Dailyhunt Logo
  • Light mode
    Follow system
    Dark mode
    • Play Story
    • App Story
ಕೆಸರು ಗದ್ದೆಯಾದ ರಸ್ತೆಗಳು: ಪುರಸಭೆ ಅಧಿಕಾರಿಗಳ ವಿರುದ್ಧ ನಿವಾಸಿಗಳ ಆಕ್ರೋಶ

ಕೆಸರು ಗದ್ದೆಯಾದ ರಸ್ತೆಗಳು: ಪುರಸಭೆ ಅಧಿಕಾರಿಗಳ ವಿರುದ್ಧ ನಿವಾಸಿಗಳ ಆಕ್ರೋಶ

ಗದಗ, 07 ಜುಲೈ (ಹಿ.ಸ.)

ಯಂಕರ್:- ಮಳೆಯಾದಾಗಲೆಲ್ಲ ವಾರ್ಡ್ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಡುತ್ತಿರುವುದರಿಂದ ಜನಜೀವನ ದುಸ್ತರವಾಗಿದ್ದು, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿಫಲವಾದ ಪುರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹಲವಾರು ವಾರ್ಡುಗಳಲ್ಲಿ ಸಮರ್ಪಕ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯ ಕೊರತೆಯಿಂದ ಮಳೆ ನೀರು ರಸ್ತೆಗಳಲ್ಲೇ ನಿಂತು ಕೆಸರಿನ ಹೊಂಡಗಳಾಗಿ ಮಾರ್ಪಡುತ್ತಿದೆ. ಇದರಿಂದ ಪಾದಚಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಹಾಗೂ ದ್ವಿಚಕ್ರ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ವಿಶೇಷವಾಗಿ ಹೊಸ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಕಲಾಂ ನಗರ ಹಾಗೂ ಕೌಡೇಶ್ವರ ನಗರ ಪ್ರದೇಶಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸ್ವಲ್ಪ ಮಳೆಯಾದರೂ ರಸ್ತೆ ಸಂಪೂರ್ಣ ಕೆಸರಿನಿಂದ ಆವೃತವಾಗುತ್ತಿದ್ದು, ಜನರು ಮನೆಗಳಿಂದ ಹೊರಬರಲು ಸಹ ಕಷ್ಟಪಡುವಂತಾಗಿದೆ. ವಾಹನಗಳು ಜಾರುವ ಭೀತಿ ಹೆಚ್ಚಿದ್ದು, ಮಕ್ಕಳು ಶಾಲೆಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.

ಕಲಾಂ ನಗರ ವ್ಯಾಪ್ತಿಯ 22ನೇ ವಾರ್ಡಿನ ನಿವಾಸಿಗಳು ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ. ಚುನಾವಣೆ ಸಮಯದಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಲಾಗಿದ್ದರೂ, ಇಂದಿಗೂ ಸಮಸ್ಯೆ ಹಾಗೆಯೇ ಉಳಿದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಗಳಾಗುವುದರಿಂದ ಮನೆಗಳಿಗೆ ಅಗತ್ಯ ವಸ್ತುಗಳನ್ನು ಸಾಗಿಸಲು, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹಾಗೂ ದೈನಂದಿನ ಸಂಚಾರ ನಡೆಸಲು ಸಂಕಷ್ಟ ಎದುರಾಗುತ್ತಿದೆ. ರಾತ್ರಿ ವೇಳೆ ರಸ್ತೆಗಳಲ್ಲಿ ಬೆಳಕಿನ ಕೊರತೆ ಇರುವುದರಿಂದ ಅಪಘಾತ ಸಂಭವಿಸುವ ಭೀತಿಯೂ ಹೆಚ್ಚಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪುರಸಭೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ತಾತ್ಕಾಲಿಕವಾಗಿ ಮೆಟ್ಲಿಂಗ್ ರಸ್ತೆ ನಿರ್ಮಾಣ, ನೀರು ಹರಿಯುವಂತೆ ಚರಂಡಿ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಂತರ ಶಾಶ್ವತ ಸಿಸಿ ರಸ್ತೆ ಹಾಗೂ ಸಮರ್ಪಕ ಒಳಚರಂಡಿ ಕಾಮಗಾರಿಯನ್ನು ಕೈಗೊಂಡು ಸಮಸ್ಯೆಗೆ ಅಂತ್ಯ ಹಾಡಬೇಕು ಎಂದು ವಾರ್ಡ್ ನಿವಾಸಿಗಳು ಒತ್ತಾಯಿಸಿದ್ದಾರೆ.

ಸಮಸ್ಯೆ ಬಗೆಹರಿಯದಿದ್ದರೆ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಕೆಲ ನಿವಾಸಿಗಳು ನೀಡಿದ್ದಾರೆ. ಮಳೆಗಾಲ ಇನ್ನಷ್ಟು ತೀವ್ರವಾಗುವ ಮುನ್ನವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತುರ್ತು ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada