Dailyhunt Logo
  • Light mode
    Follow system
    Dark mode
    • Play Story
    • App Story
ಜಾನುವಾರುಗಳ ತಂಗುದಾಣವಾದ ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಬಸ್ ನಿಲ್ದಾಣ

ಜಾನುವಾರುಗಳ ತಂಗುದಾಣವಾದ ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಬಸ್ ನಿಲ್ದಾಣ

ಬಾಗಲಕೋಟೆ, 07 ಜುಲೈ (ಹಿ.ಸ.)

ಯಂಕರ್ : ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಎದುರಿನ ಬಸ್ ಗಾಗಿ ಕಾಯುವ ತಂಗುದಾಣವು ತನ್ನ ಮೂಲ ಉದ್ದೇಶವನ್ನು ಕಳೆದುಕೊಂಡು ಜಾನುವಾರುಗಳ ಆಶ್ರಯ ತಾಣವಾಗಿ ಮಾರ್ಪಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾ ಆಸ್ಪತ್ರೆ ಪ್ರತಿನಿತ್ಯ ಸಾವಿರಾರು ರೋಗಿಗಳು, ಅವರ ಸಂಬಂಧಿಕರು ಹಾಗೂ ಗ್ರಾಮೀಣ ಭಾಗಗಳಿಂದ ಆಗಮಿಸುವ ಪ್ರಯಾಣಿಕರಿಂದ ಕಿಕ್ಕಿರಿದು ಇರುತ್ತದೆ. ಬಸ್ ಗಾಗಿ ಕಾಯಲು ನಿರ್ಮಿಸಿರುವ ತಂಗುದಾಣದಲ್ಲಿ ಪ್ರಯಾಣಿಕರು ನಿಲ್ಲಬೇಕಾದರೆ, ಅಲ್ಲಿ ಜಾನುವಾರುಗಳು ಮಲಗಿರುವ ದೃಶ್ಯ ಸಾಮಾನ್ಯವಾಗಿದೆ. ಪರಿಣಾಮವಾಗಿ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ರೋಗಿಗಳು ಬಿಸಿಲು ಮತ್ತು ಮಳೆಯಲ್ಲಿ ರಸ್ತೆ ಬದಿಯಲ್ಲೇ ನಿಂತು ಬಸ್ ಗಾಗಿ ಕಾಯುವ ದುಸ್ಥಿತಿ ಎದುರಿಸುತ್ತಿದ್ದಾರೆ.

ತಂಗುದಾಣದಲ್ಲಿ ದನಗಳು ಆಶ್ರಯ ಪಡೆಯುವುದರಿಂದ ಎಲ್ಲೆಂದರಲ್ಲಿ ಗೋಮಯ, ಮೂತ್ರ ಹಾಗೂ ದುರ್ವಾಸನೆ ಆವರಿಸಿಕೊಂಡಿದ್ದು, ಸ್ವಚ್ಛತೆ ಸಂಪೂರ್ಣ ಹಾಳಾಗಿದೆ. ಜಿಲ್ಲಾ ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶದ ಬಳಿ ಈ ಪರಿಸ್ಥಿತಿ ಆರೋಗ್ಯದ ದೃಷ್ಟಿಯಿಂದಲೂ ಆತಂಕಕಾರಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರಸಭೆ ಹಾಗೂ ಸಂಬಂಧಿಸಿದ ಇಲಾಖೆಗಳು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ತಂಗುದಾಣವನ್ನು ಸಂರಕ್ಷಿಸುವಲ್ಲಿ ವಿಫಲವಾಗಿವೆ ಎಂಬ ಆರೋಪ ಕೇಳಿಬರುತ್ತಿದೆ. ಬೀದಿ ದನಗಳ ಹಾವಳಿಯನ್ನು ನಿಯಂತ್ರಿಸಿ, ತಂಗುದಾಣವನ್ನು ಸ್ವಚ್ಛಗೊಳಿಸಿ, ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಗಮ ವಾತಾವರಣ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯಂತಹ ಪ್ರಮುಖ ಸಾರ್ವಜನಿಕ ಸ್ಥಳದಲ್ಲಿ ಬಸ್ ತಂಗುದಾಣವೇ ಜಾನುವಾರುಗಳ ತಂಗುದಾಣ ಆಗಿ ಮಾರ್ಪಟ್ಟಿರುವುದು ನಗರ ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಎಂದು ಸಾರ್ವಜನಿಕರು ಟೀಕಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada