Dailyhunt Logo
  • Light mode
    Follow system
    Dark mode
    • Play Story
    • App Story
ಗ್ರಾಮೀಣ ಕ್ರೀಡೆಗಳ ಉಳಿವಿಗೆ ಕುಸ್ತಿ ಕಲೆಗೆ ಪ್ರೋತ್ಸಾಹ ಅಗತ್ಯ: ಕಲ್ಲಯ್ಯಜ್ಜ

ಗ್ರಾಮೀಣ ಕ್ರೀಡೆಗಳ ಉಳಿವಿಗೆ ಕುಸ್ತಿ ಕಲೆಗೆ ಪ್ರೋತ್ಸಾಹ ಅಗತ್ಯ: ಕಲ್ಲಯ್ಯಜ್ಜ

ಗದಗ, 07 ಜುಲೈ (ಹಿ.ಸ.)

ಯಂಕರ್:- ಗ್ರಾಮೀಣ ಸೊಗಡಿನ ಪ್ರತೀಕವಾಗಿರುವ ಕುಸ್ತಿ ಕಲೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಅತ್ಯುತ್ತಮ ಕ್ರೀಡೆಯಾಗಿದ್ದು, ಈ ಪರಂಪರೆಯನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಗದಗದ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದ ಸಮೀಪದ ಕುಸ್ತಿ ಮೈದಾನದಲ್ಲಿ ಪೂಜ್ಯ ಪಂಚಾಕ್ಷರಿ ಗವಾಯಿಗಳವರ ಹಾಗೂ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಗದಗ-ಬೆಟಗೇರಿ ಜನರಲ್ ವರ್ಕರ್ಸ್ ಹಮಾಲರು ಹಾಗೂ ಚಕ್ಕಡಿಯವರ ಸಮಿತಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಗೆ ಇಬ್ಬರು ಕುಸ್ತಿಪಟುಗಳನ್ನು ಕಣಕ್ಕಿಳಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕುಸ್ತಿ ಕೇವಲ ಒಂದು ಕ್ರೀಡೆಯಲ್ಲ. ಅದು ಶಿಸ್ತು, ಧೈರ್ಯ, ಆತ್ಮವಿಶ್ವಾಸ, ದೈಹಿಕ ಸದೃಢತೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಮಹತ್ವದ ಸಂಸ್ಕೃತಿಯಾಗಿದೆ. ಇಂತಹ ಗ್ರಾಮೀಣ ಕ್ರೀಡೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸುವುದರಿಂದ ಯುವಜನರಲ್ಲಿ ವ್ಯಾಯಾಮ, ಆರೋಗ್ಯ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡುತ್ತದೆ. ಆಧುನಿಕ ಜೀವನಶೈಲಿಯಿಂದ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಇಂತಹ ಪಂದ್ಯಾವಳಿಗಳು ಹೊಸ ಚೈತನ್ಯ ನೀಡುತ್ತಿವೆ ಎಂದು ಹೇಳಿದರು.

ಸಮಿತಿಯ ಅಧ್ಯಕ್ಷ ಆದಪ್ಪ ಮಾರೆಪ್ಪನವರ ಮಾತನಾಡಿ, ಹಲವು ವರ್ಷಗಳಿಂದ ನಿರಂತರವಾಗಿ ರಾಷ್ಟ್ರಮಟ್ಟದ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಖ್ಯಾತ ಕುಸ್ತಿಪಟುಗಳು ಆಗಮಿಸಿದ್ದು, ಸಾವಿರಾರು ಕುಸ್ತಿ ಅಭಿಮಾನಿಗಳ ಸಮ್ಮುಖದಲ್ಲಿ ಪಂದ್ಯಗಳು ಅತ್ಯಂತ ರೋಚಕವಾಗಿ ನಡೆಯುತ್ತಿವೆ. ಗ್ರಾಮೀಣ ಕ್ರೀಡೆಗಳ ಬೆಳವಣಿಗೆಗೆ ಸಮಿತಿಯು ಸದಾ ಬದ್ಧವಾಗಿದೆ ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ಅನುಭವಿ ಹಾಗೂ ಹೆಸರಾಂತ ಪೈಲ್ವಾನರು ತಮ್ಮ ಶಕ್ತಿ, ಕೌಶಲ್ಯ ಮತ್ತು ಚಾಣಾಕ್ಷತನವನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಪ್ರತಿಯೊಂದು ಹಣಾಹಣಿಯೂ ಕುತೂಹಲ ಮೂಡಿಸಿದ್ದು, ಪ್ರೇಕ್ಷಕರು ಚಪ್ಪಾಳೆ ತಟ್ಟಿ ಕುಸ್ತಿಪಟುಗಳನ್ನು ಹುರಿದುಂಬಿಸಿದರು. ಹಿರಿಯ ಪೈಲ್ವಾನರು ಹಾಗೂ ಅನುಭವಿ ನಿರ್ಣಾಯಕರ ಮಾರ್ಗದರ್ಶನದಲ್ಲಿ ಪಂದ್ಯಗಳು ಶಿಸ್ತುಬದ್ಧವಾಗಿ ನಡೆದವು.

ಜಾತ್ರೆಯ ಅಂಗವಾಗಿ ಆಯೋಜಿಸಲಾದ ಈ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಲು ಗದಗ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಭಕ್ತರು ಹಾಗೂ ಕುಸ್ತಿ ಅಭಿಮಾನಿಗಳು ಆಗಮಿಸಿದ್ದರು. ರಾತ್ರಿಯವರೆಗೂ ಪಂದ್ಯಗಳು ನಿರಂತರವಾಗಿ ನಡೆದಿದ್ದು, ಅಂತಿಮ ಹಣಾಹಣಿಗಳು ಸಾಕಷ್ಟು ರೋಚಕತೆಯನ್ನು ಸೃಷ್ಟಿಸಿದವು. ಅಂತಿಮ ಫಲಿತಾಂಶಕ್ಕಾಗಿ ಕುಸ್ತಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದರು.

ಪಂದ್ಯಾವಳಿಯ ಯಶಸ್ವಿ ಆಯೋಜನೆಗಾಗಿ ಸಮಿತಿಯ ಅಧ್ಯಕ್ಷ ಆದಪ್ಪ ಮಾರೆಪ್ಪನವರ, ಉಪಾಧ್ಯಕ್ಷ ಮತ್ತುಂಸಾಬ ನಾಗನೂರ, ಕಾರ್ಯದರ್ಶಿ ಇಮಾಮಸಾಬ ರೋಣದ, ಖಜಾಂಚಿ ಶಂಕ್ರಪ್ಪ ಯರಗುಡಿ ಹಾಗೂ ಕರ್ನಾಟಕ ರಾಜ್ಯ ಹಮಾಲರ ಒಕ್ಕೂಟದ ರಾಜ್ಯಾಧ್ಯಕ್ಷ ಅಯ್ಯಪ್ಪ ನಾಯ್ಕರ್ ಮಾರ್ಗದರ್ಶನ ನೀಡಿದರು.

ಇದೇ ಸಂದರ್ಭದಲ್ಲಿ ಮಮ್ಮುಸಾಬ ವಾಲೀಕಾರ, ಇಮಾಮಹುಸೇನ ರೋಣದ, ರಾಜೇಸಾಬ ಕಣವಿ, ಗೋವಿಂದಪ್ಪ ಮುಂಡರಗಿ, ದೇವರಾಜ ಬಿನ್ನಾಳ, ಹುಸೇನಸಾಬ ವಡವಿ, ಬಸವರಾಜ ಸೂಡಿ, ಫಕ್ರುಸಾಬ ಘಟ್ಟದ, ಯಲ್ಲಪ್ಪ ಬೇವಿನಮರದ, ರಾಮಣ್ಣ ವಾಲ್ಮೀಕಿ, ಜಹಾಂಗೀರಸಾಬ ಲಕ್ಷೇಶ್ವರ, ಶ್ರೀಕಾಂತ ಸಿಂಗಾಡಿ, ನಾಗಪ್ಪ ಕೊರ್ಲಹಳ್ಳಿ, ಶೇಖಪ್ಪ ವಾಲ್ಮೀಕಿ, ರವಿ ಚಲವಾದಿ, ಮಾರುತಿ ರಾಯಲದೊಡ್ಡಿ, ಸುಭಾಸ ಶೆಗಣಿ, ರಾಘು ಮುಗಳಿ ಸೇರಿದಂತೆ ಅನೇಕರು ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸಿದರು.

ಜಾತ್ರಾ ಮಹೋತ್ಸವದ ಸಂಭ್ರಮದ ನಡುವೆ ನಡೆದ ರಾಷ್ಟ್ರಮಟ್ಟದ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿ ಗ್ರಾಮೀಣ ಕ್ರೀಡಾ ಸಂಸ್ಕೃತಿಯ ವೈಭವವನ್ನು ಮತ್ತೊಮ್ಮೆ ಅನಾವರಣಗೊಳಿಸಿತು. ಯುವಕರಲ್ಲಿ ಕುಸ್ತಿ ಕಲೆಯ ಬಗ್ಗೆ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಪರಂಪರೆಯ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಅಗತ್ಯವನ್ನು ಈ ಕಾರ್ಯಕ್ರಮ ಮತ್ತೊಮ್ಮೆ ಸಾರಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada