ಹಾಗೂ ಆನ್ಲೈನ್ ವ್ಯವಹಾರಗಳ ಮಾಹಿತಿಯನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಸೈಬರ್ ಪೊಲೀಸರ ಎಚ್ಚರಿಕೆ:

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡುವ ಹೂಡಿಕೆ ಜಾಹೀರಾತುಗಳನ್ನು ನಂಬಬಾರದು. ಯಾವುದೇ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಅದರ ಅಧಿಕೃತತೆ ಪರಿಶೀಲಿಸಬೇಕು. ಅಪರಿಚಿತರ ಸೂಚನೆಯಂತೆ ಹಣ ವರ್ಗಾವಣೆ ಮಾಡಬಾರದು. ಅನುಮಾನಾಸ್ಪದ ಕರೆ, ಸಂದೇಶ ಅಥವಾ ಹೂಡಿಕೆ ಪ್ರಸ್ತಾಪಗಳು ಬಂದರೆ ತಕ್ಷಣ ಸೈಬರ್ ಸಹಾಯವಾಣಿ 1930 ಅಥವಾ ಸಮೀಪದ ಸೈಬರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada