Dailyhunt Logo
  • Light mode
    Follow system
    Dark mode
    • Play Story
    • App Story
ಗದಗ ಜಿಲ್ಲೆಯಲ್ಲಿ ಭರದಿಂದ ಸಾಗಿದ ಎಸ್‌ಐಆರ್ ಪ್ರಕ್ರಿಯೆ

ಗದಗ ಜಿಲ್ಲೆಯಲ್ಲಿ ಭರದಿಂದ ಸಾಗಿದ ಎಸ್‌ಐಆರ್ ಪ್ರಕ್ರಿಯೆ

ಗದಗ, 07 ಜುಲೈ (ಹಿ.ಸ.)

ಯಂಕರ್:- ಗದಗ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್-2026) ಕಾರ್ಯ ಚುರುಕುಗೊಂಡಿದ್ದು, ಜಿಲ್ಲೆಯಾದ್ಯಂತ ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ.) ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ಯುಮರೇಷನ್ ಫಾರ್ಮಗಳನ್ನು ವಿತರಿಸುತ್ತಿದ್ದಾರೆ.

ಮತದಾರರ ಪಟ್ಟಿಯನ್ನು ಹೆಚ್ಚು ನಿಖರ, ಸಮಗ್ರ ಹಾಗೂ ದೋಷರಹಿತವಾಗಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಈ ವಿಶೇಷ ಅಭಿಯಾನ ನಡೆಸಲಾಗುತ್ತಿದೆ.

ಜಿಲ್ಲಾಡಳಿತದ ಪ್ರಕಟಣೆ ಪ್ರಕಾರ, ಗದಗ ಜಿಲ್ಲೆಯಲ್ಲಿ ಒಟ್ಟು 9,02,947 ಮತದಾರರು ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿದ್ದು, ಇವರಿಗಾಗಿ ಜಿಲ್ಲೆಯಾದ್ಯಂತ 967 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿರುವ ಬಿ.ಎಲ್.ಓ.ಗಳು ಮನೆ ಮನೆಗೆ ತೆರಳಿ ಮತದಾರರಿಗೆ ಎನ್ಯುಮರೇಷನ್ ಫಾರ್ಮಗಳನ್ನು ವಿತರಿಸುವ ಜೊತೆಗೆ ಅಗತ್ಯ ಮಾಹಿತಿಯನ್ನು ನೀಡುತ್ತಿದ್ದಾರೆ.

ಈವರೆಗೆ ಜಿಲ್ಲೆಯಾದ್ಯಂತ 8,46,673 ಎನ್ಯುಮರೇಷನ್ ಫಾರ್ಮಗಳನ್ನು ಮತದಾರರಿಗೆ ವಿತರಿಸಲಾಗಿದ್ದು, ಇದು ಅಭಿಯಾನದ ಉತ್ತಮ ಪ್ರಗತಿಯನ್ನು ಸೂಚಿಸುತ್ತದೆ. ವಿತರಿಸಲಾದ ಫಾರ್ಮಗಳನ್ನು ಮತದಾರರು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಬಿ.ಎಲ್.ಓ.ಗಳಿಗೆ ಸಲ್ಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸ್ವೀಕರಿಸಲಾದ ಅರ್ಜಿಗಳ ಡಿಜಿಟಲೀಕರಣ ಕಾರ್ಯವೂ ಸಮಾನಾಂತರವಾಗಿ ನಡೆಯುತ್ತಿದ್ದು, ಇದುವರೆಗೆ 36,979 ಎನ್ಯುಮರೇಷನ್ ಫಾರ್ಮಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಅರ್ಜಿಗಳ ಪರಿಶೀಲನೆ ಮತ್ತು ಆನ್ಲೈನ್ ದಾಖಲೀಕರಣ ಪ್ರಕ್ರಿಯೆಯನ್ನು ಅಧಿಕಾರಿಗಳು ನಿರಂತರವಾಗಿ ಕೈಗೊಳ್ಳುತ್ತಿದ್ದಾರೆ.

ಬಿ.ಎಲ್.ಓ.ಗಳು ಜುಲೈ 29ರವರೆಗೆ ಮನೆ ಮನೆಗೆ ಭೇಟಿ ನೀಡಿ ಫಾರ್ಮಗಳ ವಿತರಣೆ ಹಾಗೂ ಸಂಗ್ರಹ ಕಾರ್ಯವನ್ನು ಮುಂದುವರಿಸಲಿದ್ದಾರೆ. ಈ ಅವಧಿಯಲ್ಲಿ ಎಲ್ಲ ಮತದಾರರು ತಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ಪರಿಶೀಲಿಸಿ, ಅಗತ್ಯ ದಾಖಲೆಗಳೊಂದಿಗೆ ಎನ್ಯುಮರೇಷನ್ ಫಾರ್ಮಗಳನ್ನು ಸಲ್ಲಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ವಯಸ್ಸು ಸೇರಿದಂತೆ ಯಾವುದೇ ಮಾಹಿತಿಯಲ್ಲಿ ವ್ಯತ್ಯಾಸವಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಈ ವಿಶೇಷ ಸಮಗ್ರ ಪರಿಷ್ಕರಣೆ ಉತ್ತಮ ಅವಕಾಶವಾಗಿದೆ. ಹೊಸದಾಗಿ ಅರ್ಹತೆ ಪಡೆದ ಮತದಾರರು, ವಿಳಾಸ ಬದಲಾಯಿಸಿರುವವರು ಹಾಗೂ ಮಾಹಿತಿ ತಿದ್ದುಪಡಿ ಅಗತ್ಯವಿರುವವರು ಈ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿಯ ನಿಖರತೆ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು ಎಸ್‌ಐಆರ್ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಡಳಿತ ಪ್ರಕಟಣೆಯಲ್ಲಿ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada