Dailyhunt Logo
  • Light mode
    Follow system
    Dark mode
    • Play Story
    • App Story
ಹಿಂದೂಸ್ತಾನ್ ಸಮಾಚಾರ್ ಅಧ್ಯಕ್ಷರಾಗಿ ಅರವಿಂದ್ ಮರ್ಡಿಕರ್ ಮರು ಆಯ್ಕೆ

ಹಿಂದೂಸ್ತಾನ್ ಸಮಾಚಾರ್ ಅಧ್ಯಕ್ಷರಾಗಿ ಅರವಿಂದ್ ಮರ್ಡಿಕರ್ ಮರು ಆಯ್ಕೆ

ನವದೆಹಲಿ, 07 ಮೇ (ಹಿ.ಸ.):

ಆಯಂಕರ್:

ಹುಭಾಷಾ ಸುದ್ದಿ ಸಂಸ್ಥೆ ಹಿಂದೂಸ್ತಾನ್ ಸಮಾಚಾರ್ ಅಧ್ಯಕ್ಷರಾಗಿ ಅರವಿಂದ್ ಭಾಲಚಂದ್ರ ಮರ್ಡಿಕರ್ ಅವರು ಮತ್ತೊಮ್ಮೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನವದೆಹಲಿಯಲ್ಲಿ ನಡೆದ ಹಿಂದೂಸ್ತಾನ್ ಸಮಾಚಾರ್ ಸಹಕಾರಿ ಸಂಘ (ಲಿಮಿಟೆಡ್) ವಿಶೇಷ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಸತತ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮುಂದಿನ ಮೂರು ವರ್ಷಗಳ ಕಾಲ ಸಂಸ್ಥೆಯ ನೇತೃತ್ವ ವಹಿಸಲಿದ್ದಾರೆ.

ನವದೆಹಲಿಯ ಐಜಿಎನ್ಸಿಎ (ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್) ಉಮಾಂಗ್ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಭೆಯು ಚುನಾವಣಾ ಸಭೆಯೂ ಆಗಿತ್ತು. ಸಭೆಯಲ್ಲಿ ಹೊಸ ನಿರ್ದೇಶಕರ ಮಂಡಳಿಯ ರಚನೆ ನಡೆಯುವುದರ ಜೊತೆಗೆ ಅಧ್ಯಕ್ಷರ ಆಯ್ಕೆಯೂ ನೆರವೇರಿತು.

ನಾಗ್ಪುರ ಮೂಲದ ಅರವಿಂದ್ ಭಾಲಚಂದ್ರ ಮರ್ಡಿಕರ್ ಅವರು 2023ರಲ್ಲಿ ಮೊದಲ ಬಾರಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಸತತ ಎರಡನೇ ಬಾರಿಗೆ ಅವರೇ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ.

ಈ ಸಭೆಯಲ್ಲಿ ಹಿರಿಯ ಪತ್ರಕರ್ತ, ಪದ್ಮವಿಭೂಷಣ ರಾಮ್ ಬಹದ್ದೂರ್ ರೈ ಹಾಗೂ ಖ್ಯಾತ ಸಮಾಜಸೇವಕ ರವೀಂದ್ರ ಮಣಿಲಾಲ್ ಸಿಂಘ್ವಿ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನಿರ್ದೇಶಕರ ಮಂಡಳಿಯ ಸದಸ್ಯರಾಗಿ ಮರು ಆಯ್ಕೆ ಮಾಡಲಾಯಿತು.

ಇದೇ ವೇಳೆ ಹಿರಿಯ ಪತ್ರಕರ್ತ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಅಶೋಕ್ ಟಂಡನ್ ನಿರ್ದೇಶಕರ ಮಂಡಳಿಯ ಹೊಸ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ.

ಈ ಹಿಂದೆ ವಿಶೇಷ ಆಹ್ವಾನಿತರಾಗಿ ಸೇರಿಸಲಾಗಿದ್ದ ಪರೇಶ್ಕಾಂತ್ ಪ್ರೇಮ್ ಮನೋಹರ್ ಮಾಂಗ್ಲಿಕ್ (ಮುಂಬೈ) ಹಾಗೂ ಮಂಗಲ್ ಪ್ರತಾಪ್ ಪಾಂಡೆ (ರಾಂಚಿ) ಅವರನ್ನು ನಿರ್ದೇಶಕರ ಮಂಡಳಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ ಇಂದೋರ್ನ ಖ್ಯಾತ ಉದ್ಯಮಿ ಕಮಲ್ ಕಾಂತ್ ವಶಿಷ್ಠರನ್ನು ಹೊಸ ಸದಸ್ಯರಾಗಿ ಸೇರಿಸಲಾಗಿದೆ.

ವಕೀಲ ಹಾಗೂ ಚುನಾವಣಾಧಿಕಾರಿ ಅಜಿತ್ ಕುಮಾರ್ ಅವರು ಸಂಘದ ನಿಯಮಾವಳಿಗಳ ಪ್ರಕಾರ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಅಧ್ಯಕ್ಷರಾಗಿ ಮರು ಆಯ್ಕೆಯಾದ ಬಳಿಕ ನಿರ್ದೇಶಕರ ಮಂಡಳಿಯ ಸದಸ್ಯರು ಅರವಿಂದ್ ಮರ್ಡಿಕರ್ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮ್ ಬಹದ್ದೂರ್ ರೈ, ಪ್ರಸ್ತುತ ಅವಧಿಯಷ್ಟೇ ಅಲ್ಲದೆ ಹಿಂದಿನ ಅಧಿಕಾರಾವಧಿಯಲ್ಲಿಯೂ ಮರ್ಡಿಕರ್ ಅವರು ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ಶ್ಲಾಘಿಸಿದರು. ಪ್ರತಿಯೊಂದು ಸವಾಲಿನ ಸಂದರ್ಭದಲ್ಲಿಯೂ ಅವರು ಸಂಸ್ಥೆಯನ್ನು ಮುಂಚೂಣಿಯಲ್ಲಿ ಇಟ್ಟಿದ್ದಾರೆ ಎಂದು ಹೇಳಿದರು.

ರವೀಂದ್ರ ಸಿಂಘ್ವಿ ಮಾತನಾಡಿ, "ಅಚಲ ಶಕ್ತಿ ಮತ್ತು ದೃಢ ನಾಯಕತ್ವ ಹೊಂದಿರುವ ಮರ್ಡಿಕರ್ ಅವರ ಕೈಯಲ್ಲಿ ಸಂಸ್ಥೆಯ ಭವಿಷ್ಯ ಸುರಕ್ಷಿತವಾಗಿದೆ. ಸಂಸ್ಥೆ ನಿರಂತರವಾಗಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ," ಎಂದು ಹೇಳಿದರು.

ಅರವಿಂದ್ ಮರ್ಡಿಕರ್ ಅವರ ಅಧಿಕಾರಾವಧಿಯಲ್ಲಿ ಸಂಸ್ಥೆಯ ಆರ್ಥಿಕ ಶಕ್ತಿ ವೃದ್ಧಿಯಾಗಿರುವುದು, ವಿವಿಧ ಕಾರ್ಯಕ್ರಮಗಳ ಮೂಲಕ ಸಂಸ್ಥೆಯ ವಿಸ್ತರಣೆ ಕಂಡಿರುವುದು ಹಾಗೂ ವಿಶ್ವಾಸಾರ್ಹತೆ ಮತ್ತು ಖ್ಯಾತಿ ಹೆಚ್ಚಿರುವುದಕ್ಕಾಗಿ ನಿರ್ದೇಶಕರ ಮಂಡಳಿ ಅವರನ್ನು ವಿಶೇಷವಾಗಿ ಶ್ಲಾಘಿಸಿತು.

ಧನ್ಯವಾದ ಅರ್ಪಿಸಿದ ಅರವಿಂದ್ ಮರ್ಡಿಕರ್, "ಈ ಸಾಧನೆ ನನ್ನೊಬ್ಬರದ್ದಲ್ಲ. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಹೋದ್ಯೋಗಿಗಳ ಪರಿಶ್ರಮ, ಸಮರ್ಪಣೆ ಮತ್ತು ತಂಡದ ಒಗ್ಗಟ್ಟಿನ ಫಲ ಇದಾಗಿದೆ," ಎಂದು ಹೇಳಿದರು.

2016ರಲ್ಲಿ ಆರ್.ಕೆ. ಸಿನ್ಹಾ ಅವರ ನೇತೃತ್ವದಲ್ಲಿ ಹಿಂದೂಸ್ತಾನ್ ಸಮಾಚಾರ್ ಸಂಸ್ಥೆಯ ನಿರ್ವಹಣೆಯಲ್ಲಿ ಬದಲಾವಣೆ ನಡೆದಾಗ ಅರವಿಂದ್ ಮರ್ಡಿಕರ್ ನಿರ್ದೇಶಕರ ಮಂಡಳಿಗೆ ಸದಸ್ಯರಾಗಿ ಸೇರಿದ್ದರು. ನಂತರ ಮೇ 2018ರಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಬಳಿಕ ಏಪ್ರಿಲ್ 2022ರಲ್ಲಿ ಆರ್.ಕೆ. ಸಿನ್ಹಾ ರಾಜೀನಾಮೆ ನೀಡಿದ ನಂತರ ಉಳಿದ ಅವಧಿಗೆ ಅವರನ್ನು ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಯಿತು. ನಂತರ ಮೇ 2023ರಲ್ಲಿ ಮೊದಲ ಬಾರಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು, ಇದೀಗ ಮತ್ತೊಮ್ಮೆ ಅದೇ ಸ್ಥಾನಕ್ಕೆ ಮರು ಆಯ್ಕೆಯಾಗಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada