Dailyhunt Logo
  • Light mode
    Follow system
    Dark mode
    • Play Story
    • App Story

ಕೊಪ್ಪಳ: ಕೊಳ್ಳಿನ ಕೆರೆಗೆ ತುರ್ತಾಗಿ ಒಡ್ಡು ನಿರ್ಮಿಸಲು ಗ್ರಾಮಸ್ಥರ ಆಗ್ರಹ

ಕೊಪ್ಪಳ, 07 ಜುಲೈ (ಹಿ.ಸ.)

ಆಯಂಕರ್:

ರಾಜ್ಯದಾದ್ಯಂತ ಭೀಕರ ಬರಗಾಲ ಆವರಿಸಿದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಲಮೂಲಗಳ ರಕ್ಷಣೆಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಕೂಡಲೇ ತಾಲೂಕಿನ ಕೆರೆಹಳ್ಳಿ, ಶಹಪುರ ಮತ್ತು ಅಗಳಕೇರಿ ಮಧ್ಯ ಭಾಗದಲ್ಲಿರುವ ಐತಿಹಾಸಿಕ ಕೊಳ್ಳಿನ ಕೆರೆಯ ಒಡ್ಡು ನಿರ್ಮಿಸಬೇಕೆಂದು ತ್ರಿವಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷಿದೇವಿ ಮತ್ತು ಶ್ರೀ ತೇರಿನ ಹನುಮಪ್ಪ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಕೊಪ್ಪಳ ತಾಲೂಕಿನ ಕೆರೆಹಳ್ಳಿ ಗ್ರಾಮ ಐತಿಹಾಸಿಕವಾಗಿ ಪ್ರಸಿದ್ಧಿಪಡೆದಿದೆ. ಈ ಗ್ರಾಮವೂ ಸೇರಿದಂತೆ ಶಹಪುರ ಮತ್ತು ಅಗಳಕೇರಿ ಗ್ರಾಮಗಳ ರೈತರ ಜೀವನಾಡಿಯಾಗಿರುವ ಕೊಳ್ಳಿನ ಕೆರೆ ಶತಮಾನಗಳಿಂದಲೂ ರೈತರ ಬದುಕಿಗೆ ಆಸರೆ ಆಗಿದೆ.

ಸುಮಾರು 150 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆಯ ಒಡ್ಡು ಶಿಥಿಲಗೊಂಡಿದ್ದು, ಮಳೆಯ ನೀರು ಕೆರೆಯಲ್ಲಿ ಸಂಗ್ರಹವಾಗುತ್ತಿಲ್ಲ. ಇದರಿಂದ ಜಲಮೂಲ ಬತ್ತಿ ಹೋಗಿ ಜನ-ಜಾನುವಾರುಗಳಿಗೆ ತೊಂದರೆ ಆಗುತ್ತಿದೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದಿಂದ ತುರ್ತಾಗಿ ಒಡ್ಡು ನಿರ್ಮಿಸಿಕೊಟ್ಟರೆ ಮುಂದಿನ ದಿನಗಳಲ್ಲಿ ಸುರಿಯುವ ಮಳೆಯಿಂದ ನೀರು ಸಂಗ್ರಹಗೊಂಡು ರೈತರಿಗೆ ಅನುಕೂಲವಾಗಲಿದೆ.

ಈ ಬಾರಿ ಭೀಕರ ಬರಗಾಲ ತಲೆದೋರಿರುವುದರಿಂದ ಕೃಷಿ ಚಟುವಟಿಕೆಗಳನ್ನು ನಡೆಸುವುದು ಕಷ್ಟಸಾಧ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಂದಿಗಾಲಪ್ಪ ಗುಡ್ಡ ಮತ್ತು ತೇರಿನ ಹನುಮಪ್ಪ ಗುಡ್ಡದ ಪರಿಸರದಲ್ಲಿರುವ ವನ್ಯಜೀವಿಗಳಿಗೆ ನೀರಿನ ಅಭಾವ ತಲೆದೋರಿರುವುದರಿಂದ ಅಕಾಲಿಕವಾಗಿ ಸಾವು ನೋವುಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಕೆರೆಯ ಒಡ್ಡನ್ನು ತುರ್ತಾಗಿ ನಿರ್ಮಿಸುವುದು ಅಗತ್ಯತೆ ಇದೆ.

ಈ ಗುಡ್ಡದ ಪ್ರದೇಶದಲ್ಲಿ ಅನೇಕ ಕಾಡು ಪ್ರಾಣಿಗಳಿವೆ. ಚಿರತೆ, ಕಾಡು ಹಂದಿ, ಕರಡಿ, ವನಗ್ಯಾ, ನರಿ, ತೋಳ, ನವಿಲುಗಳು, ಮೊಲ, ಉಡ ಸೇರಿದಂತೆ ಹಲವಾರು ಜಾತಿಯ ಸರಿಸೃಪಗಳಿವೆ. ಜೊತೆಗೆ ಸಾವಿರಾರು ಬಗೆಯ ಔಷಧೀಯ ಪ್ರಭೇದಗಳುಳ್ಳ ಗಿಡ, ಮರಗಳು ಇವೆ. ಈ ಗಿಡಮರಗಳನ್ನು ಆಶ್ರಯಿಸಿ ನೂರಾರು ಸಂಖ್ಯೆಯಲ್ಲಿ ಕೋತಿಗಳೂ ಇದೇ ಗುಡ್ಡದಲ್ಲಿ ವಾಸ ಮಾಡಿಕೊಂಡಿವೆ. ಈ ಕಾರಣದಿಂದ ಕೊಳ್ಳಿನಕೆರೆಗೆ ಶಿಥಿಲಗೊಂಡು ನಿಂತಿರುವ ಒಡ್ಡನ್ನು ಕೂಡಲೇ ನಿರ್ಮಿಸಿಕೊಡಬೇಕು

ಕೊಪ್ಪಳ ಜಿಲ್ಲಾಡಳಿತದಿಂದ ಶಿಥಿಲಗೊಂಡಿರುವ ಒಡ್ಡನ್ನು ನಿರ್ಮಿಸಿಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ಬರುವ ಅಲ್ಪ ಸ್ವಲ್ಪ ಮಳೆಯಿಂದಾದರೂ ಕೆರೆಯಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಇದರಿಂದ ಜಲಮೂಲ ವೃದ್ಧಿಸುತ್ತದೆ. ಈ ಕೆರೆಯನ್ನೇ ಆಶ್ರಯಿಸಿರುವ ನೂರಾರು ರೈತ ಕುಟುಂಬಗಳಿಗೆ ಕೃಷಿ ಚಟುವಟಿಕೆ ನಡೆಸಲು ನೆರವಾಗುತ್ತದೆ. ಗುಡ್ಡದ ಪರಿಸರದಲ್ಲಿರುವ ಸಾವಿರಾರು ವನ್ಯಜೀವಿಗಳು, ಖಗ, ಪಕ್ಷಿಗಳಿಗೆ ಜೀವಸೆಲೆಯಾಗುತ್ತದೆ. ರಾಜ್ಯ ಸರ್ಕಾರ ಈಗಾಗಲೇ ಬರ ನಿರ್ವಹಣೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಕೆರೆಯ ಒಡ್ಡು ನಿರ್ಮಿಸುವುದರಿಂದ ಈ ಕೆರೆಯಲ್ಲಿ ನೀರು ಸಂಗ್ರಹಗೊ0ಡು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ದನ, ಕರು, ಎಮ್ಮೆಗಳಿಗೂ ನೆರವಾಗಲಿದೆ. ಕಾಡಿನಲ್ಲಿರುವ ಪಶು, ಪಕ್ಷಿಗಳಿಗೂ ಅನುಕೂಲವಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಮತ್ತು ಕೊಪ್ಪಳ ಜಿಲ್ಲಾಡಳಿತ ಈ ಐತಿಹಾಸಿಕ ಕೊಳ್ಳಿನ ಕೆರೆಯ ಒಡ್ಡನ್ನು ತುರ್ತಾಗಿ ನಿರ್ಮಿಸಿಕೊಡುವ ಮೂಲಕ ಬರದ ಛಾಯೆಯಿಂದ ಕಾಡುಪ್ರಾಣಿಗಳು ಮತ್ತು ಜನ, ಜಾನುವಾರುಗಳನ್ನು ರಕ್ಷಿಸಬೇಕೆಂದು ಟಿ.ಟಿ.ಡಿ.ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ವೀರಣ್ಣ ಕೋಮಲಾಪುರ, ಪದಾಧಿಕಾರಿಗಳಾದ ವಸಂತ್ ಮತ್ತು ಪರಶುರಾಮ್ ಸಿಳ್ಳೆಕ್ಯಾತರ್ ಅವರು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada