ಬೆಂಗಳೂರು, 25 ಮೇ (ಹಿ.ಸ.) :
ಆಯಂಕರ್ : ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿಚಾರವಾಗಿ ಕಾಂಗ್ರೆಸ್ ಹಿರಿಯ ನಾಯಕ .ಕೆ. ಹರಿಪ್ರಸಾದ್
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, "ಪೆಟ್ರೋಲ್ಗೆ ₹2.61 ಹಾಗೂ ಡೀಸೆಲ್ಗೆ ₹2.71 ಹೆಚ್ಚಳ ಮಾಡಿರುವುದು ಮತ್ತೊಂದು ಹಗಲು ದರೋಡೆ.
ಸಾಮಾನ್ಯ ಜನರನ್ನು ಲೂಟಿ ಮಾಡುವುದೇ ಬಿಜೆಪಿ ಸರ್ಕಾರದ ಏಕೈಕ ನೀತಿಯಾಗಿದೆ" ಎಂದು ಆರೋಪಿಸಿದ್ದಾರೆ.
"ಈ ನಿರ್ದಯ ಆಡಳಿತವು ಪ್ರತಿಯೊಂದು ಕುಟುಂಬವನ್ನೂ ಅಸಹನೀಯ ಹಣದುಬ್ಬರದ ಸಂಕಷ್ಟಕ್ಕೆ ತಳ್ಳಿದೆ. ಒಂದು ಕಡೆ ಅಭಿವೃದ್ಧಿಯ ಹೆಸರಿನಲ್ಲಿ ಭಾಷಣ ಮಾಡಲಾಗುತ್ತಿದೆಯಾದರೂ, ಮತ್ತೊಂದು ಕಡೆ ಆಹಾರ ಪದಾರ್ಥಗಳಿಂದ ಹಿಡಿದು ಸಾರಿಗೆ ವೆಚ್ಚಗಳವರೆಗೆ ಎಲ್ಲದರ ಬೆಲೆ ಏರಿಕೆಯಾಗುತ್ತಿದೆ" ಎಂದು ಟೀಕಿಸಿದ್ದಾರೆ.
ಬಡವರು, ಮಧ್ಯಮ ವರ್ಗ, ರೈತರು, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳು ಇಂಧನ ದರ ಏರಿಕೆಯಿಂದ ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದ ಅವರು, "ಸರ್ಕಾರಕ್ಕೆ ಮಾನವೀಯತೆ ಉಳಿದಿಲ್ಲ. ಬಿಜೆಪಿ ನಾಯಕರು ಪೊಳ್ಳು ಭಾಷಣಗಳು ಮತ್ತು ನಕಲಿ ರಾಷ್ಟ್ರೀಯತೆಯ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"ಸಾಮಾನ್ಯ ಭಾರತೀಯರ ಮೇಲೆ ಸಂಘಟಿತ ದಾಳಿ ನಡೆಸುವಂತೆಯೇ ಆಡಳಿತ ನಡೆಯುತ್ತಿದೆ. ತಮ್ಮ ರಾಜಕೀಯ ವೈಫಲ್ಯಗಳು ಮತ್ತು ನಾಟಕಗಳಿಗೆ ಹಣಕಾಸು ಒದಗಿಸಲು ನಾಗರಿಕರನ್ನು ಎಟಿಎಂಗಳಂತೆ ಬಳಸಿಕೊಳ್ಳಲಾಗುತ್ತಿದೆ" ಎಂದು ಕಿಡಿಕಾರಿದರು.
"ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ನಾಯಕರು ಮತ ಕೇಳಲು ಮನೆ ಬಾಗಿಲಿಗೆ ಬಂದಾಗ ಜನರು ಈ ದ್ರೋಹವನ್ನು ನೆನಪಿಸಿಕೊಳ್ಳಬೇಕು. ಪ್ರಜಾಸತ್ತಾತ್ಮಕವಾಗಿ ಅವರನ್ನು ತಿರಸ್ಕರಿಸುವ ಸಮಯ ಬಂದಿದೆ" ಎಂದು ಹರಿಪ್ರಸಾದ್ ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.

